ಭಾರತೀಯ ಚಿತ್ರರಂಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಹೊಸ ಸಂಚಲನ ಮೂಡಿಸಿದೆ. ಮಾ.11ರಂದು ಬಿಡುಗಡೆ ಆಗಿದ್ದ ಈ ಚಿತ್ರ ಒಂದು ವಾರ ಕಳೆಯುವುದರೊಳಗೆ ಹಲವು ದಾಖಲೆಗಳನ್ನು ಮಾಡಿದೆ. ಬಾಲಿವುಡ್ನ ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನೂ ಬೀಟ್ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸೌಂಡು ಮಾಡುತ್ತಿದೆ. ಮೊದಲ ದಿನ ಈ ಚಿತ್ರ ಕೇವಲ 3.5 ಕೋಟಿ ರೂಪಾಯಿ ಕಲೆಕ್ಷನ್ (The Kashmir Files Box Office Collection) ಮಾಡಿತ್ತು. ಆದರೆ ಆರನೇ ದಿನದ ಅಂತ್ಯಕ್ಕೆ ಈ ಸಿನಿಮಾದ ಗಳಿಕೆ ಬರೋಬ್ಬರಿ 79 ಕೋಟಿ ರೂಪಾಯಿ ಆಗಿದೆ. ಈ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಹೆಚ್ಚು ಪ್ರಚಾರವಿಲ್ಲದೇ ಬಿಡುಗಡೆಯಾದ ಸಿನಿಮಾಗೆ ನಂತರದ ದಿನಗಳಲ್ಲಿ ಭರ್ಜರಿ ಪ್ರಚಾರ ಸಿಕ್ಕಿತು. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಎಮೋಷನಲ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಎಲ್ಲ ಅಂಶಗಳ ಕಾರಣದಿಂದ ಈ ಚಿತ್ರ ಧೂಳೆಬ್ಬಿಸುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕಲೆಕ್ಷನ್ ಕಂಡು ನಟ ಆರ್. ಮಾಧವನ್ (R Madhavan) ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಕುರಿತು ಅವರು ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.
‘ಇದು ಅದ್ಭುತ ಮತ್ತು ಅಭೂತಪೂರ್ವವಾದದ್ದು. ಹಾಗಾಗಿ ತುಂಬ ಹೊಟ್ಟೆಕಿಚ್ಚು ಆಗುತ್ತಿದೆ. ಅದೇ ರೀತಿ ಹೆಮ್ಮೆ ಕೂಡ ಆಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ತಂಡದ ಗೆಲವು ಕಂಡು ಖುಷಿಯಾಗಿದೆ’ ಎಂದು ಆರ್. ಮಾಧವನ್ ಅವರು ಟ್ವೀಟ್ ಮಾಡಿದ್ದಾರೆ. ಕಳೆದ ವಾರ ಅವರು ಈ ಸಿನಿಮಾದ ಟ್ರೇಲರ್ ಶೇರ್ ಮಾಡಿಕೊಂಡಿದ್ದರು. ಆ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದರು. ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸಿನಿಮಾದ ಬಗ್ಗೆ ತಮಗೆ ಕೌತುಕ ಹೆಚ್ಚಿದೆ ಎಂದು ಮಾಧವನ್ ಹೇಳಿದ್ದರು.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ, ಅಂದರೆ ಮಾ.11ರಂದು ಗಳಿಸಿದ್ದು ಬರೀ 3.55 ಕೋಟಿ ರೂಪಾಯಿ. ಅಂದು ‘ರಾಧೆ ಶ್ಯಾಮ್’ ಸಿನಿಮಾದ ಪೈಪೋಟಿ ನಡುವೆ ಈ ಚಿತ್ರ ಕಳೆದೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದರಿಂದ ಎರಡನೇ ದಿನವೇ ‘ದಿ ಕಾಶ್ಮೀರ್ ಫೈಲ್ಸ್’ ಗಳಿಕೆ ಹೆಚ್ಚಿತು. ಮಾ.12ರಂದು ಈ ಸಿನಿಮಾ 8.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿತು. 3ನೇ ದಿನ 15.10 ಕೋಟಿ ರೂಪಾಯಿ, 4ನೇ ದಿನ 15.05 ಕೋಟಿ ರೂಪಾಯಿ, 5ನೇ ದಿನ 18 ಕೋಟಿ ರೂಪಾಯಿ ಹಾಗೂ 6ನೇ ದಿನ ಬರೋಬ್ಬರಿ 19.05 ಕೋಟಿ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ಒಟ್ಟು 79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿದೇಶಿ ಗಲ್ಲಾಪೆಟ್ಟಿಗೆಯ ಆದಾಯ ಸೇರಿಸಿದರೆ ಈ ಮೊತ್ತ ಇನ್ನೂ ಹೆಚ್ಚಲಿದೆ.
This Is incredible and unprecedented .. so very jealous ??and at the same time VERY proud and happy for Team #TheKashmir files. https://t.co/5zY9AgoTtc
— Ranganathan Madhavan (@ActorMadhavan) March 17, 2022
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್ ಅಗರ್ವಾಲ್ ನಿರ್ಮಾಣ ಮಾಡಿದ್ದಾರೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ವಿಥುನ್ ಚಕ್ರವರ್ತಿ, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲರ ನಟನೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿ ಶಹಭಾಷ್ ಎಂದಿದ್ದಾರೆ.
ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಶೀಘ್ರದಲ್ಲೇ 100 ಕೋಟಿ ರೂಪಾಯಿ ಕಮಾಯಿ ಮಾಡುವುದು ಖಚಿತ ಆಗಿದೆ. ತೆರೆಕಂಡು 6 ದಿನ ಆಗಿದ್ದರೂ ಸಹ ಇಂದಿಗೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
‘ಜೇಮ್ಸ್’ ಬಂದ್ರೂ ‘ದಿ ಕಾಶ್ಮೀರ್ ಫೈಲ್ಸ್’ ಹೌಸ್ಫುಲ್: ಹೆಚ್ಚುತ್ತಲೇ ಇದೆ ಈ ಸಿನಿಮಾ ಕಲೆಕ್ಷನ್