Arijit Singh: ಗುಂಪಿನಲ್ಲಿ ಅರಿಜಿತ್ ಸಿಂಗ್ ಕೈ ಎಳೆದ ಮಹಿಳಾ ಅಭಿಮಾನಿ; ಗಾಯಗೊಂಡ ಗಾಯಕನ ವಿಡಿಯೋ ವೈರಲ್
Arijit Singh Viral Video: ಮಹಿಳಾ ಅಭಿಮಾನಿಯ ಈ ವರ್ತನೆಯಿಂದ ಅರಿಜಿತ್ ಸಿಂಗ್ ಅವರಿಗೆ ತೊಂದರೆ ಆಗಿದೆ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಅವರು ಬುದ್ಧಿ ಹೇಳಿದ್ದಾರೆ.
ಗಾಯಕ ಅರಿಜಿತ್ ಸಿಂಗ್ (Arijit Singh) ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಇದೆ. ಅವರ ಕಂಠಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತಿ ಅರಿಜಿತ್ ಸಿಂಗ್ ಅವರಿಗೆ ಸಲ್ಲುತ್ತದೆ. ಸಿನಿಮಾಗಳಲ್ಲಿ ಹಾಡುವುದರ ಜೊತೆಗೆ ದೇಶದ ವಿವಿಧ ನಗರಗಳಲ್ಲಿ ಅವರು ಸಂಗೀತ ಕಾರ್ಯಕ್ರಮವನ್ನೂ (Arijit Singh live concert) ನಡೆಸಿಕೊಡುತ್ತಾರೆ. ಆಗೆಲ್ಲಾ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರುತ್ತಾರೆ. ಎಲ್ಲರ ಜೊತೆಯೂ ಅರಿಜಿತ್ ಸಿಂಗ್ ಅವರು ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಆದರೆ ಅವರ ಆ ಸ್ವಭಾವವನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ಬೇಸರದ ವಿಚಾರ. ಇತ್ತೀಚೆಗೆ ಔರಂಗಬಾದ್ನಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಅರಿಜಿತ್ ಸಿಂಗ್ ಅವರ ಕೈ ಹಿಡಿದು ಎಳೆದಿದ್ದಾರೆ. ಅದರಿಂದ ಅವರಿಗೆ ಗಾಯ ಆಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅರಿಜಿತ್ ಸಿಂಗ್ ಅವರದ್ದು ಸರಳವಾದ ವ್ಯಕ್ತಿತ್ವ. ಪ್ರತಿ ಬಾರಿ ಸಂಗೀತ ಕಾರ್ಯಕ್ರಮ ನೀಡಿದಾಗಲೂ ಅವರು ಅಭಿಮಾನಿಗಳ ಬಳಿಗೆ ತೆರಳಿ ಮಾತುಕತೆ ನಡೆಸುತ್ತಾರೆ. ಔರಂಗಬಾದ್ನಲ್ಲೂ ಹಾಗೆಯೇ ಆಗಿದೆ. ಒಂದು ಹಾಡು ಹೇಳಿ ಮುಗಿಸಿದ ಬಳಿಕ ಅವರು ವೇದಿಕೆಯ ಅಕ್ಕ-ಪಕ್ಕ ನಿಂತಿದ್ದ ಅಭಿಮಾನಿಗಳನ್ನು ಮಾತನಾಡಿಸಲು ತೆರಳಿದರು. ಆದರೆ ಅಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಜೋರಾಗಿ ಅವರ ಕೈ ಹಿಡಿದು ಎಳೆದರು.
A female audience pulls Arijit’s hand during a live concert in #Aurangabad.#ArijitSingh #music #Bollywood #ArijitSinghLive pic.twitter.com/NPSiwyPnbk
— Arijit Singh Fan (@SinghfanArijit) May 8, 2023
ಅಭಿಮಾನಿಯ ಈ ವರ್ತನೆಯಿಂದ ಅರಿಜಿತ್ ಸಿಂಗ್ ಅವರಿಗೆ ತೊಂದರೆ ಆಗಿದೆ. ಹಾಗಿದ್ದರೂ ಕೂಡ ಅವರು ಕೋಪಗೊಂಡಿಲ್ಲ. ಇಂಥ ವರ್ತನೆ ಸರಿಯಲ್ಲ ಎಂದು ಅವರು ಬುದ್ಧಿ ಹೇಳಿದ್ದಾರೆ. ‘ನಿಮಗೆ ಇದು ಅರ್ಥವಾಗಬೇಕು. ನೀವು ಎಂಜಾಯ್ ಮಾಡುತ್ತಿದ್ದೀರಿ. ನಾನು ಹಾಡು ಹೇಳಲು ಸಾಧ್ಯವಾಗದೇ ಇದ್ದರೆ ನೀವು ಹೇಗೆ ಎಂಜಾಯ್ ಮಾಡುತ್ತೀರಿ? ನೀವು ತಿಳಿವಳಿಕೆ ಇರುವ ವ್ಯಕ್ತಿ. ಹಾಗಿದ್ದರೂ ಕೂಡ ನನ್ನ ಕೈ ಯಾಕೆ ಎಳೆದ್ರಿ? ಈಗ ನನ್ನ ಕೈ ನಡುಗುತ್ತಿದೆ’ ಎಂದು ಅರಿಜಿತ್ ಸಿಂಗ್ ಹೇಳಿದರು.
ಇದನ್ನೂ ಓದಿ: ‘ಒಮ್ಮೆ ನಿಮ್ಮನ್ನು ಮುಟ್ತೀನಿ’: ಕರೀನಾ ಕಪೂರ್ ಎದುರು ಮನವಿ ಮಾಡಿದ ಅಭಿಮಾನಿ: ನಟಿಯ ಪ್ರತಿಕ್ರಿಯೆ ಹೇಗಿತ್ತು?
ತಾವು ಮಾಡಿದ ತಪ್ಪು ಏನೆಂಬುದು ಆ ಮಹಿಳೆಗೆ ಅರ್ಥವಾಯಿತು. ಕೂಡಲೇ ಅವರು ಅರಿಜಿತ್ ಸಿಂಗ್ ಬಳಿ ಕ್ಷಮೆ ಕೇಳಿದರು. ‘ಸೆಲೆಬ್ರಿಟಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಫ್ಯಾನ್ಸ್ ಅರ್ಥ ಮಾಡಿಕೊಳ್ಳಬೇಕು’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ಇಷ್ಟೆಲ್ಲ ಆದರೂ ಕೂಡ ಅರಿಜಿತ್ ಸಿಂಗ್ ಅವರು ತಮ್ಮ ತಾಳ್ಮೆ ಕಳೆದುಕೊಂಡಿಲ್ಲ’ ಎಂದು ಸಹ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ವೇದಿಕೆಯಲ್ಲೇ ಅರಿಜಿತ್ ಸಿಂಗ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಅವರು ಕಾರ್ಯಕ್ರಮ ಮುಂದುವರಿಸಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:24 pm, Mon, 8 May 23