ಸೈಫ್-ಕರೀನಾ ಹೇಳಿಕೆಯಲ್ಲೇ ಭಿನ್ನತೆ; ಮತ್ತೆ ಮುನ್ನೆಲೆಗೆ ಬಂದ ತೈಮೂರ್ ಹೆಸರಿನ ವಿವಾದ

ಬಾಲಿವುಡ್ ಸ್ಟಾರ್ ದಂಪತಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ಪುತ್ರ ತೈಮೂರ್ ಹೆಸರಿನ ವಿವಾದ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದೆ. ಸೈಫ್ ಹಳೆಯ ಸಂದರ್ಶನದಲ್ಲಿ ಆಕ್ರಮಣಕಾರಿ ತೈಮೂರ್ ಇತಿಹಾಸದ ಬಗ್ಗೆ ಅರಿವಿರಲಿಲ್ಲ ಎಂದಿದ್ದರೆ, ಕರೀನಾ ಸೈಫ್‌ಗೆ ಅದರ ಬಗ್ಗೆ ತಿಳಿದಿತ್ತು ಎಂದಿದ್ದರು. ಈ ಭಿನ್ನ ಹೇಳಿಕೆಗಳು ಹಳೆಯ ಚರ್ಚೆಗೆ ಹೊಸ ಆಯಾಮ ನೀಡಿವೆ.

ಸೈಫ್-ಕರೀನಾ ಹೇಳಿಕೆಯಲ್ಲೇ ಭಿನ್ನತೆ; ಮತ್ತೆ ಮುನ್ನೆಲೆಗೆ ಬಂದ ತೈಮೂರ್ ಹೆಸರಿನ ವಿವಾದ
ಕರೀನಾ-ಸೈಫ್

Updated on: Jun 29, 2026 | 1:10 PM

ಮುಖ್ಯಾಂಶಗಳು

  • ಮುನ್ನೆಲೆಗೆ ಬಂದ ತೈಮೂರ್ ಹೆಸರಿನ ವಿವಾದ
  • ಕರೀನಾ ಕಪೂರ್ ಅವರ ಹಿಂದಿನ ಹೇಳಿಕೆ ಮತ್ತು ಸೈಫ್ ಅವರ ಇತ್ತೀಚಿನ ಸ್ಪಷ್ಟನೆ ಬಗ್ಗೆ ಚರ್ಚೆ
  • ತೈಮೂರ್ ಹೆಸರಿನ ಆಯ್ಕೆ ಮತ್ತು ಅದರ ಸುತ್ತಲಿನ ವಿವಾದದ ಬಗ್ಗೆ ಇಲ್ಲಿದೆ ಮಾಹಿತಿ

ಬಾಲಿವುಡ್ ಸ್ಟಾರ್ ದಂಪತಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ಹಳೆಯ ಸಂದರ್ಶನಗಳ ತುಣುಕುಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ. ಈ ಮೂಲಕ ಅವರ ಮೊದಲ ಮಗ ತೈಮೂರ್ ಹೆಸರಿನ ವಿವಾದದ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆರಂಭವಾಗಿದೆ. ಈ ದಂಪತಿಯ ಹೇಳಿಕೆಗಳಲ್ಲೇ ಪರಸ್ಪರ ವ್ಯತ್ಯಾಸ ಇರುವುದು ಈ ಹೊಸ ಚರ್ಚೆಗೆ ಕಾರಣವಾಗಿದೆ.

ಮುನ್ನೆಲೆಗೆ ಬಂದ ಹೊಸ ವಿವಾದ ಏನು?

ಇತ್ತೀಚಿನ ಸಂದರ್ಶನವೊಂದರ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸೈಫ್ ಅಲಿ ಖಾನ್ ಅವರು ತೈಮೂರ್ ಹೆಸರಿನ ಬಗ್ಗೆ ಮಾತನಾಡಿದ್ದಾರೆ. ಹದಿನಾಲ್ಕನೇ ಶತಮಾನದ ಆಕ್ರಮಣಕಾರ ‘ತೈಮೂರ್’ ಇತಿಹಾಸದ ಬಗ್ಗೆ ತಮಗೆ ಯಾವುದೇ ಕಲ್ಪನೆ ಇರಲಿಲ್ಲ ಎಂದು ಸೈಫ್ ಹೇಳಿದ್ದಾರೆ. ಇತಿಹಾಸದ ಪ್ರಕಾರ ತೈಮೂರ್ 1398ರಲ್ಲಿ ದೆಹಲಿಯಲ್ಲಿ ಸಾವಿರಾರು ಜನರನ್ನು ಕೊಂದಿದ್ದ ಕ್ರೂರ ರಾಜನಾಗಿದ್ದನು.

ಕರೀನಾ ಕಪೂರ್ ಹಳೇ ಹೇಳಿಕೆ ಏನು?

ಆದರೆ 2018ರ ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಕರೀನಾ ಕಪೂರ್ ಬೇರೆಯದೇ ಆದ ಮಾಹಿತಿ ನೀಡಿದ್ದರು. ಸೈಫ್ ಅಲಿ ಖಾನ್ ಅವರಿಗೆ ಇತಿಹಾಸ ಓದುವ ಹವ್ಯಾಸವಿದೆ ಎಂದು ಕರೀನಾ ಹೇಳಿದ್ದರು. ಸೈಫ್ ಅವರು ಬಾಲ್ಯದಲ್ಲೇ ಮಂಗೋಲ್ ಸಾಮ್ರಾಜ್ಯದ ತೈಮೂರ್ ಬಗ್ಗೆ ಓದಿದ್ದರು. ಆ ಯೋಧನ ಸಾಹಸ ಮೆಚ್ಚಿ ಸೈಫ್ ಅವರೇ ಈ ಹೆಸರನ್ನು ಮಗನಿಗೆ ಇಟ್ಟಿದ್ದರು ಎಂದು ಕರೀನಾ ತಿಳಿಸಿದ್ದರು. ಜೊತೆಗೆ ಅವರ ಪರಿಚಯದ ನೆರೆಹೊರೆಯವರೊಬ್ಬರ ಹೆಸರೂ ಸಹ ತೈಮೂರ್ ಆಗಿತ್ತು ಎಂದು ಕರೀನಾ ವಿವರಿಸಿದ್ದರು. ದಂಪತಿಗಳ ಈ ಭಿನ್ನ ಹೇಳಿಕೆಗಳು ಈಗ ನೆಟ್ಟಿಗರ ಗಮನ ಸೆಳೆದಿವೆ.

ವಿವಾದದ ಹಿನ್ನೆಲೆ:

ಕರೀನಾ ಮತ್ತು ಸೈಫ್ ದಂಪತಿಗೆ 2016ರಲ್ಲಿ ಮೊದಲ ಮಗ ಜನಿಸಿದನು. ಆ ಮಗನಿಗೆ ‘ತೈಮೂರ್’ ಎಂದು ಹೆಸರಿಟ್ಟ ದಿನದಿಂದಲೇ ದೊಡ್ಡ ಮಟ್ಟದ ವಿವಾದ ಮತ್ತು ಆಕ್ರೋಶ ಶುರುವಾಗಿತ್ತು. ತೈಮೂರ್ ಎಂದರೆ ‘ಕಬ್ಬಿಣ’ ಎಂಬ ಅರ್ಥ ಬರುತ್ತದೆ ಎಂದು ದಂಪತಿ ಸ್ಪಷ್ಟನೆ ನೀಡಿದ್ದರು. ಆದರೂ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಮಗನ ಹೆಸರನ್ನು ಬದಲಾಯಿಸಲು ಕೂಡ ದಂಪತಿ ಯೋಚಿಸಿದ್ದರು. ಆದರೆ ನಂತರ ಹೆಸರು ಬದಲಾಯಿಸುವ ನಿರ್ಧಾರವನ್ನು ಕೈಬಿಟ್ಟರು. ಈ ಹೆಸರಿನ ವಿವಾದ ನಡೆದು ಈಗ ಸುಮಾರು ಹತ್ತು ವರ್ಷಗಳೇ ಕಳೆಯುತ್ತಾ ಬಂದಿವೆ. ಆದರೂ ಈ ಹೆಸರಿನ ವಿವಾದ ಇಂದಿಗೂ ಸಂಪೂರ್ಣವಾಗಿ ತಣ್ಣಗಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us