ವಿವೇಕ್ ಅಗ್ನಿಹೋತ್ರಿ ಸಿನಿಮಾಗಳು
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾದಿಂದ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದಕ್ಕೂ ಮುನ್ನ ಅವರು ಕಿರುತೆರೆ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಹೆಸರಾಂತ ಜಾಹೀರಾತು ಕಂಪನಿಗಳಲ್ಲಿ ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದರು. ಬಳಿಕ ಕೆಲವು ಟಿವಿ ಸೀರಿಯಲ್ಗಳ ನಿರ್ದೇಶನ ಮತ್ತು ನಿರ್ಮಾಣದಲ್ಲೂ ಅವರು ತೊಡಗಿಕೊಂಡರು. ವಿವೇಕ್ ಅಗ್ನಿಹೋತ್ರಿ ಈವರೆಗೂ ಒಟ್ಟು 8 ಸಿನಿಮಾಗಳನ್ನು (Vivek Agnihotri Movies) ನಿರ್ದೇಶಿಸಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್, ಭೋಪಾಲ್ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್, ಜೆಎನ್ಯು ಮುಂತಾದ ಕಡೆಗಳಲ್ಲಿ ಅವರು ಶಿಕ್ಷಣ ಪಡೆದಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಯಶಸ್ಸಿನ ಬಳಿಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಡಿಮ್ಯಾಂಡ್ ಹೆಚ್ಚಿದೆ. ಅವರು ನಿರ್ದೇಶಿಸಲಿರುವ ಮುಂದಿನ ಸಿನಿಮಾದ ಹೆಸರು ‘ದಿ ದಿಲ್ಲಿ ಫೈಲ್ಸ್’ ಆ ಚಿತ್ರದ ಬಗ್ಗೆ ಕೌತುಕ ಮೂಡಿದೆ.
- ಮೊದಲ ಸಿನಿಮಾ ‘ಚಾಕೋಲೇಟ್’: ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶನ ಮಾಡಿದ ಈ ಚಿತ್ರ 2005ರಲ್ಲಿ ತೆರೆಕಂಡಿತು. ಇಮ್ರಾನ್ ಹಷ್ಮಿ, ಇರ್ಫಾನ್ ಖಾನ್, ತನುಶ್ರೀ ದತ್ತ, ಅನಿಲ್ ಕಪೂರ್, ಸುನೀಲ್ ಶೆಟ್ಟಿ ಮುಂತಾದ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು. ‘ಚಾಕೋಲೇಟ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
- ಎರಡನೇ ಸಿನಿಮಾ ‘ಧನ್ ಧನಾ ಧನ್ ಗೋಲ್’: ಈ ಸಿನಿಮಾ 2007ರಲ್ಲಿ ರಿಲೀಸ್ ಆಯಿತು. ಜಾನ್ ಅಬ್ರಾಹಂ, ಬಿಪಾಶಾ ಬಸು, ಅರ್ಷದ್ ವಾರ್ಸಿ, ಬೋಮನ್ ಇರಾನಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಫುಟ್ಬಾಲ್ ಆಟದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಹೇಳಿಕೊಳ್ಳುವಷ್ಟು ಯಶಸ್ಸು ‘ಧನ್ ಧನಾ ಧನ್ ಗೋಲ್’ ಸಿನಿಮಾಗೆ ಸಿಗಲಿಲ್ಲ.
- ಮೂರನೇ ಸಿನಿಮಾ ‘ಹೇಟ್ ಸ್ಟೋರಿ’: ಈ ಚಿತ್ರ 2012ರಲ್ಲಿ ತೆರೆಕಂಡಿತು. ಎರಾಟಿಕ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಪಾವುಲಿ ದಾಮ್, ಗುಲ್ಷನ್ ದೇವಯ್ಯ, ನಿಖಿಲ್ ದ್ವಿವೇದಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಇಂಟಿಮೇಟ್ ದೃಶ್ಯಗಳು ಅತಿಯಾಗಿವೆ ಎಂಬ ಕಾರಣಕ್ಕೆ ‘ಹೇಟ್ ಸ್ಟೋರಿ’ ಸಿನಿಮಾ ಚರ್ಚೆಗೆ ಒಳಗಾಗಿತ್ತು.
- ನಾಲ್ಕನೇ ಸಿನಿಮಾ ‘ಝಿದ್’: ಈ ಸಿನಿಮಾ ಕೂಡ ಎರಾಟಿಕ್ ಥ್ರಿಲ್ಲರ್ ಶೈಲಿಯ ಕಥೆಯನ್ನೇ ಹೊಂದಿದೆ. 2014ರಲ್ಲಿ ಬಿಡುಗಡೆಯಾದ ‘ಝಿದ್’ ಸಿನಿಮಾದಲ್ಲಿ ಕರಣ್ವೀರ್ ಶರ್ಮಾ, ಮನ್ನಾರಾ ಚೋಪ್ರಾ, ಶ್ರದ್ಧಾ ದಾಸ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಈ ಚಿತ್ರಕ್ಕೆ ಅನೇಕರಿಂದ ನೆಗೆಟಿವ್ ವಿಮರ್ಶೆ ವ್ಯಕ್ತವಾಗಿತ್ತು.
- ಐದನೇ ಸಿನಿಮಾ ‘ಬುದ್ಧ ಇನ್ ಎ ಟ್ರಾಫಿಕ್ ಜಾಮ್’: 2016ರಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಪೊಲಿಟಿಕಲ್ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಅರುಣೋದಯ್ ಸಿಂಗ್, ಮಾಹಿ ಗಿಲ್, ಅನುಪಮ್ ಖೇರ್, ಪಲ್ಲವಿ ಜೋಶಿ ಮುಂತಾದವರು ನಟಿಸಿದ್ದರು. ರಾಜಕೀಯದ ಕುರಿತ ಕೆಲವು ವಿಚಾರಗಳನ್ನು ಈ ಸಿನಿಮಾ ಚರ್ಚಿಸುತ್ತದೆ.
- ಆರನೇ ಸಿನಿಮಾ ‘ಜುನೂನಿಯತ್’: ಈ ಸಿನಿಮಾ ಕೂಡ 2016ರಲ್ಲಿಯೇ ಬಿಡುಗಡೆ ಆಯಿತು. ಪುಲ್ಕಿತ್ ಸಾಮ್ರಾಟ್ ಮತ್ತು ಯಾಮಿ ಗೌತಮ್ ಅವರು ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಪುಲ್ಕಿನ್ ಸಾಮ್ರಾಟ್ ಅವರು ಸೈನಿಕನ ಪಾತ್ರ ಮಾಡಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
- ಏಳನೇ ಸಿನಿಮಾ ‘ದಿ ತಾಷ್ಕೆಂಟ್ ಫೈಲ್ಸ್’: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಧನದ ಕುರಿತು ತಯಾರಾದ ಈ ಚಿತ್ರ 2019ರಲ್ಲಿ ತೆರೆಕಂಡಿತು. ನಾಸಿರುದ್ದೀನ್ ಶಾ, ಮಿಥುನ್ ಚಕ್ರವರ್ತಿ, ಶ್ವೇತಾ ಬಸು ಪ್ರಸಾದ್, ಪಲ್ಲವಿ ಜೋಶಿ ಮುಂತಾದವರು ನಟಿಸಿದ್ದರು. ಈ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿ ಸಿಕ್ಕವು. ಗಲ್ಲಾಪೆಟ್ಟಿಗೆಯಲ್ಲೂ ‘ದಿ ತಾಷ್ಕೆಂಟ್ ಫೈಲ್ಸ್’ ಸಿನಿಮಾ ಲಾಭ ಮಾಡಿತು.
- ಎಂಟನೇ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ತಯಾರಾದ ಈ ಚಿತ್ರವು ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕಾರಣಿಗಳು ಈ ಚಿತ್ರವನ್ನು ಹೊಗಳಿದ್ದಾರೆ. ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ:
4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ‘ದಿ ಕಾಶ್ಮೀರ್ ಫೈಲ್ಸ್’; ಪರಿಪರಿಯಾಗಿ ವಿಶ್ಲೇಷಣೆ ಮಾಡಿದ ಆರ್ಜಿವಿ
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು