
ನಟಿ ಕೃತಿ ಸನನ್ (Kriti Sanon) ಅಭಿನಯದ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ನ ರಕ್ಷಾ ಬಂಧನ (Raksha Bandhan) ಜಾಹೀರಾತು ವಿವಾದಕ್ಕೆ ಸಿಲುಕಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕ ಸೋನು ನಿಗಮ್ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆದರೆ, ಆ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಗಾಯಕ ಸೋನು ನಿಗಮ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದ ಕೆಲ ವರದಿಗಳಲ್ಲಿ ಕೃತಿ ಸನನ್ ಅವರ ಜಾಹೀರಾತಿನ ಕುರಿತು ಸೋನು ನಿಗಮ್ (Sonu Nigam) ಪ್ರತಿಕ್ರಿಯಿಸಿದ್ದಾರೆ ಎಂದು ಸುದ್ದಿ ಪ್ರಕಟಿಸಲಾಗಿತ್ತು. ‘ಎಕ್ಸ್’ (ಟ್ವಿಟರ್) ಖಾತೆಯೊಂದರ ಪೋಸ್ಟ್ ಆಧರಿಸಿ ಈ ವರದಿಗಳನ್ನು ಮಾಡಲಾಗಿತ್ತು.
ಈ ಕುರಿತು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಳ್ಳು ಸುದ್ದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಸೋನು ನಿಗಮ್, ‘ಇದು ನಾನಲ್ಲ, ನಾನು ಎಂದಿಗೂ ಇಂತಹ ಪೋಸ್ಟ್ ಹಾಕಿಲ್ಲ’ ಎಂದು ಬರೆದುಕೊಂಡಿದ್ದಾರೆ. ತಾವು ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲೇ ಇಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಅವರು ಸ್ಪಷ್ಟನೆ ನೀಡಿದ್ದರು.
ಸೋನು ನಿಗಮ್ ಸಿಂಗ್ ಎಂಬ ಹೆಸರಿನ ಮತ್ತೊಬ್ಬ ವ್ಯಕ್ತಿಯ ‘ಎಕ್ಸ್’ ಖಾತೆಯಿಂದ ಈ ಪೋಸ್ಟ್ ಪ್ರಕಟವಾಗಿತ್ತು. ಗಾಯಕ ಸೋನು ನಿಗಮ್ ಸ್ಪಷ್ಟನೆ ನೀಡಿದ ನಂತರ, ಸೋನು ನಿಗಮ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದು, ‘ಈ ಪೋಸ್ಟ್ ನನ್ನ ಖಾತೆಯಿಂದ ಬಂದಿದೆ. ಒಂದೇ ಹೆಸರಿನ ಪ್ರಸಿದ್ಧ ವ್ಯಕ್ತಿಗಳಿಗೆ ಹೇಳಿಕೆಗಳನ್ನು ಜೋಡಿಸುವ ಮೊದಲು ಮಾಧ್ಯಮಗಳು ಮೂಲ ಖಾತೆಯನ್ನು ಸರಿಯಾಗಿ ಪರಿಶೀಲಿಸಬೇಕು’ ಎಂದು ಮನವಿ ಮಾಡಿದ್ದಾರೆ.
ರಕ್ಷಾ ಬಂಧನಕ್ಕಾಗಿ ಜಿವಾ ಬ್ರ್ಯಾಂಡ್ 36 ಸೆಕೆಂಡುಗಳ ಜಾಹೀರಾತನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕೃತಿ ಸನನ್ ಸಾಂಪ್ರದಾಯಿಕ ಉಡುಪಿನ ಬದಲು ಬ್ರಾಲೆಟ್ ಶೈಲಿಯ ಬ್ಲೌಸ್ ಧರಿಸಿ, ತಮ್ಮ ಸಹೋದರ ಮತ್ತು ಸಾಕು ನಾಯಿಗೆ ರಾಖಿ ಕಟ್ಟುವುದನ್ನು ತೋರಿಸಲಾಗಿತ್ತು. ಸಾಕುಪ್ರಾಣಿಗಳೂ ಕುಟುಂಬದ ಭಾಗವೇ ಎಂಬ ಸಂದೇಶ ನೀಡಲು ಸಂಸ್ಥೆ ಯತ್ನಿಸಿತ್ತಾದರೂ, ಕೃತಿ ಅವರ ಉಡುಪು ಮತ್ತು ಹಬ್ಬವನ್ನು ಬಿಂಬಿಸಿದ ರೀತಿಯ ವಿರುದ್ಧ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ: ಟ್ರೋಲ್ಗೆ ಮಣಿದ ಆಭರಣ ಸಂಸ್ಥೆ: ಕೃತಿ ಸನನ್ ರಕ್ಷಾ ಬಂಧನ ಜಾಹೀರಾತು ಡಿಲೀಟ್
ಜನರ ವಿರೋಧ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿವಾ ಸಂಸ್ಥೆಯು ಈ ಜಾಹೀರಾತನ್ನು ಎಲ್ಲಾ ವೇದಿಕೆಗಳಿಂದ ಹಿಂಪಡೆದಿದೆ. ಭಾರತೀಯ ಹಬ್ಬಗಳು ಹಾಗೂ ಸಂಸ್ಕೃತಿಗೆ ನಾವು ಅಪಾರ ಗೌರವ ನೀಡುತ್ತೇವೆ ಮತ್ತು ಸಾಕುಪ್ರಾಣಿಗಳನ್ನು ಸಂಭ್ರಮದಲ್ಲಿ ಸೇರಿಸಿಕೊಳ್ಳುವ ಉದ್ದೇಶ ಮಾತ್ರ ನಮ್ಮದಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.