‘ದಿ ಕಾಶ್ಮೀರ್ ಫೈಲ್ಸ್’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?
The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಟನೆಗಾಗಿ ಮಿಥುನ್ ಚಕ್ರವರ್ತಿ ಅವರಿಗೆ 1.5 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಅನುಪಮ್ ಖೇರ್ ಅವರು 1 ಕೋಟಿ ರೂಪಾಯಿ ಪಡೆದಿದ್ದಾರೆ.
1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ತಯಾರಾದ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾದ ಬಗ್ಗೆ ಅನೇಕ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ. ಆ ಕಾರಣದಿಂದ ಈ ಚಿತ್ರಕ್ಕೆ ಸಖತ್ ಪ್ರಚಾರ ಸಿಕ್ಕಿದೆ. ಒಂದು ಕಮರ್ಷಿಯಲ್ ಸಿನಿಮಾದ ರೀತಿಯಲ್ಲೇ ಈ ಚಿತ್ರ ಗೆಲುವು ಕಂಡಿದೆ. ರಿಲೀಸ್ ಆಗಿ 12 ದಿನ ಕಳೆದ ಬಳಿಕವೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಈ ವಿಚಾರದಲ್ಲಿ ಅನೇಕ ಸ್ಟಾರ್ ನಟರ ಸಿನಿಮಾಗಳನ್ನೂ ಈ ಚಿತ್ರ ಹಿಂದಿಕ್ಕಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಯಾವುದೇ ಸ್ಟಾರ್ ಹೀರೋಗಳು ಅಭಿನಯಿಸಿಲ್ಲ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ವಿಥುನ್ ಚಕ್ರವರ್ತಿ (Mithun Chakraborty) ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಾದರೆ ಈ ಕಲಾವಿದರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎಂಬ ಬಗ್ಗೆ ಕೆಲವೆಡೆ ವರದಿ ಪ್ರಕಟ ಆಗಿದೆ. ಕೋಟ್ಯಂತರ ರೂಪಾಯಿಯನ್ನು ಕಲಾವಿದರ ಸಂಭಾವನೆಗಾಗಿ ವೆಚ್ಚ ಮಾಡಲಾಗಿದೆ. ಆ ಪೈಕಿ ಮಿಥುನ್ ಚಕ್ರವರ್ತಿ ಅವರು ಹೆಚ್ಚು ಸಂಬಳ ಪಡೆದಿದ್ದಾರೆ.
ಹಿರಿಯ ನಟರಾದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪುನೀತ್ ಇಸ್ಸಾರ್ ಅವರು ಈ ಸಿನಿಮಾದಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಮಿಥುನ್ ಚಕ್ರವರ್ತಿ ಅವರಿಗೆ 1.5 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಅನುಪಮ್ ಖೇರ್ ಅವರು 1 ಕೋಟಿ ರೂಪಾಯಿ ಪಡೆದಿದ್ದಾರೆ. ನಟಿ ಪಲ್ಲವಿ ಜೋಶಿ ಅವರು 50ರಿಂದ 70 ಲಕ್ಷ ರೂಪಾಯಿ ಸಂಭಾವನೆ ಪಡೆದಿರಬಹುದು ಎನ್ನಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಕೆಲಸಕ್ಕೆ 1 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎಂದು ವರದಿ ಆಗಿದೆ.
ಇನ್ನುಳಿದಂತೆ ಯುವ ನಟ ದರ್ಶನ್ ಕುಮಾರ್ ಅವರಿಗೆ 45 ಲಕ್ಷ ರೂಪಾಯಿ ನೀಡಲಾಗಿದೆ. ಪುನೀತ್ ಇಸ್ಸಾರ್ ಮತ್ತು ಮೃಣಾಲ್ ಕುಲಕರ್ಣಿ ಅವರು ತಲಾ 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಸಂಖ್ಯೆಗಳ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈ ಚಿತ್ರಕ್ಕೆ ಅಭಿಷೇಕ್ ಅಗರ್ವಾಲ್ ಬಂಡವಾಳ ಹೂಡಿದ್ದಾರೆ. ಈವರೆಗೂ 180 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮುನ್ನುಗ್ಗುತ್ತಿದೆ.
ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕಾರಣಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ. ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಕೆಲವು ಕಡೆಗಳಲ್ಲಿ ಸಿನಿಮಾದ ಪೈರಸಿ ಕಾಪಿ ಬಳಸಿ ಜನರಿಗೆ ಉಚಿತ ಪ್ರದರ್ಶನ ಮಾಡಿದ ಬಗ್ಗೆಯೂ ವರದಿ ಆಗಿದೆ. ಆ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಯಶಸ್ಸಿನ ಬಳಿಕ ಅವರ ಡಿಮ್ಯಾಂಡ್ ಹೆಚ್ಚಿದೆ. ಅವರು ನಿರ್ದೇಶಿಸಲಿರುವ ಮುಂದಿನ ಸಿನಿಮಾದ ಹೆಸರು ‘ದಿ ದಿಲ್ಲಿ ಫೈಲ್ಸ್’ ಆ ಚಿತ್ರದ ಬಗ್ಗೆ ಕೌತುಕ ಮೂಡಿದೆ.
ಇದನ್ನೂ ಓದಿ:
4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ‘ದಿ ಕಾಶ್ಮೀರ್ ಫೈಲ್ಸ್’; ಪರಿಪರಿಯಾಗಿ ವಿಶ್ಲೇಷಣೆ ಮಾಡಿದ ಆರ್ಜಿವಿ
‘ದಿ ಕಾಶ್ಮೀರ್ ಫೈಲ್ಸ್’ಗಿಂತಲೂ ಹೆಚ್ಚು IMDb ರೇಟಿಂಗ್ ಪಡೆದ ‘ಜೇಮ್ಸ್’; 10ಕ್ಕೆ 9.9 ನೀಡಿದ ಪ್ರೇಕ್ಷಕರು