‘2 ಕೋಟಿ ಕಟ್ಟಿ, ಸಿನಿಮಾ ಬಿಡುಗಡೆ ಮಾಡಿ’: ಇಕ್ಕಟ್ಟಿನಲ್ಲಿ ‘ತಂಗಲಾನ್’,‘ಕನಗುವ’
ತಮಿಳಿನ ಇಬ್ಬರು ಸ್ಟಾರ್ ನಟರುಗಳು, ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆಗೆ ಸಮಸ್ಯೆ ಎದುರಾಗಿದೆ. ಸಿನಿಮಾ ಬಿಡುಗಡೆ ಮಾಡುವ ಮುನ್ನ ತಲಾ ಒಂದು ಕೋಟಿ ರೂಪಾಯಿ ಭದ್ರತೆ ಕಟ್ಟಬೇಕೆಂದು ನ್ಯಾಯಾಲಯ ಹೇಳಿದೆ.
ತಮಿಳಿನ ಎರಡು ಬಿಗ್ಬಜೆಟ್ ಸ್ಟಾರ್ ನಟರ ಸಿನಿಮಾಗಳು ಇಕ್ಕಟ್ಟಿಗೆ ಸಿಲುಕಿವೆ. ಚಿಯಾನ್ ವಿಕ್ರಂ ನಟನೆಯ ‘ತಂಗಲಾನ್’ ಆಗಸ್ಟ್ 15 ರಂದು ಬಿಡುಗಡೆ ಆಗಲಿದ್ದು, ಆದರೆ ಬಿಡುಗಡೆಗೆ ಕೆಲವು ದಿನಗಳು ಇರುವಂತೆಯೇ ಸಿನಿಮಾಕ್ಕೆ ಸಮಸ್ಯೆ ಎದುರಾಗಿದೆ. ಇನ್ನು ನಟ ಸೂರ್ಯ ನಟನೆಯ ಬಹುಕೋಟಿ ಬಜೆಟ್ನ ಸಿನಿಮಾ ‘ಕನಗುವ’ ಸಹ ಬಿಡುಗಡೆಗೆ ರೆಡಿಯಾಗಿದ್ದು, ಆ ಸಿನಿಮಾದ ಬಿಡುಗಡೆ ಸಹ ಅಡಕತ್ತರಿಯಲ್ಲಿ ಸಿಲುಕಿದೆ. ಸಿನಿಮಾ ಬಿಡುಗಡೆ ಆಗಬೇಕೆಂದರೆ ಎರಡು ಕೋಟಿ ರೂಪಾಯಿ ಹಣವನ್ನು ಕಟ್ಟಿಯೇ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಅಷ್ಟಕ್ಕೂ ಪ್ರಕರಣವೇನು?
‘ತಂಗಲಾನ್’ ಹಾಗೂ ‘ಕನಗುವ’ ಸಿನಿಮಾಗಳ ನಿರ್ಮಾಪಕ ಕೆಇ ಜ್ಞಾನವೇಲು, ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪವಿದ್ದು, ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಕರಣ ಚಾಲ್ತಿಯಲ್ಲಿದ್ದು ವಿಚಾರಣೆ ನಡೆಸುತ್ತಿರುವ ದ್ವಿಸದಸ್ಯ ಪೀಠವು ಕೆಇ ಜ್ಞಾನವೇಲು ಒಡೆತನದ ಗ್ರೀನ್ ಸ್ಟುಡಿಯೋ ನಿರ್ಮಾಣ ಸಂಸ್ಥೆಯು ‘ತಂಗಲಾನ್’ ಹಾಗೂ ‘ಕನಗುವ’ ಸಿನಿಮಾದ ಬಿಡುಗಡೆಗೆ ಮುನ್ನ ತಲಾ ಒಂದು ಕೋಟಿಯಂತೆ ಹಣವನ್ನು ಭದ್ರತೆಯ ರೀತಿಯಲ್ಲಿ ಇರಿಸಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಅರ್ಜುನ್ ಲಾಲ್ ಸುಂದರ್ದಾಸ್ ಎಂಬುವರು 2011 ರಲ್ಲಿ ಸಿನಿಮಾ ನಿರ್ಮಾಣಕ್ಕಾಗಿ ಜ್ಞಾನವೇಲು ಅವರ ಗ್ರೀನ್ ಸ್ಟುಡಿಯೋಗೆ ಸಿನಿಮಾ ನಿರ್ಮಾಣಕ್ಕಾಗಿ 12.85 ಕೋಟಿ ರೂಪಾಯಿಗಳನ್ನು ನೀಡಿದ್ದರಂತೆ. ಆದರೆ ಸಿನಿಮಾದ ನಿರ್ಮಾಣ ಅರ್ಧದಲ್ಲೇ ನಿಂತ ಕಾರಣಕ್ಕೆ ಅರ್ಜುನ್ ಲಾಲ್ ಸುಂದರ್ದಾಸ್ ಅವರಿಗೆ ಕೇವಲ 2.5 ಕೋಟಿ ಹಣವನ್ನಷ್ಟೆ ಮರಳಿಸಿ 10.35 ಕೋಟಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಬಳಿಕ ಅರ್ಜುನ್ ಲಾಲ್ ಸುಂದರ್ದಾಸ್ ನಿಧನ ಹೊಂದಿದ್ದು ಅವರ ಪರವಾಗಿ ಅವರ ಕುಟುಂಬದವರು ಗ್ರೀನ್ ಸ್ಟುಡಿಯೋಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:Thangalaan: ರಾಕಿಭಾಯ್ಗಾಗಿ ‘ತಂಗಲಾನ್’ ವಿಶೇಷ ಪ್ರದರ್ಶನ, ಇದು ‘ಕೆಜಿಎಫ್’ ಕತೆ
ಆದರೆ ಪ್ರಕರಣದ ಬಗ್ಗೆ ಜ್ಞಾನವೇಲು ಹೇಳಿರುವಂತೆ, ಬಾಕಿ ಹಣದ ಬದಲಾಗಿ ತಮ್ಮ ನಿರ್ಮಾಣದ ಮೂರು ತಮಿಳು ಸಿನಿಮಾಗಳ ಹಿಂದಿ ಡಬ್ಬಿಂಗ್ ಹಕ್ಕನ್ನು ಅರ್ಜುನ್ ಲಾಲ್ ಸುಂದರ್ದಾಸ್ ಅವರಿಗೆ ಈ ಹಿಂದೆಯೇ ನೀಡಲಾಗಿತ್ತು. ಹಾಗಾಗಿ ತಾವು ಯಾವುದೇ ಹಣ ಕೊಡುವುದು ಬಾಕಿ ಇಲ್ಲ ಎಂದಿದ್ದರು. ಆದರೆ ಅದಕ್ಕೆ ಸಂಬಂಧಿಸಿದಂತೆ ಕೇವಲ ಒಂದು ಜೆರಾಕ್ಸ್ ಪ್ರತಿಯೊಂದನ್ನು ದಾಖಲೆಯನ್ನಾಗಿ ನ್ಯಾಯಾಲಯಕ್ಕೆ ನೀಡಿದ್ದರು. ಮೂಲ ದಾಖಲೆ 2015 ರ ಪ್ರವಾಹದಲ್ಲಿ ನಾಶವಾಯ್ತು ಎಂದಿದ್ದರು. ಅಸಲಿಗೆ ಗ್ರೀನ್ ಸ್ಟುಡಿಯೋಸ್ನ ಅಂದಿನ ಕಚೇರಿ ಎರಡನೇ ಫ್ಲೋರ್ನಲ್ಲಿದ್ದು, ಪ್ರವಾಹದಿಂದ ಆ ಕಚೇರಿಯ ಯಾವುದೇ ಕಡತ ನಷ್ಟವಾಗಿಲ್ಲ ಎಂಬುದು ಆ ಬಳಿಕ ಖಾತ್ರಿಯಾಯ್ತು.
ಅರ್ಜುನ್ ಲಾಲ್ ಸುಂದರ್ದಾಸ್ ಪರ ದಾವೆ ಹೂಡಿರುವ ಕುಟುಂಬದವರು, ಗ್ರೀನ್ ಸ್ಟುಡಿಯೋಸ್ ಸಂಸ್ಥೆಯು ಬಾಕಿ ಇರುವ 10.25 ಕೋಟಿಗೆ ವಾರ್ಷಿಕ 18% ಬಡ್ಡಿಯಂತೆ ಮರಳಿ ಕೊಡಬೇಕು ಎಂದು ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಗ್ರೀನ್ ಸ್ಟುಡಿಯೋಸ್ ಸಂಸ್ಥೆ ಮೇಲ್ನೋಟಕ್ಕೆ ಅಪರಾಧ ಮಾಡಿರುವುದಾಗಿ ಗಮನಿಸಿದ್ದು, ಯಾವುದೇ ಸಿನಿಮಾ ಬಿಡುಗಡೆಗೆ ಮುನ್ನ ತಲಾ ಒಂದು ಕೋಟಿ ರೂಪಾಯಿ ಹಣ ಭದ್ರತೆ ಇಡುವಂತೆ ಸೂಚಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ