ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಹಂಚಿಕೆಯ ಗಂಭೀರ ಆರೋಪದಲ್ಲಿ ಜೈಲು ಸೇರಿದ್ದರು. ಕೆಲ ಕಾಲದ ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಗೊಂಡಿದ್ದರು. ರಾಜ್ ಕುಂದ್ರಾ ಜೈಲು ಸೇರಿದ ನಂತರ ಸ್ವಲ್ಪ ಸಮಯದ ಕಾಲ ಮೌನ ತಾಳಿದ್ದ ಶಿಲ್ಪಾ ಶೆಟ್ಟಿ, ನಂತರ ವಾಸ್ತವ ಒಪ್ಪಿಕೊಂಡು, ರಿಯಾಲಿಟಿ ಶೋಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಮರಳಿದ್ದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಜ್ ಕುಂದ್ರಾ ಬಿಡುಗಡೆಯ ನಂತರ ಶಿಲ್ಪಾ ಮತ್ತಷ್ಟು ಸಂತಸದಿಂದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಅದೇಕೋ, ರಾಜ್ ಕುಂದ್ರಾ ಮಾತ್ರ ಸಾರ್ವಜನಿಕ ಜೀವನದ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ. ಶಿಲ್ಪಾ ಹಂಚಿಕೊಂಡ ಹಬ್ಬದ ಚಿತ್ರಗಳಲ್ಲಿ, ಕುಟುಂಬದ ಪ್ರವಾಸದ ಚಿತ್ರಗಳಲ್ಲಿ.. ಅಷ್ಟೇಕೆ, ತಮ್ಮ ಸಾಮಾಜಿಕ ಜಾಲತಾಣಗಳಿಂದಲೂ ರಾಜ್ ಕುಂದ್ರಾ ದೂರ ಉಳಿದಿದ್ದರು. ಇದೀಗ ಅವರು ಸಾಮಾಜಿಕ ಜಾಲತಾಣಗಳ ಖಾತೆಗಳನ್ನೇ ಡಿಲೀಟ್ ಮಾಡಿದ್ದಾರೆ. ಅದರ ಬೆನ್ನಲ್ಲೇ ಶಿಲ್ಪಾ ಹಂಚಿಕೊಂಡ ಸ್ಟೋರಿ ಎಲ್ಲರ ಗಮನ ಸೆಳೆದಿದೆ.
ರಾಜ್ ಕುಂದ್ರಾ ಸಾಮಾಜಿಕ ಜಾಲತಾಣಗಳಿಂದ ದೂರವಾದ ನಂತರ ಶಿಲ್ಪಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪುಸ್ತಕವೊಂದರ ಪುಟವನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಕಂಫರ್ಟ್ ಜೋನ್ನಿಂದ ಹೊರಬರುವ ಕುರಿತು ಬರೆಯಲಾಗಿದೆ. ‘ನೀವು ನಿಮ್ಮ ಕಂಫರ್ಟ್ ಜೋನ್ ಎಂಬ ನಗರವನ್ನು ತ್ಯಜಿಸಿ ಅಂತಃಪ್ರಜ್ಞೆಯತ್ತ ಸಾಗಬೇಕು. ಆಗ ಕಂಡುಕೊಳ್ಳುವುದು ಅದ್ಭುತವಾಗಿರುತ್ತದೆ. ಅಲ್ಲಿ ನಿಮ್ಮನ್ನು ನೀವೇ ಕಂಡುಕೊಳ್ಳುತ್ತೀರಿ’’ ಎಂದು ಬರೆದಿರುವ ಪುಸ್ತಕವೊಂದರ ಪುಟವನ್ನು ಶಿಲ್ಪಾ ಶೇರ್ ಮಾಡಿದ್ದಾರೆ.
ಆ ಪುಸ್ತಕದ ಪುಟದಲ್ಲಿ ಕಂಫರ್ಟ್ ಜೋನ್ನಿಂದ ಹೊರಬರುವ ಅಗತ್ಯತೆಗಳ ಕುರಿತು ಬರೆಯಲಾಗಿದೆ. ‘ನಾವು ಕಂಫರ್ಟ್ ಬೇಕೆಂದು ಯೋಚಿಸುತ್ತೇವೆ. ಅದಕ್ಕಾಗಿ ನಮಗಿರುವ ಸಮಸ್ಯೆಗಳ ಕುರಿತು ದೂರುತ್ತೇವೆ. ಎಲ್ಲವೂ ಸರಿಯಾಗಿರಬೇಕೆಂದೇನೂ ಇಲ್ಲ. ನಮಗೆ ನಮ್ಮ ಬಗ್ಗೆ ತಿಳಿದಿರಬೇಕು ಮತ್ತು ಅದನ್ನು ನಾವು ಒಪ್ಪಿಕೊಳ್ಳಬೇಕು. ನಾವು ಕಂಫರ್ಟ್ ಜೋನ್ನಿಂದ ಹೊರಬಂದರೆ ಏನಾಗುತ್ತದೆ? ಬೇರೊಂದು ದೇಶದಲ್ಲಿ ವಾಸ ಮಾಡಿದರೆ ಬದುಕಿನ ಕುರಿತ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ಒಂದು ದೊಡ್ಡ ಹೊಡೆತ ಅಥವಾ ಒಂದು ಬಹುದೊಡ್ಡ ತಿರುವು ನಾವು ಊಹಿಸದ ಬದಲಾವಣೆ ತರಬಹುದು’ ಎಂದು ಅದರಲ್ಲಿ ಬರೆಯಲಾಗಿದೆ.
‘ನಾನು ಕಂಫರ್ಟ್ ಜೋನ್ನಿಂದ ಹೊರಬರಬೇಕು ಮತ್ತು ಅದರಿಂದಾಗುವ ಪರಿಣಾಮಗಳನ್ನು ನೋಡಬೇಕು. ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕು’ ಎಂದು ಬರಹ ಕೊನೆಯಾಗಿದೆ. ಶಿಲ್ಪಾ ಹಂಚಿಕೊಂಡಿರುವ ಈ ಬರಹ ಮತ್ತು ರಾಜ್ ಕುಂದ್ರಾ ಸಾಮಾಜಿಕ ಜಾಲತಾಣದಿಂದ ಹೊರಹೋದ ಘಟನೆಗೆ ಸಂಬಂಧವಿದೆಯೇ ಎಂದು ಅಭಿಮಾನಿಗಳು ಪ್ರಶ್ನಿಸಿದ್ದು, ಆ ಕುರಿತು ಚರ್ಚೆ ನಡೆಸಿದ್ದಾರೆ. ರಾಜ್ ಕುಂದ್ರಾ ಕಂಫರ್ಟ್ ಜೋನ್ ತ್ಯಜಿಸುವ ತಯಾರಿಯಲ್ಲಿದ್ದಾರೆಯೇ ಎಂದೆಲ್ಲಾ ಚರ್ಚೆಗಳೂ ಹುಟ್ಟಿಕೊಂಡಿವೆ.
ಇವುಗಳ ಹೊರತಾಗಿ ಶಿಲ್ಪಾ ಅಭಿಮಾನಿಗಳು ಸಂತಸಪಡುವ ಸಮಾಚಾರವೊಂದಿದೆ. ಶಿಲ್ಪಾ ಅವರ ಇನ್ಸ್ಟಾಗ್ರಾಂ ಖಾತೆಗೆ ಅನುಯಾಯಿಗಳ ಸಂಖ್ಯೆ 23 ಮಿಲಿಯನ್ ದಾಟಿದೆ. ಇದನ್ನು ಹಂಚಿಕೊಂಡಿರುವ ಶಿಲ್ಪಾ, ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ:
ಜಿಮ್ ಮಾಡೋ ಯುವಕರಿಗೆ ಅಪ್ಪು ನಿಧನದಿಂದ ಶಾಕ್; ದುಃಖದಿಂದ ಹೊರ ಬರುತ್ತಿಲ್ಲ ಅಭಿಮಾನಿಗಳು
KBC 13: ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?