ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರೋ ಭಯ; ‘ಸಿಂಗಂ ಅಗೇನ್’ ಚಿತ್ರದ ಹಲವು ದೃಶ್ಯಗಳಿಗೆ ಕತ್ತರಿ
ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಅಗೇನ್’ ನವೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ 7.12 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಲು ಸೂಚಿಸಿದೆ. ರಾಮಾಯಣದ ಉಲ್ಲೇಖಗಳನ್ನು ಬದಲಾಯಿಸಲು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕ ದೃಶ್ಯಗಳನ್ನು ತೆಗೆದುಹಾಕಲು ಸೂಚಿಸಲಾಗಿದೆ.

‘ಸಿಂಗಂ ಅಗೇನ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ದೀಪಾವಳಿ ಪ್ರಯುಕ್ತ ನವೆಂಬರ್ 1ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರ ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ಜೊತೆ ಕ್ಲ್ಯಾಶ್ ಆಗುತ್ತಿದೆ. ‘ಸಿಂಗಂ ಅಗೇನ್’ ಟ್ರೇಲರ್ ನೋಡಿದವರಿಗೆ ಇದು ಆಧುನಿಕ ‘ರಾಮಾಯಣ’ ನೋಡಿದಂತೆ ಆಗಿದೆ. ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ ಸದ್ಯ ಚಿತ್ರದ ಬಗ್ಗೆ ಅಪಸ್ವರ ತೆಗೆದಿದೆ. ಸಿನಿಮಾದ ಒಟ್ಟಾರೆ ಅವಧಿಯಲ್ಲಿ 7.12 ನಿಮಿಷಕ್ಕೆ ಕತ್ತರಿ ಹಾಕಲು ಸೂಚಿಸಿದೆ.
ರಾಮ, ಸೀತೆ, ಹನುಮಂತನು ಸಿಂಗಂ ಜೊತೆ ಇರುವ ದೃಶ್ಯ ಬದಲಿಸಲು ಸೂಚಿಸಲಾಗಿದೆ. ಶ್ರೀರಾಮನ ಜೊತೆ ಸಿಂಗಂ ಇರುವುದು ಮತ್ತು ಕಾಲನ್ನು ಸ್ಪರ್ಶಿಸಿ ನಮಸ್ಕರಿಸುವ ದೃಶ್ಯ ಬದಲಾವಣೆಗೂ ಸೂಚನೆ ನೀಡಲಾಗಿದೆ. ರಾವಣನು ಸೀತೆಯನ್ನು ಎಳೆಯುವುದು, ತಳ್ಳುವ ದೃಶ್ಯವಿದ್ದು ಅದನ್ನು ತೆಗೆದು ಹಾಕುವಂತೆ ನಿರ್ದೇಶಿಸಲಾಗಿದೆ. ಹನುಮಂತ ಲಂಕೆಯನ್ನು ಸುಡೋದು, ಸಿಂಬಾನ ಫ್ಲರ್ಟಿಂಗ್ ಡೈಲಾಗ್ ಡಿಲೀಟ್ ಮಾಡಲು ಸೂಚಿಸಲಾಗಿದೆ. ಅಂತಾರಾಷ್ಟ್ರೀಯ ಸಂಬಂಧ ಹಾಳು ಮಾಡುವ ಸಂಭಾಷಣೆ ಇದ್ದು ಅದನ್ನು ತೆಗೆಯುವಂತೆ ನಿರ್ದೇಶಿಸಲಾಗಿದೆ.
‘ಸಿಂಗಂ ಅಗೇನ್’ ಚಿತ್ರದ ಒಂದಷ್ಟು ಶೂಟ್ ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾದ ಸಂಬಂಧಕ್ಕೆ ಹಾನಿ ಉಂಟು ಮಾಡುವ ಡೈಲಾಗ್ ಇಲ್ಲಿದೆ ಎನ್ನಲಾಗಿದೆ. ‘ಇದು ಸಂಪೂರ್ಣವಾಗಿ ಫಿಕ್ಷನ್ ಆಧಾರಿತ ಸಿನಿಮಾ’ ಎಂಬುದನ್ನು ಉಲ್ಲೇಖಿಸಲು ಸೂಚಿಸಲಾಗಿದೆ. ಈ ಸಿನಿಮಾದ ಕಥೆಯ ಎಳೆ ರಾಮಾಯಣವನ್ನು ಆಧರಿಸಿದೆಯಾದರೂ ಅದನ್ನು ಎಲ್ಲಿಯೂ ಉಲ್ಲೇಖಿಸಬಾರದು ಎಂದು ಹೇಳಿದೆ.
ಇದನ್ನೂ ಓದಿ: ‘ಸಿಂಗಂ ಅಗೇನ್’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ನಲ್ಲಿ ಸಿಂಹಪಾಲು; ಉಳಿದ ಸಿನಿಮಾಗಳಿಗೆ ಸಂಕಷ್ಟ
ಈ ರೀತಿಯ ಕತ್ತರಿ ಪ್ರಯೋಗದ ಬಳಿಕ ‘ಸಿಂಗಂ ಅಗೇನ್’ ಚಿತ್ರದ ಅವಧಿ 2 ಗಂಟೆ 24 ನಿಮಿಷ ಇದೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಜಾಕಿ ಶ್ರಾಫ್ ಇದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರ ಕಾಪ್ ಯೂನಿವರ್ಸ್ ಅಡಿಯಲ್ಲಿ ಮೂಡಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




