Thangalaan: ಹಿಂದಿಗೆ ಹೊರಟ ಕೋಲಾರದ ಚಿನ್ನದ ಕತೆ ‘ತಂಗಲಾನ್’
Thangalaan: ಆಗಸ್ಟ್ 15ರಂದು ಬಿಡುಗಡೆ ಆಗಿದ್ದ ‘ತಂಗಲಾನ್’ ಸಿನಿಮಾ ದಕ್ಷಿಣ ಭಾರತದಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇದೀಗ ಸಿನಿಮಾಕ್ಕೆ ಉತ್ತರ ಭಾರತದಲ್ಲೂ ಬೇಡಿಕೆ ಶುರುವಾಗಿದ್ದು, ಹಿಂದಿ ಭಾಷೆಯ ಆವೃತ್ತಿ ಶೀಘ್ರವೇ ತೆರೆಗೆ ಬರಲಿದೆ.
ಇತ್ತೀಚೆಗಷ್ಟೆ ಬಿಡುಗಡೆ ಆದ ತಮಿಳು ಸಿನಿಮಾ ‘ತಂಗಲಾನ್’ ಉತ್ತಮ ವಿಮರ್ಶೆಗಳನ್ನು ಮಾತ್ರವೇ ಅಲ್ಲದೆ ಒಳ್ಳೆಯ ಗಳಿಕೆಯನ್ನೂ ಸಹ ಬಾಕ್ಸ್ ಆಫೀಸ್ನಲ್ಲಿ ಮಾಡುತ್ತಿದೆ. ಚಿಯಾನ್ ವಿಕ್ರಂ, ಪಾರ್ವತಿ ಮೆನನ್ ಇನ್ನೂ ಹಲವು ಪ್ರತಿಭಾವಂತ ಕಲಾವಿದರು ನಟಿಸಿರುವ ಈ ಸಿನಿಮಾ, ಕೋಲಾರದ ಚಿನ್ನದ ಗಣಿಯ ಕತೆಯನ್ನು ಒಳಗೊಂಡಿದೆ. ಮಾತ್ರವಲ್ಲದೆ ಸಿನಿಮಾದ ಚಿತ್ರೀಕರಣವೂ ಸಹ ಬಹುತೇಕ ನಡೆದಿರುವುದು ಕರ್ನಾಟಕದ ಕೋಲಾರದಲ್ಲಿಯೇ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಹೊತ್ತಿನಲ್ಲಿ ಸಿನಿಮಾಕ್ಕೆ ಉತ್ತರ ಭಾರತದಿಂದಲೂ ಬೇಡಿಕೆ ಬಂದಿದ್ದು, ಸಿನಿಮಾ ಇದೀಗ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ.
‘ತಂಗಲಾನ್’ ಸಿನಿಮಾ ಆಗಸ್ಟ್ 15 ರಂದು ತಮಿಳು, ಕನ್ನಡ, ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ದಕ್ಷಿಣ ಭಾರತದಲ್ಲಿ ಉತ್ತಮ ಪ್ರದರ್ಶನ ಕಂಡ ‘ತಂಗಲಾನ್’ ಸಿನಿಮಾಕ್ಕೆ ಉತ್ತರದಲ್ಲೂ ಬೇಡಿಕೆ ಬಂದಿರುವ ಕಾರಣ ಇದೀಗ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಆಗಸ್ಟ್ 30 ರಂದು ‘ತಂಗಲಾನ್’ ಸಿನಿಮಾದ ಹಿಂದಿ ಆವೃತ್ತಿ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:‘ಕೆಜಿಎಫ್’ ಸಿನಿಮಾವನ್ನು ಹಿಂದಿಕ್ಕಿತೆ ‘ತಂಗಲಾನ್’ ಸಿನಿಮಾ? ನೆಟ್ಟಿಗರು ಹೇಳಿದ್ದೇನು?
‘ತಂಗಲಾನ್’ ಸಿನಿಮಾ 1850 ರ ಆಸುಪಾಸಿನಲ್ಲಿ ನಡೆಯುವ ಕತೆ ಒಳಗೊಂಡಿದೆ. ಬುಡಕಟ್ಟು ಜನಾಂಗವನ್ನು ಬಳಸಿಕೊಂಡು ಬ್ರಿಟೀಷರು ಇಲ್ಲಿನ ಚಿನ್ನ ದೋಚಿದ ಕತೆ ಸಿನಿಮಾದಲ್ಲಿದೆ. ‘ತಂಗಲಾನ್’ ಸಿನಿಮಾದಲ್ಲಿ ಜಾತೀಯತೆ, ಆಗಿನ ಭಾರತದ ವರ್ಣ ವ್ಯವಸ್ಥೆ, ಬುಡಕಟ್ಟು ಜನಾಂಗಗಳ ನಂಬಿಕೆ, ಆಚರಣೆ, ಈ ನೆಲದ ಸಂಪತ್ತು, ಬ್ರಿಟೀಷರ ಆಲೋಚನೆಗಳು ಇನ್ನಿತರೆ ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗಿದೆ.
‘ತಂಗಲಾನ್’ ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಪಾ ರಂಜಿತ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಕಬಾಲಿ’, ‘ಕಾಲ’, ‘ಸರ್ಪಟ್ಟ ಪರಂಬರೈ’, ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ದಮನಿತರ ಕತೆಗಳನ್ನು ತೆರೆಗೆ ತರುವುದರಲ್ಲಿ ಪಾ ರಂಜಿತ್ ನಿಸ್ಸೀಮರು. ಈಗ ತೆರೆಗೆ ಬಂದಿರುವ ‘ತಂಗಲಾನ್’ ಸಿನಿಮಾವನ್ನು ಕೆಇ ಜ್ಞಾನವೇಲು ರಾಜ ನಿರ್ಮಾಣ ಮಾಡಿದ್ದಾರೆ. ಸಂಗೀತ ನೀಡಿರುವುದು ಜಿವಿ ಪ್ರಕಾಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ