‘ಕೆಜಿಎಫ್’ ಸಿನಿಮಾವನ್ನು ಹಿಂದಿಕ್ಕಿತೆ ‘ತಂಗಲಾನ್’ ಸಿನಿಮಾ? ನೆಟ್ಟಿಗರು ಹೇಳಿದ್ದೇನು?

Thangalaan: ಚಿಯಾನ್ ವಿಕ್ರಂ ನಟಿಸಿ, ಪಾ ರಂಜಿತ್ ನಿರ್ದೇಶನ ಮಾಡಿರುವ ‘ತಂಗಲಾನ್’ ಸಿನಿಮಾ ತೆರೆಗೆ ಬಂದಿದೆ. ಸಿನಿಮಾ ಕರ್ನಾಟಕದ ಕೆಜಿಎಫ್ ಕತೆ ಎನ್ನಲಾಗುತ್ತಿದೆ. ಸಿನಿಮಾ ನೋಡಿದ ನೆಟ್ಟಿಗರು ಸಿನಿಮಾ ಬಗ್ಗೆ ಟ್ವಿಟ್ಟರ್​ ಹಂಚಿಕೊಂಡಿರುವ ವಿಮರ್ಶೆ ಇಲ್ಲಿದೆ.

‘ಕೆಜಿಎಫ್’ ಸಿನಿಮಾವನ್ನು ಹಿಂದಿಕ್ಕಿತೆ ‘ತಂಗಲಾನ್’ ಸಿನಿಮಾ? ನೆಟ್ಟಿಗರು ಹೇಳಿದ್ದೇನು?
Follow us
ಮಂಜುನಾಥ ಸಿ.
|

Updated on: Aug 15, 2024 | 2:45 PM

ಇಂದು (ಆಗಸ್ಟ್ 15) ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕೆಲ ಪ್ರಮುಖ ಸಿನಿಮಾಗಳು ಬಿಡುಗಡೆ ಆಗಿವೆ. ಕನ್ನಡದಲ್ಲಿ ‘ಕೃಷ್ಣಂ ಪ್ರಣಯ ಸಖಿ’, ‘ಗೌರಿ’, ತೆಲುಗಿನಲ್ಲಿ ‘ಮಿಸ್ಟರ್ ಬಚ್ಚನ್’ ಮತ್ತು ‘ಡಬಲ್ ಇಸ್ಮಾರ್ಟ್’ ಇನ್ನು ತಮಿಳಿನಲ್ಲಿ ಚಿಯಾನ್ ವಿಕ್ರಂ ನಟನೆಯ ‘ತಂಗಲಾನ್’ ಸಿನಿಮಾ ತೆರೆಗೆ ಬಂದಿದೆ. ಈ ‘ತಂಗಲಾನ್’ ಸಿನಿಮಾ ಕೆಜಿಎಫ್​ನ ಕತೆಯನ್ನು ಆಧರಿಸಿದ ಸಿನಿಮಾ ಎಂದೇ ಪ್ರಚಾರ ಮಾಡಲಾಗಿದೆ. ಸಿನಿಮಾದ ಟ್ರೈಲರ್​ ಸಹ ಹಾಗೆಯೇ ಇದೆ. ಕೋಲಾರದಲ್ಲೇ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದ್ದು, ಸಿನಿಮಾ ನೋಡಿದ ನೆಟ್ಟಿಗರು ಸಿನಿಮಾ ಬಗ್ಗೆ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ವಿಮರ್ಶೆಗಳೇನು? ಇಲ್ಲಿದೆ ಮಾಹಿತಿ.

ಶಿವಂ ಸಿ ಕಬಿಲನ್ ಎಂಬುವರು ಟ್ವೀಟ್ ಮಾಡಿ, ‘ಇಲ್ಲಿಯವರೆಗೆ ‘ತಂಗಾಲನ್’ ಅದ್ಭುತವಾದ ಸಿನಿಮಾ, ಕೆಲವು ಅದ್ಭುತ ದೃಶ್ಯಗಳನ್ನು ಪಾ ರಂಜಿತ್ ಕಟ್ಟಿಕೊಟ್ಟಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಅವರು ಸಿನಿಮಾದ ಮೊದಲಾರ್ಧದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಗೋಟ್ ಎಂಬ ಹೆಸರಿನ ವ್ಯಕ್ತಿ ಟ್ವೀಟ್ ಮಾಡಿ, ‘ಚಿತ್ರರಂಗಕ್ಕೆ ಇದು ಅತ್ಯುತ್ತಮ ಹಿಟ್ ಆಗಲಿದೆ. ಚಿಯಾನ್ ವಿಕ್ರಂ ಅತ್ಯದ್ಭುತವಾಗಿ ನಟಿಸಿದ್ದಾರೆ. ಇದು ಅವರ ಈವರೆಗಿನ ಅತ್ಯುತ್ತಮ ನಟನೆ. ಹತ್ತು ಕಮಲ್ ಹಾಸನ್ ಅವರನ್ನು ತಿಂದು ಮುಗಿಸಿಬಿಡುವಂಥಹಾ ನಟನೆ ಅವರದ್ದು’ ಎಂದಿದ್ದಾರೆ.

ವಿಜಯ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿ, ‘2024ರಲ್ಲಿ ಈವರೆಗೆ ಬಿಡುಗಡೆ ಆದ ಸಿನಿಮಾಗಳಲ್ಲಿ ಇದು ಅತ್ಯುತ್ತಮ ಸಿನಿಮಾ. ಈ ಸಿನಿಮಾದ ನಟನೆಗೆ ಚಿಯಾನ್ ವಿಕ್ರಂಗೆ ಪ್ರಶಸ್ತಿ ನೀಡಬೇಕು. ಜಿವಿ ಪ್ರಕಾಶ್ ಸಂಗೀತ ಅತ್ಯದ್ಭುತ. ಎಲ್ಲ ಕ್ರೆಡಿಟ್ ಹೋಗಬೇಕಿರುವುದು ನಿರ್ದೇಶಕ ಪಾ ರಂಜಿತ್​ಗೆ. ಎಂದಿನಂತೆ ಪಾ ರಂಜಿತ್ ನಿರ್ದೇಶನ ಅದ್ಭುತವಾಗಿತ್ತು. ದ್ವಿತೀಯಾರ್ಧ ನನಗೆ ಹೆಚ್ಚು ಇಷ್ಟವಾಯ್ತು’ ಎಂದಿದ್ದಾರೆ.

ಇನ್ನು ಫಿಲಂ ಫುಡ್ ಫನ್ ಫ್ಯಾಕ್ಟ್ ಹೆಸರಿನ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಅಭಿಮಾನಿಯೊಬ್ಬ ‘ತಂಗಾಲನ್’ ಸಿನಿಮಾ ಚೆನ್ನಾಗಿಲ್ಲ ಎಂದಿದ್ದಾರೆ. ‘ಪಾ ರಂಜಿತ್ ನೀವು ನಿರ್ದೇಶಕರಾಗಿ ಮಾತ್ರ ಯೋಚನೆ ಮಾಡುತ್ತಿದ್ದೀರಿ, ನಟನಾಗಿ ಯೋಚಿಸಿ. ವಿಕ್ರಂ ಎಷ್ಟೆಲ್ಲ ಮಾಡಿದ್ದಾರೆ ಆದರೆ ಅದು ಎಲ್ಲವೂ ಕಾಣುತ್ತಲೇ ಇಲ್ಲ. ನೀವು ಕೆಜಿಎಫ್ ಸಿನಿಮಾ ಎಂದು ಹೇಳಿದಿರಿ, ನೋಡಿದರೆ ಇಲ್ಲೇನೋ ಮಾಟಗಾತಿ, ಮಾಟ-ಮಂತ್ರ ಎಂದೆಲ್ಲ ಏನೇನೋ ಇದೆ. ಸಿನಿಮಾ ನೋಡಬೇಕು ಎಂದುಕೊಂಡಿರುವವರು ಯೋಚಿಸಿ ನಿರ್ಧರಿಸಿ’ ಎಂದಿದ್ದಾರೆ.

ಇದನ್ನೂ ಓದಿ:‘2 ಕೋಟಿ ಕಟ್ಟಿ, ಸಿನಿಮಾ ಬಿಡುಗಡೆ ಮಾಡಿ’: ಇಕ್ಕಟ್ಟಿನಲ್ಲಿ ‘ತಂಗಲಾನ್’,‘ಕನಗುವ’

ಧನಂಜಯನ್ ಹೆಸರಿನ ವ್ಯಕ್ತಿ ಟ್ವೀಟ್ ಮಾಡಿ, ‘ತಂಗಲಾನ್’ ಸಿನಿಮಾ ಮ್ಯಾಜಿಗಲ್, ನಿಗೂಢ, ಅದ್ಭುತ ಎಲ್ಲ ಅನುಭವಗಳನ್ನೂ ನೀಡುತ್ತದೆ. ಚಿಯಾನ್ ವಿಕ್ರಂ ಅದ್ಭುತವಾಗಿ ನಟಿಸಿದ್ದಾರೆ. ಬಹಳ ವರ್ಷಗಳ ಕಾಲ ನೆನಪಿಡುವಂಥಹಾ ಸಿನಿಮಾ ಒಂದನ್ನು ಪಾ ರಂಜಿತ್ ನೀಡಿದ್ದಾರೆ. ಜಿವಿ ಪ್ರಕಾಶ್ ಸಂಗೀತ ಅತ್ಯದ್ಭುತ. ಪಾರ್ವತಿ ಮೆನನ್, ಮಾಳವಿಕಾ ಮೋಹನನ್, ಪಶುಪತಿ ಮತ್ತು ಡೇನಿಯಲ್ ಅದ್ಭುತವಾಗಿ ನಟಿಸಿದ್ದಾರೆ. ಕಡ್ಡಾಯವಾಗಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎಂದಿದ್ದಾರೆ.

ಸಿನಿಮಾ ನೋಡಿರುವ ಬಹುತೇಕ ನೆಟ್ಟಿಗರು ‘ತಂಗಲಾನ್’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರವೇ ಸಿನಿಮಾ ಅಲ್ಲಲ್ಲಿ ಹಾದಿ ತಪ್ಪಿದೆ, ಮಾಯಗಾತಿಯ ಎಪಿಸೋಡ್ ಇರಬಾರದಿತ್ತು ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಆದರೆ ಒಟ್ಟಾರೆಯಾಗಿ ಬಹುತೇಕ ನೆಟ್ಟಿಗರು ಟ್ವಿಟ್ಟರ್​ನಲ್ಲಿ ಇದೊಂದು ಉತ್ತಮ ಸಿನಿಮಾ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ