
ಗಾಯಕಿ ಪಲಕ್ ಮುಚ್ಚಲ್ (Palak Muchhal) ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಬಾಲಿವುಡ್ನಲ್ಲಿ ಸಾಕಷ್ಟು ಹಿಟ್ ಗೀತೆಗಳಿಗೆ ಧ್ವನಿ ಆಗಿರುವ ಅವರು ಕನ್ನಡದಲ್ಲೂ ಹಲವು ಹಾಡುಗಳನ್ನು ಹಾಡಿದ್ದಾರೆ. ತಮಿಳು, ತೆಲುಗು, ಮರಾಠಿ, ಭೋಜ್ಪುರಿ, ಪಂಜಾಬಿ, ಉರ್ದು ಮುಂತಾದ ಭಾಷೆಯ ಹಾಡುಗಳು ಕೂಡ ಪಲಕ್ ಮುಚ್ಚಲ್ ಕಂಠದಲ್ಲಿ ಮೂಡಿಬಂದಿವೆ. ಈ ಗಾಯಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ, ಖ್ಯಾತ ಸಂಗೀತ ನಿರ್ದೇಶಕ/ಗಾಯಕ, ಗೀತರಚನಕಾರ ಮಿಥುನ್ ಶರ್ಮಾ (Mithoon Sharma) ಜೊತೆ ಪಲಕ್ ಮುಚ್ಚಲ್ ಮದುವೆ (Palak Muchhal Marriage) ಭಾನುವಾರ (ನ.6) ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ಈ ವಿವಾಹಕ್ಕೆ ಸಾಕ್ಷಿಯಾದರು.
ಹಲವು ವರ್ಷಗಳಿಂದ ಪಲಕ್ ಮುಚ್ಚಲ್ ಮತ್ತು ಮಿಥುನ್ ಶರ್ಮಾ ಪ್ರೀತಿಸುತ್ತಿದ್ದರು. ಬಾಲಿವುಡ್ನಲ್ಲಿ ಮಿಥುನ್ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ‘ಆಶಿಕಿ 2’ ಚಿತ್ರದ ‘ತುಮ್ ಹೀ ಹೋ..’, ‘ಅನ್ವರ್’ ಸಿನಿಮಾ ‘ಮೌಲಾ ಮೇರೆ..’, ‘ಏಕ್ ವಿಲನ್ ಚಿತ್ರದ ‘ಬಂಜಾರ..’ ಸೇರಿದಂತೆ ಹಲವು ಸೂಪರ್ ಹಿಟ್ ಗೀತೆಗಳಿಗೆ ಅವರು ಸಂಗೀತ ನೀಡಿದ್ದಾರೆ. ಈ ಪ್ರತಿಭಾವಂತನ ಜೊತೆ ಪಲಕ್ ಮುಚ್ಚಲ್ ಅವರು ಮದುವೆ ಆಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಪಲಕ್ ಮುಚ್ಚಲ್ ಅವರನ್ನು ಹೃದಯವಂತೆ ಎಂದು ಕರೆದರೆ ಅತಿಶಯೋಕ್ತಿ ಅಲ್ಲ. ಸಾವಿರಾರು ಮಕ್ಕಳಿಗೆ ಅವರು ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಪಲಕ್ ಅವರು, ಅದರಿಂದ ಬಂದ ಹಣದಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುತ್ತಾರೆ. ಈವರೆಗೂ 2,200ಕ್ಕೂ ಹೆಚ್ಚು ಮಕ್ಕಳ ಜೀವ ಉಳಿಸಿದ ಪುಣ್ಯ ಈ ಗಾಯಕಿಗೆ ಸಲ್ಲುತ್ತದೆ. ಸಾವಿರಾರು ಕುಟುಂಬಗಳಿಗೆ ಪಲಕ್ ಮುಚ್ಚಲ್ ಅವರು ದೇವರಾಗಿದ್ದಾರೆ.
ಕನ್ನಡದಲ್ಲಿಯೂ ಪಲಕ್ ಮುಚ್ಚಲ್ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅವರು ಧ್ವನಿ ನೀಡಿದ ‘ಅಯೋಗ್ಯ’ ಸಿನಿಮಾದ ‘ಏನಮ್ಮಿ ಏನಮ್ಮಿ..’ ಹಾಡು ಸೂಪರ್ ಹಿಟ್ ಆಯಿತು. ‘ಅಧ್ಯಕ್ಷ’ ಸಿನಿಮಾದ ‘ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ..’, ‘ಮುಕುಂದಾ ಮುರಾರಿ’ ಚಿತ್ರದ ‘ಗೋಪಾಲ ಬಾ..’ ಸೇರಿದಂತೆ ಹಲವು ಹಾಡುಗಳಿಗೆ ಪಲಕ್ ಮುಚ್ಚಲ್ ಧ್ವನಿ ನೀಡಿದ್ದಾರೆ.
ಮುಂಬೈನಲ್ಲಿ ಪಲಕ್ ಮುಚ್ಚಲ್ ಮತ್ತು ಮಿಥುನ್ ಅವರ ಮದುವೆ ನೆರವೇರಿತು. ಸೋನು ನಿಗಮ್, ಕೈಲಾಶ್ ಖೇರ್, ಸ್ಮೃತಿ ಮಂದಣ್ಣ, ರುಬೀನಾ ದಿಲೈಕ್, ಅಭಿನವ್ ಶುಕ್ಲಾ ಮುಂತಾದ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಪಲಕ್ ಮತ್ತು ವಿಥುನ್ ಅವರಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 am, Mon, 7 November 22