ನಟಿ ತಾಪ್ಸಿ ಪನ್ನು ಅವರು ಸಿನಿಮಾ ಜೊತೆ ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿ ಆಗುತ್ತಾರೆ. ತಾಪ್ಸಿ ಪನ್ನು ಅವರು ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ (Mathias Boe) ಜೊತೆ ಪ್ರೀತಿಯಲ್ಲಿದ್ದಾರೆ. ಈ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇವರು ಶೀಘ್ರವೇ ಹಸೆಮಣೆ ಏರಲಿದ್ದಾರೆ ಎನ್ನಲಾಗಿತ್ತು. ಈ ವಿಚಾರವಾಗಿ ತಾಪ್ಸಿ ಪನ್ನು ಮಾತನಾಡಿದ್ದಾರೆ. ‘ನನ್ನ ವೈಯಕ್ತಿಕ ವಿಚಾರದಲ್ಲಿ ನಾನು ಎಂದಿಗೂ ಸ್ಪಷ್ಟನೆ ನೀಡಲ್ಲ’ ಎಂದಿದ್ದಾರೆ ಅವರು.
ತಾಪ್ಸಿ ಪನ್ನು ಅವರು ಈ ವರ್ಷ ಮಾರ್ಚ್ ತಿಂಗಳಲ್ಲಿ ಮಥಾಯಸ್ ಬೋ ಅವರನ್ನು ಮದುವೆ ಆಗಲಿದ್ದಾರೆ ಎಂದು ವರದಿ ಆಗಿತ್ತು. ಅಷ್ಟೇ ಅಲ್ಲ, ಸಿಖ್ ಹಾಗೂ ಕ್ರೈಸ್ತ ಸಮುದಾಯದ ಸಂಪ್ರದಾಯದಂತೆ ಈ ವಿವಾಹ ನೆರವೇರಲಿದೆ ಎಂದು ವರದಿ ಆಗಿತ್ತು. ಇವರು ಮದುವೆಗೆ ಉದಯಪುರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕೂಡ ವರದಿಯಲ್ಲಿ ಹೇಳಲಾಗಿತ್ತು. ಈ ವಿಚಾರವನ್ನು ತಾಪ್ಸಿ ಪನ್ನು ಅವರು ಒಪ್ಪಿಯೂ ಇಲ್ಲ ಅದನ್ನು ಅಲ್ಲಗಳೆದೂ ಇಲ್ಲ.
ನಟಿಯರು ಸಾರ್ವಜನಿಕ ಜೀವನದಲ್ಲಿ ಇದ್ದಾಗ ಅವರ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತವೆ. ಕೆಲವು ಸೆಲೆಬ್ರಿಟಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದರೆ, ಇನ್ನೂ ಕೆಲವರು ಸೈಲೆಂಟ್ ಆಗಿರುತ್ತಾರೆ. ಅದೇ ರೀತಿ ತಾಪ್ಸಿ ಪನ್ನು ಕೂಡ ತಮ್ಮದೇ ನಿಯಮ ಹಾಕಿಕೊಂಡಿದ್ದಾರೆ. ಅವರು ಎಂದಿಗೂ ತಮ್ಮ ವೈಯಕ್ತಿಕ ವಿಚಾರದಲ್ಲಿ ಸ್ಪಷ್ಟನೆ ನೀಡುವುದಿಲ್ಲ. ಅದೇ ಮಾತನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ. ‘ನನ್ನ ವೈಯಕ್ತಿಕ ವಿಚಾರದಲ್ಲಿ ನಾನು ಈವರೆಗೆ ಸ್ಪಷ್ಟನೆ ನೀಡಿಲ್ಲ, ಮುಂದೆ ನೀಡುವುದೂ ಇಲ್ಲ’ ಎಂದಿದ್ದಾರೆ ತಾಪ್ಸಿ.
ಮಥಾಯಸ್ ಬೋ ಅವರು ಭಾರತದ ಬ್ಯಾಡ್ಮಿಂಟನ್ ಕೋಚ್ ಆಗಿದ್ದಾರೆ. ಕಳೆದ 10 ವರ್ಷಗಳಿಂದ ತಾಪ್ಸಿ ಹಾಗೂ ಮಥಾಯಸ್ ಡೇಟಿಂಗ್ ಮಾಡುತ್ತಿದ್ದಾರೆ. 2013ರಲ್ಲಿ ತಾಪ್ಸಿ ಹಾಗೂ ಮಥಾಯಸ್ ಬೋ ಮಧ್ಯೆ ಭೇಟಿ ಆಯಿತು. ನಂತರದ ದಿನಗಳಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು.
ಇದನ್ನೂ ಓದಿ: ಕ್ರಿಶ್ಚಿಯನ್-ಸಿಖ್ ಸಂಪ್ರದಾಯದಂತೆ ತಾಪ್ಸಿ ಪನ್ನು ಮದುವೆ; ಬಾಲಿವುಡ್ ಮಂದಿಗೆ ಆಹ್ವಾನ ಇಲ್ಲ?
ಸಿನಿಮಾ ವಿಚಾರಕ್ಕೆ ಬರೋದಾದರೆ ತಾಪ್ಸಿ ಪನ್ನು ಅವರು ‘ಡಂಕಿ’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ 2023ರ ಡಿಸೆಂಬರ್ನಲ್ಲಿ ರಿಲೀಸ್ ಆಗಿ ವಿಶ್ವ ಬಾಕ್ಸ್ ಆಫೀಸ್ನಲ್ಲಿ 450 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ವೋ ಲಡ್ಕಿ ಹೇ ಕಹಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅರ್ಷದ್ ಸಯದ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರತೀಕ್ ಬಬ್ಬರ್ ಹಾಗೂ ಪ್ರತಿಕ್ ಗಾಂಧಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ