ಸ್ವರಾ ಭಾಸ್ಕರ್-ಫಹಾದ್ ಅಹ್ಮದ್ಗೆ ಹೆಣ್ಣು ಮಗು; ರಾಬಿಯಾ ಎಂದು ಹೆಸರಿಟ್ಟ ದಂಪತಿ
ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಮುಖ ತೋರಿಸಿಲ್ಲ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಈ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮಗುವಿಗೆ ರಾಬಿಯಾ ಎಂದು ಹೆಸರು ಇಡಲಾಗಿದೆ. ಪುತ್ರಿಯ ಜೊತೆ ಸ್ವರಾ ಭಾಸ್ಕರ್ ಹಂಚಿಕೊಂಡಿರುವ ಈ ಫೋಟೋಗಳು ವೈರಲ್ ಆಗಿವೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಅವರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಿದೆ. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಆಗಮನದಿಂದ ಸ್ವರಾ ಭಾಸ್ಕರ್ ಅವರು ಖುಷಿಯಾಗಿದ್ದಾರೆ. ಪತಿ ಫಹಾದ್ ಅಹ್ಮದ್ (Fahad Ahmad) ಜೊತೆ ಸೇರಿ ಈ ಖುಷಿಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಹೆಣ್ಣು ಮಗುವಿಗೆ (Baby Girl) ರಾಬಿಯಾ ಎಂದು ಈ ದಂಪತಿ ನಾಮಕರಣ ಮಾಡಿದ್ದಾರೆ. ಜೊತೆಗೆ ಮಗುವಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಆದರೆ ಮುಖ ತೋರಿಸಿಲ್ಲ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮಗುವಿನ ಜೊತೆ ಈ ದಂಪತಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
‘ಒಂದು ಪ್ರಾರ್ಥನೆ ಕೇಳಿಸಿತು. ಒಂದು ಆಶೀರ್ವಾದ ಸಿಕ್ಕಿತು. ಒಂದು ಹಾಡು ಗುನುಗಿತು. ನಮ್ಮ ಮಗಳು ರಾಬಿಯಾ ಸೆಪ್ಟೆಂಬರ್ 23ರಂದು ಜನಿಸಿದಳು. ನಿಮ್ಮೆಲ್ಲರ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು. ನಮಗೆ ಇದು ಹೊಸ ಜಗತ್ತು’ ಎಂದು ಸ್ವರಾ ಭಾಸ್ಕರ್ ಅವರು ಪೋಸ್ಟ್ ಮಾಡಿದ್ದಾರೆ. ನೀನಾ ಗುಪ್ತಾ, ಗೌಹರ್ ಖಾನ್, ತಿಲೋತ್ತಮ ಶೋಮೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡುವ ಮೂಲಕ ಸ್ವರಾ ಭಾಸ್ಕರ್ಗೆ ಅಭಿನಂದನೆ ತಿಳಿಸಿದ್ದಾರೆ.
View this post on Instagram
ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ಸ್ವರಾ ಭಾಸ್ಕರ್ ನಟಿಸಿದ್ದಾರೆ. ತಮ್ಮ ನೇರ ನಡೆ-ನುಡಿಯ ಸ್ವಭಾವದಿಂದ ಅವರು ಗುರುತಿಸಿಕೊಂಡಿದ್ದಾರೆ. ಮದುವೆ ಬಳಿಕ ಅವರು ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಅವರದ್ದು ಅಂತರ್ ಧರ್ಮೀಯ ವಿವಾಹ. ಆ ಕಾರಣಕ್ಕಾಗಿ ಅನೇಕರು ಈ ಜೋಡಿಯನ್ನು ಟೀಕೆ ಮಾಡಿದ್ದರು. ಎಲ್ಲವನ್ನೂ ಎದುರಿಸಿ ಈ ದಂಪತಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.
ಫ್ರಿಡ್ಜ್, ಸೂಟ್ಕೇಸ್, ಅಕ್ರಮ ಮದುವೆ, ಮತಾಂತರ ಎಂದವರಿಗೆ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯೆ
ಫಹಾದ್ ಅಹ್ಮದ್ ಅವರು ಸಮಾಜವಾದಿ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ಜೊತೆ ಅವರಿಗೆ ಪ್ರೀತಿ ಚಿಗುರಿತು. 2023ರ ಫೆಬ್ರವರಿಯಲ್ಲಿ ಅವರಿಬ್ಬರು ಕೋರ್ಟ್ ಮ್ಯಾರೇಜ್ ಮಾಡಿಕೊಂಡರು. ನಂತರ ಮಾರ್ಚ್ನಲ್ಲಿ ಹಳದಿ, ಸಂಗೀತ್, ಆರತಕ್ಷತೆ ಸೇರಿ ಅನೇಕ ಸಮಾರಂಭಗಳನ್ನು ಈ ದಂಪತಿ ಹಮ್ಮಿಕೊಂಡಿದ್ದರು. ಜೂನ್ ತಿಂಗಳಲ್ಲಿ ತಾವು ಗರ್ಭಿಣಿ ಎಂಬ ಸುದ್ದಿಯನ್ನು ಸ್ವರಾ ನೀಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಖುಷಿಪಟ್ಟಿದ್ದರು. ಈಗ ಅವರು ತಾಯಿ ಆಗಿದ್ದಾರೆ. ಇನ್ನೂ ಒಂದಷ್ಟು ತಿಂಗಳ ಕಾಲ ಅವರು ಮಗುವಿನ ಆರೈಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ನಂತರ ನಟನೆಗೆ ಮರಳುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:56 pm, Mon, 25 September 23