
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ನಕಲಿ ಪೋಸ್ಟ್ ಹರಿದಾಡುತ್ತಿದೆ. ಅದನ್ನು ನೋಡಿದ ಅನೇಕರು ಶಿಲ್ಪಾ ಶೆಟ್ಟಿ ಅವರನ್ನು ಕಟುವಾಗಿ ಟೀಕಿಸಲು ಆರಂಭಿಸಿದ್ದಾರೆ. ವೈರಲ್ ಆಗಿರುವ ಪೋಸ್ಟ್ನಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ (Reservation) ಬಗ್ಗೆ ವಿರೋಧಿ ನಿಲುವು ಹೊಂದಿದ್ದಾರೆ ಎಂಬುದನ್ನು ಸೂಚಿಸಲಾಗಿದೆ. ಆದರೆ ಅದು ನಕಲಿ ಪೋಸ್ಟ್ ಆಗಿದ್ದು, ಅದರ ವಿರುದ್ಧ ಶಿಲ್ಪಾ ಶೆಟ್ಟಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ಬಳಸಿ ಹರಿಬಿಡಲಾಗಿರುವ ಮೀಸಲಾತಿ ಕುರಿತಾದ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಮತ್ತು ಕಲ್ಪಿತ ಎಂದು ಶಿಲ್ಪಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘ನನ್ನ ಹೆಸರಿನಲ್ಲಿ ಮೀಸಲಾತಿ ಕುರಿತು ಹರಿದಾಡುತ್ತಿರುವ ನಕಲಿ ಹೇಳಿಕೆಗಳನ್ನು ನೋಡಿ ಆಘಾತವಾಗಿದೆ. ಇದು ಸಂಪೂರ್ಣವಾಗಿ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್. ಇಂತಹ ಹುಸಿ ಸುದ್ದಿಗಳನ್ನು ಯಾರೂ ನಂಬಬೇಡಿ’ ಎಂದು ಮನವಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಇನ್ಸ್ಟಾಗ್ರಾಮ್ ಸ್ಟೋರಿಯ ರೀತಿಯಲ್ಲಿದ್ದ ಸ್ಕ್ರೀನ್ಶಾಟ್ವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿತ್ತು. ಅದರಲ್ಲಿ, ‘ಮೀಸಲಾತಿಯನ್ನು ಮುಟ್ಟಬೇಡಿ. ಸಾಮಾನ್ಯ ವರ್ಗದ ವೈದ್ಯರು ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಿ. ಉಳಿದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಯ ರೋಗಿಗಳಿಗೆ ಚಿಕಿತ್ಸೆ ನೀಡಲಿ. ಹೀಗೆ ಕೆಲವು ವರ್ಷ ಮಾಡಿದರೆ, ಜನರೇ ಮೀಸಲಾತಿಯನ್ನು ರದ್ದುಗೊಳಿಸಲು ಆಗ್ರಹಿಸುತ್ತಾರೆ. ಮೀಸಲಾತಿಯಿಂದ ಕೌಶಲ್ಯ ಗಳಿಸಲು ಸಾಧ್ಯವಿಲ್ಲ’ ಎಂದು ಬರೆಯಲಾಗಿತ್ತು.
ಇದನ್ನೂ ಓದಿ: 50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು, ನಿರಂತರ ಪರಿಶ್ರಮ
ವೃತ್ತಿಜೀವನದ ವಿಚಾರಕ್ಕೆ ಬಂದರೆ, ಶಿಲ್ಪಾ ಶೆಟ್ಟಿ ಇತ್ತೀಚೆಗೆ ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ: ದಿ ಡೆವಿಲ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದ ಮೂಲಕ ಅವರು ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದರು. ನಿರೀಕ್ಷಿತ ಮಟ್ಟದಲ್ಲಿ ‘ಕೆಡಿ’ ಹಿಟ್ ಆಗಲಿಲ್ಲ. ಸದ್ಯಕ್ಕೆ ಶಿಲ್ಪಾ ಶೆಟ್ಟಿ ಅವರು ‘ಮಾ ಹೈ ನಾ’ ರಿಯಾಲಿಟಿ ಕುಕಿಂಗ್ ಶೋನಲ್ಲಿ ನಿರೂಪಕಿಯಾಗಿ ಸಕ್ರಿಯರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.