‘ದೇವರು ಅಷ್ಟೊಂದು ಐಶ್ವರ್ಯ ಕೊಟ್ಟಿದಾನಲ್ಲ’; ಸಂಜಯ್ ಕಪೂರ್ ಆಸ್ತಿ ವಿವಾದದಲ್ಲಿ ಕೋರ್ಟ್ ಅಭಿಪ್ರಾಯ

ಸಂಜಯ್ ಕಪೂರ್ ಅವರ 30,000 ಕೋಟಿ ರೂಪಾಯಿ ಆಸ್ತಿ ವಿವಾದ ಕುಟುಂಬದಲ್ಲಿ ಭುಗಿಲೆದ್ದಿದೆ. ಕರಿಷ್ಮಾ ಕಪೂರ್ ಅವರ ಮಕ್ಕಳು, ಸಂಜಯ್ ಅವರ ತಾಯಿ ಮತ್ತು ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ನಡುವೆ ಆಸ್ತಿಗಾಗಿ ಕಲಹ ನಡೆಯುತ್ತಿದೆ. ಈ ಪ್ರಕರಣ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, "ದೇವರು ಅಷ್ಟೊಂದು ಐಶ್ವರ್ಯ ಕೊಟ್ಟಿದಾನಲ್ಲ, ಅದನ್ನು ಸಾಮರಸ್ಯದಿಂದ ಹಂಚಿಕೊಳ್ಳಿ" ಎಂದು ಸಲಹೆ ನೀಡಿದೆ.

‘ದೇವರು ಅಷ್ಟೊಂದು ಐಶ್ವರ್ಯ ಕೊಟ್ಟಿದಾನಲ್ಲ’; ಸಂಜಯ್ ಕಪೂರ್ ಆಸ್ತಿ ವಿವಾದದಲ್ಲಿ ಕೋರ್ಟ್ ಅಭಿಪ್ರಾಯ
ಸಂಜಯ್ ಕಪೂರ್ ಕುಟುಂಬ

Updated on: Feb 11, 2026 | 12:05 PM

ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರ 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಯಾರಿಗೆ ಸೇರಬೇಕು ಎಂಬ ವಿಷಾಯದಲ್ಲಿ ವಿವಾದ ಭುಗಿಲೆದ್ದಿದೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕರಿಷ್ಮಾ ಹಾಗೂ ಸಂಜಯ್ ವಿಚ್ಛೇದನ ಪಡೆದು ಬೇರೆ ಆಗಿದ್ದರು. ಸಂಜಯ್ ನಿಧನದ ಬಳಿಕ ಕರಿಷ್ಮಾ ಮಕ್ಕಳು, ತಮಗೂ ಆಸ್ತಿಯಲ್ಲಿ ಭಾಗ ಬೇಕು ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಕೋರ್ಟ್ ಪ್ರಮುಖ ಸಲಹೆ ನೀಡಿದ್ದಾರೆ.

ಕಳೆದ ವರ್ಷ ಲಂಡನ್‌ನಲ್ಲಿ ಪೋಲೋ ಆಡುವಾಗ ಸಂಜಯ್ ಕಪೂರ್ ನಿಧನರಾದರು. ಅಂದಿನಿಂದ, ಅವರ ಆಸ್ತಿಗಾಗಿ ಕುಟುಂಬದ ನಡುವೆ ವಿವಾದ ಉಂಟಾಗಿದೆ. ಸಂಜಯ್ ತಾಯಿ ರಾಣಿ ಕಪೂರ್, ಮಾಜಿ ಪತ್ನಿ ಕರಿಷ್ಮಾ ಕಪೂರ್, ಕರಿಷ್ಮಾ-ಸಂಜಯ್ ಅವರ ಇಬ್ಬರು ಮಕ್ಕಳು ಮತ್ತು ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಕಪೂರ್ ಆಸ್ತಿಗಾಗಿ ಜಗಳವಾಡುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ, ದೆಹಲಿ ಹೈಕೋರ್ಟ್ ಇಡೀ ವಿವಾದವನ್ನು ಅತ್ಯಂತ ದುಃಖಕರ ಪರಿಸ್ಥಿತಿ ಎಂದು ಕರೆದಿದೆ. ಅದೇ ರೀತಿ, ಕುಟುಂಬವು ಮಧ್ಯಸ್ಥಿಕೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದೆ.

ಸಂಜಯ್ ಓರ್ವ ದೊಡ್ಡ ಉದ್ಯಮಿ. ಅವರು ಸೋನಾ ಕಾಮ್ಸ್ಟಾರ್ ಕಂಪನಿಯ ಮುಖ್ಯಸ್ಥರಾಗಿದ್ದರು. ಜೂನ್‌ನಲ್ಲಿ ಪೋಲೋ ಆಡುವಾಗ ಹೃದಯಾಘಾತದಿಂದ ಅವರು ನಿಧನರಾದರು. ಸಂಜಯ್ ಅವರ ಸಂಪತ್ತು 30,000 ಕೋಟಿ ರೂಪಾಯಿಗಳಷ್ಟಿದೆ ಎಂದು ಹೇಳಲಾಗುತ್ತದೆ. ಈ ಆಸ್ತಿಗಾಗಿ ಕಿತ್ತಾಟ ನಡೆಯುತ್ತಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಮಿನಿ ಪುಷ್ಕರನ್, ‘ಈ ವಿವಾದದಿಂದಾಗಿ ಇಡೀ ಕುಟುಂಬವು ಮಾನಸಿಕ ಮತ್ತು ಭಾವನಾತ್ಮಕ ಹಾನಿಯನ್ನು ಅನುಭವಿಸುತ್ತಿದೆ. ದೇವರು ಕುಟುಂಬಕ್ಕೆ ಅಷ್ಟೊಂದು ಸಂಪತ್ತನ್ನು ನೀಡಿದ್ದಾನೆ, ಆಂತರಿಕ ವಿವಾದಗಳಲ್ಲಿ ಅದನ್ನು ವ್ಯರ್ಥ ಮಾಡುವ ಬದಲು ಎಲ್ಲರೂ ಸಾಮರಸ್ಯದಿಂದ ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿದೆ.

ಇದನ್ನೂ ಓದಿ: ಕರಿಷ್ಮಾ ಕಪೂರ್ ಮಾಜಿ ಪತಿ ಸಾವಿಗೆ ಕಾರಣ ಆಯ್ತು ಜೇನು ನೊಣ?

2016ರಲ್ಲಿ ಕರಿಷ್ಮಾ ಕಪೂರ್ ಅವರಿಗೆ ವಿಚ್ಛೇದನ ನೀಡಿದ ನಂತರ, ಸಂಜಯ್ 2017ರಲ್ಲಿ ಮಾಡೆಲ್ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು. ಸಂಜಯ್ ಮರಣದ ನಂತರ, ಕರಿಷ್ಮಾ ತನ್ನ ಇಬ್ಬರು ಮಕ್ಕಳ ಪರವಾಗಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯಲ್ಲಿ ಪ್ರಿಯಾ ಸಚ್‌ದೇವ್ ವಿರುದ್ಧ ಕೆಲವು ಆರೋಪಗಳನ್ನು ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us