ಅರಿಜಿತ್ಗೆ ಪದ್ಮಶ್ರೀ, ಸೋನು ನಿಗಮ್ಗೆ ಹೊಟ್ಟೆ ಉರಿ? ವಿಡಿಯೋದಲ್ಲೇನಿದೆ?
Sonu Nigam: ಕೆಲ ದಿನಗಳ ಹಿಂದೆಯಷ್ಟೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳ ಘೋಷಣೆ ಮಾಡಿದೆ. ಅದರಲ್ಲಿ ಗಾಯಕ ಅರಿಜಿತ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದೆ. ಆದರೆ ಭಾರತದ ಮತ್ತೊಬ್ಬ ಖ್ಯಾತ ಗಾಯಕ ಸೋನು ನಿಗಂಗೆ ಇದು ಇಷ್ಟವಾದಂತಿಲ್ಲ. ವಿಡಿಯೋ ಮಾಡಿರುವ ಸೋನು ನಿಗಂ, ಹಿರಿಯ ಗಾಯಕರು ಯಾರು ಯಾರಿಗೆ ಈವರೆಗೆ ಒಂದೂ ಪದ್ಮ ಪ್ರಶಸ್ತಿ ಬಂದಿಲ್ಲ ಎಂಬುದನ್ನು ಹೇಳಿದ್ದಾರೆ.
![ಅರಿಜಿತ್ಗೆ ಪದ್ಮಶ್ರೀ, ಸೋನು ನಿಗಮ್ಗೆ ಹೊಟ್ಟೆ ಉರಿ? ವಿಡಿಯೋದಲ್ಲೇನಿದೆ?](https://images.tv9kannada.com/wp-content/uploads/2025/01/sonu-nigam-arijith-singh.jpg?w=1280)
ಕೆಲವು ದಿನಗಳ ಹಿಂದಷ್ಟೆ ಕೇಂದ್ರ ಸರ್ಕಾರ ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳ ಘೋಷಣೆ ಮಾಡಿದೆ. 7 ಮಂದಿಗೆ ಪದ್ಮವಿಭೂಷಣ, 19 ಮಂದಿಗೆ ಪದ್ಮ ಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಈ ಪ್ರಶಸ್ತಿಗಳ ಘೋಷಣೆ ಮಾಡಲಾಗಿತ್ತು. ಪದ್ಮ ಪ್ರಶಸ್ತಿಗಳಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಆರಂಭಿಕ ಹಂತದ್ದಾಗಿದ್ದು ಕೆಲವು ಯುವ ಅಥವಾ ಮಧ್ಯಮ ವಯಸ್ಕ ಸಾಧಕರಿಗೂ ಇದನ್ನು ನೀಡಲಾಗಿದೆ. ಈ ಹಿಂದೆಯೂ ನೀಡಲಾಗಿತ್ತು. ಈ ಬಾರಿ 113 ಮಂದಿ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದ್ದು, ಅವರಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್ ಸಹ ಒಬ್ಬರು. ಆದರೆ ಅರಿಜಿತ್ಗೆ ಪದ್ಮ ಪ್ರಶಸ್ತಿ ಸಿಕ್ಕಿರುವುದು ಮತ್ತೊಬ್ಬ ಖ್ಯಾತ ಗಾಯಕ ಸೋನು ನಿಗಮ್ಗೆ ಸರಿಹೋದಂತಿಲ್ಲ. ಇದಕ್ಕೆ ಸಾಕ್ಷಿಯೆಂದರೆ ಅವರು ಮಾಡಿ ಹಂಚಿಕೊಂಡಿರುವ ವಿಡಿಯೋ.
ಅರಿಜಿತ್ ಸಿಂಗ್ಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಆದ ಬೆನ್ನಲ್ಲೆ. ಭಾರತದ ಯಾವ ಯಾವ ಗಾಯಕರಿಗೆ ಪದ್ಮ ಪ್ರಶಸ್ತಿಗಳು ಬಂದಿಲ್ಲ ಎಂಬ ಪಟ್ಟಿಯನ್ನು ಸೋನು ನಿಗಮ್ ಅವರು ವಿಡಿಯೋ ಒಂದರಲ್ಲಿ ಕೊಟ್ಟಿದ್ದಾರೆ. ಆ ಮೂಲಕ ಪರೋಕ್ಷವಾಗಿ ಅಂಥಹಾ ಮಹಾನ್ ಗಾಯಕರಿಗೆ, ಹಿರಿಯ ಗಾಯಕರಿಗೆ ನೀಡಲಾಗದೇ ಇರುವ ಪದ್ಮಶ್ರೀ ಪ್ರಶಸ್ತಿ, ಕೆಲವೇ ವರ್ಷಗಳ ಹಿಂದೆ ಬಂದಿರುವ ಅರಿಜಿತ್ ಸಿಂಗ್ಗೆ ನೀಡಲಾಗಿದೆ ಎಂದಿದ್ದಾರೆ.
ವಿಡಿಯೋನಲ್ಲಿ ಮಾತನಾಡಿರುವ ಸೋನು ನಿಗಮ್ ಇಡೀ ವಿಶ್ವದ ಗಾಯಕರಿಗೆ ಸ್ಪೂರ್ತಿ ತುಂಬಿರುವ ಇಬ್ಬರು ಗಾಯಕರಿದ್ದಾರೆ. ಅವರಲ್ಲಿ ಒಬ್ಬರನ್ನು ಪದ್ಮಶ್ರೀಗೆ ಸೀಮಿತ ಮಾಡಲಾಗಿದೆ ಅದುವೇ ಮೊಹಮ್ಮದ್ ರಫಿ. ಇನ್ನೊಬ್ಬ ಗಾಯಕರಿಗೆ ಪದ್ಮಶ್ರೀ ಸಹ ಬಂದಿಲ್ಲ ಅವರೇ ಕಿಶೋರ್ ಕುಮಾರ್’ ಎಂದಿದ್ದಾರೆ ಸೋನು ನಿಗಮ್. ಮುಂದುವರೆದು ಇನ್ನೂ ಕೆಲವು ಗಾಯಕರ ಪಟ್ಟಿಯನ್ನು ನೀಡಿದ್ದಾರೆ. ‘ಅಲ್ಕಾ ಯಾಗ್ನಿಕ್ ಅವರ ವೃತ್ತಿ ಬಹಳ ಸುದೀರ್ಘವಾದುದು ಮತ್ತು ಅದ್ಭುತವಾದುದು ಆದರೆ ಅವರಿಗೆ ಈ ವರೆಗೆ ಏನೂ ಸಿಕ್ಕಿಲ್ಲ. ಶ್ರೆಯಾ ಘೋಷಾಲ್ ಅವರು ಸಹ ಹಲವಾರು ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದಾರೆ ಅವರಿಗೂ ಪದ್ಮ ಪ್ರಶಸ್ತಿ ಸಿಗಬೇಕಿದೆ. ಸುನಿಧಿ ಚೌಹಾಣ್ ಅವರೂ ಸಹ ಇಡೀ ಒಂದು ತಲೆಮಾರಿನ ಗಾಯಕರಿಗೆ ಸ್ಪೂರ್ತಿ ತುಂಬಿದ್ದಾರೆ ಅವರಿಗೂ ಯಾವ ಪ್ರಶಸ್ತಿಯೂ ಸಿಕ್ಕಿಲ್ಲ ಅವರಿಗೂ ಸಿಗಬೇಕು’ ಎಂದಿದ್ದಾರೆ.
ಇದನ್ನೂ ಓದಿ:‘ಆ ಹಾಡನ್ನು ನಾನು ಹಾಡಬೇಕಿತ್ತು’; ಬೇಸರ ಮಾಡಿಕೊಂಡ ಸೋನು ನಿಗಮ್
‘ಯಾವುದೇ ಕ್ಷೇತ್ರದಲ್ಲೇ ಆಗಿರಲಿ. ಅದು ಗಾಯನ, ನಟನೆ, ಕ್ರೀಡೆ, ವಿಜ್ಞಾನ, ಸಾಹಿತ್ಯ ಯಾವುದೇ ಆಗಿರಲಿ. ಅರ್ಹರಿಗೆ ಗೌರವ ಸಿಗಬೇಕು. ಬೇರೆ ಯಾವ ಪ್ರಮುಖರಿಗೆ ಗೌರವ ಸಿಕ್ಕಿಲ್ಲ ಎಂದು ನಿಮಗೆ ಅನ್ನಿಸುತ್ತದೆಯೋ ಅವರ ಹೆಸರನ್ನು ಈ ವಿಡಿಯೋದ ಕೆಳಗೆ ಕಮೆಂಟ್ನಲ್ಲಿ ಹಾಕಿ, ನಮ್ಮ ಜ್ಞಾನ ಹೆಚ್ಚಿಸಿ’ ಎಂದು ಸೋನು ನಿಗಮ್ ಹೇಳಿದ್ದಾರೆ.
ಸೋನು ನಿಗಮ್ ಹೇಳಿರುವಂತೆ ಗಾಯನ ಕ್ಷೇತ್ರದಲ್ಲಿ ಹಲವು ದಿಗ್ಗಜರಿದ್ದಾರೆ ಅವರಿಗೆ ಇನ್ನೂ ಯಾವುದೇ ಗೌರವ, ಪ್ರಶಸ್ತಿಗಳು ಲಭಿಸಿಲ್ಲ. ಅದರಲ್ಲೂ ಗಾಯಕಿಯರನ್ನಂತೂ ಸರ್ಕಾರ ದಿವ್ಯವಾಗಿ ನಿರ್ಲಕ್ಷ್ಯ ಮಾಡಿದೆ. ಅರಿಜಿತ್ ಸಿಂಗ್ ಬಹಳ ಒಳ್ಳೆಯ ಗಾಯಕ, ಸಾವಿರಾರು ಮಂದಿಗೆ ಅವರು ಸ್ಪೂರ್ತಿ ತುಂಬಿದ್ದಾರೆ ಎಂಬುದು ನಿಜ ಆದರೆ ಅವರಿಗಿಂತಲೂ ಹಿರಿಯರು ಅವರಿಗಿಂತಲೂ ಪ್ರತಿಭಾವಂತರೂ ಆದ ಹಲವು ಗಾಯಕಿಯರಿದ್ದಾಗ ಅವರನ್ನು ನಿರ್ಲಕ್ಷ್ಯ ಮಾಡಿರುವುದು ಹೇಯ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ