ಸೋನಾಕ್ಷಿ-ಝಹೀರ್ ಇಖ್ಬಾಲ್ ವಿವಾಹದ ಬಗ್ಗೆ ಖುಷಿಯಿಂದ ಮಾತಾಡಿದ ಶತ್ರುಘ್ನ ಸಿನ್ಹಾ
ಸೋನಾಕ್ಷಿ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರು ಜೂನ್ 23ರಂದು ಮದುವೆ ಆಗಲಿದ್ದಾರೆ ಎಂಬ ಮಾಹಿತಿ ಇದೆ. ಅದೇ ದಿನ ಸಂಜೆ ಬಾಲಿವುಡ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗಾಗಿ ಅದ್ದೂರಿ ಔತಣಕೂಟ ಏರ್ಪಡಿಸಲು ಪ್ಲ್ಯಾನ್ ಮಾಡಲಾಗಿದೆ. ಸೋನಾಕ್ಷಿ ಸಿನ್ಹಾ ಅವರ ಅಂತರ್ಧರ್ಮೀಯ ವಿವಾಹದ ಬಗ್ಗೆ ತಂದೆ ಶತ್ರುಘ್ನ ಸಿನ್ಹಾ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದನ್ನು ಶತ್ರುಘ್ನ ಸಿನ್ಹಾ ತಳ್ಳಿಹಾಕಿದ್ದಾರೆ.
ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ. ನಟ ಝಹೀರ್ ಇಖ್ಬಾಲ್ (Zaheer Iqbal) ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರದ್ದು ಅಂತರ್ಧರ್ಮೀಯ ವಿವಾಹ ಆಗಲಿರುವುದರಿಂದ ಕುಟುಂಬದವರಿಗೆ ಪೂರ್ಣ ಸಮ್ಮತಿ ಇಲ್ಲ ಎಂದು ಕೆಲವರು ಗಾಸಿಪ್ ಹಬ್ಬಿಸಿದ್ದರು. ಅಲ್ಲದೇ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಈ ಮದುವೆಗೆ ಕಾಟಾಚಾರಕ್ಕೆ ಹೋಗಿ ಬರಲಿದ್ದಾರೆ, ಅದು ಕೂಡ ಆಮಂತ್ರಣ ಬಂದರೆ ಮಾತ್ರ ಎಂದು ಗಾಸಿಪ್ ಹಬ್ಬಿತ್ತು. ಆ ಬಗ್ಗೆ ಶತ್ರುಘ್ನ ಸಿನ್ಹಾ (Shatrughan Sinha) ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಮಗಳ ಮದುವೆ ಬಗ್ಗೆ ಅವರು ಖುಷಿಯಿಂದ ಮಾತನಾಡಿದ್ದಾರೆ.
‘ಜೂಮ್’ ಟಿವಿಗೆ ನೀಡಿದ ಸಂದರ್ಶನದಲ್ಲಿ ಶತ್ರುಘ್ನ ಸಿನ್ಹಾ ಅವರು ಮಗಳ ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಖಂಡಿತವಾಗಿ ಮದುವೆಗೆ ಹೋಗುತ್ತೇನೆ. ಯಾಕೆ ಹೋಗಬಾರದು? ಸೋನಾಕ್ಷಿ ಮತ್ತು ಝಹೀರ್ ಒಟ್ಟಿಗೆ ಬಾಳಬೇಕು. ಅವರಿಬ್ಬರ ಜೋಡಿ ತುಂಬ ಚೆನ್ನಾಗಿದೆ’ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ಆ ಮೂಲಕ ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದಾರೆ.
‘ಸುಳ್ಳು ಸುದ್ದಿ ಹಬ್ಬಿಸುವವರು ಈ ಮದುವೆ ಬಗ್ಗೆ ಹತಾಶರಾಗಿದ್ದಾರೆ ಅಷ್ಟೇ. ಅದಕ್ಕಾಗಿ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ. ಈ ಮದುವೆ ಅವರಿಗೆ ಸಂಬಂಧಿಸಿದ್ದಲ್ಲ. ಅಂಥವರೆಲ್ಲ ತಮ್ಮ ತಮ್ಮ ಕೆಲಸ ನೋಡಿಕೊಂಡರೆ ಸಾಕು’ ಎಂದು ಶತ್ರುಘ್ನ ಸಿನ್ಹಾ ಖಡಕ್ ಆಗಿ ಹೇಳಿದ್ದಾರೆ. ಬಾಲಿವುಡ್ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅವರು ಖ್ಯಾತಿ ಗಳಿಸಿದ್ದಾರೆ. ಅವರು ನಟಿಸಿದ ‘ಹೀರಾಮಂಡಿ’ ವೆಬ್ ಸರಣಿ ಇತ್ತೀಚೆಗೆ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ: 90 ಕೆಜಿ ಇದ್ದ ಸೋನಾಕ್ಷಿ ಸಿನ್ಹಾ; 30 ಕೆಜಿ ದೇಹ ತೂಕ ಇಳಿಸಿಕೊಂಡಿದ್ದು ಹೇಗೆ?
ಜೂನ್ 23ರಂದು ಸೋನಾಕ್ಷಿ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರ ಮದುವೆ ನಡೆಯಲಿದೆ ಎಂಬ ಮಾಹಿತಿ ಇದೆ. ಅದೇ ದಿನ ಸಂಜೆ ಬಾಲಿವುಡ್ ಮಂದಿಗೆ ಅದ್ದೂರಿ ಔತಣಕೂಟ ಏರ್ಪಡಿಸಲಾಗುವುದು. ಅದರಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.