
ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ (Dhurandhar) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಕಲೆಕ್ಷನ್ 400 ಕೋಟಿ ರೂಪಾಯಿ ಸಮೀಪಿಸುತ್ತಿದೆ. ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರದಲ್ಲಿ ರಣವೀರ್ ಸಿಂಗ್ (Ranveer Singh) ಜೊತೆ ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ಆರ್. ಮಾಧವನ್ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನಿಮಾದ ಕ್ರೇಜ್ ಎಷ್ಟರಮಟ್ಟಿಗೆ ಇದೆ ಎಂದರೆ ಟೀಮ್ ಇಂಡಿಯಾ (Team India) ಆಟಗಾರರರು ಕೂಡ ‘ಧುರಂಧರ್’ ವೀಕ್ಷಿಸಿದ್ದಾರೆ. ಅವರಿಗಾಗಿ ಇಡೀ ಆಡಿ ಬುಕ್ ಮಾಡಲಾಗಿತ್ತು.
ಡಿಸೆಂಬರ್ 17ರಂದು ಇಂಡಿಯಾ ವರ್ಸಸ್ ಸೌತ್ ಆಫ್ರಿಕಾ ಟಿ20 ಪಂದ್ಯ ನಡೆಯಲಿದೆ. ಅದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಲಖನೌ ತಲುಪಿದ್ದಾರೆ. ಸೋಮವಾರ (ಡಿಸೆಂಬರ್ 15) ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದ ಆಟಗಾರರು ಸಮಯ ಮಾಡಿಕೊಂಡು ಸಿನಿಮಾ ನೋಡಲು ತೆರಳಿದ್ದಾರೆ. ಲಖನೌನ ಮಲ್ಟಿಪ್ಲೆಕ್ಸ್ನಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಟೀಮ್ ಇಂಡಿಯಾ ಆಟಗಾರರಿಗಾಗಿ ಸೋಮವಾರ ರಾತ್ರಿ 8.10ರ ಶೋ ಬುಕ್ ಆಗಿತ್ತು. ಸಿನಿಮಾ ಮುಗಿದಾಗ ಮಧ್ಯರಾತ್ರಿ 12.10 ಆಗಿತ್ತು. ಕ್ಯಾಪ್ಟನ್ ಸೂರ್ಯಕುಮಾರ್ ಯಾಧವ್, ಕೋಚ್ ಗೌತಮ್ ಗಂಭೀರ್, ಉಪ ನಾಯಕ ಶುಭಮನ್ ಗಿಲ್ ಜೊತೆ ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್ ಮುಂತಾದ ಆಟಗಾರರು ಸಿನಿಮಾ ನೋಡಿ ಎಂಜಾಯ್ ಮಾಡಿದರು.
Movie night for Team India 👀 pic.twitter.com/vtvAbHJ3Fe
— Shubman X 77 (@AyushKumar76463) December 16, 2025
ಟೀಮ್ ಇಂಡಿಯಾ ಆಟಗಾರರು ಹಾಗೂ ಅವರ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಈ ಪ್ರದರ್ಶನದಲ್ಲಿ ಅವಕಾಶ ಇರಲಿಲ್ಲ. ಆಟಗಾರರ ಭದ್ರತೆ ಮತ್ತು ಅನುಕೂಲದ ದೃಷ್ಟಿಯಿಂದ ಪೂರ್ತಿ ಆಡಿಯನ್ನು ಬುಕ್ ಮಾಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರರು ‘ಧುರಂಧರ್’ ನೋಡಿದ ಬಳಿಕ ಚಿತ್ರಕ್ಕೆ ಇನ್ನಷ್ಟು ಪ್ರಚಾರ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ರಿಲೀಸ್ ಆಯ್ತು ‘ಬಾರ್ಡರ್ 2’ ಸಿನಿಮಾ ಟೀಸರ್
ಆದಿತ್ಯ ಧಾರ್ ಅವರು ‘ಧುರಂಧರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಭಾರತದ ಗೂಢಾಚಾರಿಗಳು ನಡೆಸಿದ ಕಾರ್ಯಾಚರಣೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ನೈಜ ಘಟನೆಗಳಿಗೆ ಕೆಲವು ಕಾಲ್ಪನಿಕ ಅಂಶಗಳನ್ನು ಸೇರಿಸಿ ಸಿನಿಮಾ ಸಿದ್ಧಪಡಿಸಲಾಗಿದೆ. ಸಿನಿಮಾದ ಅವಧಿ 3 ಗಂಟೆ 32 ನಿಮಿಷ ಇದ್ದರೂ ಕೂಡ ಜನರು ತಾಳ್ಮೆಯಿಂದ ವೀಕ್ಷಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.