ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳು ಕರುನಾಡಿನ ಬಹುತೇಕ ಚಿತ್ರಮಂದಿರಗಳ ಎದುರಿನಲ್ಲಿ ‘ಜೇಮ್ಸ್’ ಜಾತ್ರೆ ಮಾಡುತ್ತಿದ್ದಾರೆ. ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು (ಮಾ.17) ‘ಜೇಮ್’ ಸಿನಿಮಾ (James Movie) ಅದ್ದೂರಿಯಾಗಿ ರಿಲೀಸ್ ಆಗಿದೆ. ಬೆಂಗಳೂರಿನಲ್ಲೇ ಮೊದಲ ದಿನ ಈ ಚಿತ್ರಕ್ಕೆ 800ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ. ಎಲ್ಲ ಕಡೆಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಅದೇ ರೀತಿ ಬಾಲಿವುಡ್ನ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಕೂಡ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಮಾ.11ರಂದು ಬಿಡುಗಡೆಯಾದ ಈ ಹಿಂದಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿದೆ. ಪುನೀತ್ ರಾಜ್ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರ ಬಿಡುಗಡೆ ಆಗಿದ್ದರೂ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡುವವರ ಸಂಖ್ಯೆ ತಗ್ಗಿಲ್ಲ. ಇಂದು ಕೂಡ ಜನರು ಮುಗಿಬಿದ್ದು ಈ ಚಿತ್ರದ ಟಿಕೆಟ್ಗಳನ್ನು ಬುಕ್ ಮಾಡುತ್ತಿದ್ದಾರೆ. ಬೆಂಗಳೂರಿನ ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಡಿಬಂದಿದೆ.
‘ಜೇಮ್ಸ್’ ರಿಲೀಸ್ ಆಗುವುದಕ್ಕೂ ಮುನ್ನ ಬೆಂಗಳೂರಿನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಪ್ರತಿ ದಿನ 300ಕ್ಕೂ ಹೆಚ್ಚು ಶೋಗಳು ಮೀಸಲಾಗಿದ್ದವು. ದೊಡ್ಡ ಮಟ್ಟದಲ್ಲಿ ‘ಜೇಮ್ಸ್’ ತೆರೆಕಂಡಿರುವುದರಿಂದ ಸಹಜವಾಗಿಯೇ ಇಂದು (ಮಾ.17) ಪುನೀತ್ ಸಿನಿಮಾ ಹೆಚ್ಚು ಪರದೆಗಳನ್ನು ಪಡೆದುಕೊಂಡಿದೆ. ಅದರ ಪರಿಣಾಮವಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಅಂದಾಜು ನೂರು ಶೋಗಳು ಕಡಿಮೆ ಆಗಿವೆ. ಇಂದು ಈ ಸಿನಿಮಾ 220ಕ್ಕೂ ಹೆಚ್ಚು ಪ್ರದರ್ಶನ ಕಾಣಲಿದೆ. ಬಹುತೇಕ ಕಡೆಗಳಲ್ಲಿ ಚಿತ್ರದ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಆದ್ದರಿಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಅನುಪಮ್ ಖೇರ್, ಪಲ್ಲವಿ ಜೋಶಿ, ವಿಥುನ್ ಚರ್ಕವರ್ತಿ, ಪುನೀತ್ ಇಸ್ಸಾರ್, ದರ್ಶನ್ ಕುಮಾರ್ ಮುಂತಾದವರು ನಟಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಚಿತ್ರಕ್ಕೆ ಹೊಸ ಉತ್ತೇಜನ ಸಿಕ್ಕಿತು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಹರಿದುಬರುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶಿಸಿದ್ದಾರೆ.
60 ಕೋಟಿ ರೂಪಾಯಿ ದಾಟಿದ ಕಲೆಕ್ಷನ್:
ಮೊದಲ ದಿನ ಕೇವಲ 3.5 ಕೋಟಿ ರೂ. ಗಳಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಈಗ ಬರೋಬ್ಬರಿ 60 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿ ಬೀಗುತ್ತಿದೆ. ಈ ಸಾಧನೆ ಆಗಿರುವುದು ಕೇವಲ 5 ದಿನದಲ್ಲಿ! ದಿನದಿಂದ ದಿನಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚುತ್ತಿದೆ. ಈ ಚಿತ್ರಕ್ಕೆ ಜನರು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಸಿನಿಮಾಗಳ ಬಿಸ್ನೆಸ್ ಸೂತ್ರಗಳನ್ನೆಲ್ಲ ಈ ಸಿನಿಮಾ ಮುರಿದು ಹಾಕಿದೆ. ಈ ಹಿಂದೆ ಅಬ್ಬರಿಸಿದ್ದ ಅನೇಕ ಸ್ಟಾರ್ ನಟರ ಚಿತ್ರಗಳ ದಾಖಲೆಯಲ್ಲೂ ಮೀರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಮುನ್ನುಗ್ಗುತ್ತಿದೆ. ದೇಶಾದ್ಯಂತ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಐದನೇ ದಿನ ಬರೋಬ್ಬರಿ 18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಶೀಘ್ರಲ್ಲೇ ಸೆಂಚುರಿ ಬಾರಿಸಲಿದೆ.
5ನೇ ದಿನದ ಗಳಿಕೆಯನ್ನು ‘ಸುನಾಮಿ’ ಎಂದು ಟ್ರೇಡ್ ಅನಾಲಿಸಿಸ್ಟ್ ತರಣ್ ಆದರ್ಶ್ ಅವರು ಹೇಳಿದ್ದಾರೆ. ಮೊದಲ ದಿನ 3.55 ಕೋಟಿ ರೂಪಾಯಿ, ಎರಡನೇ ದಿನ 8.50 ಕೋಟಿ ರೂಪಾಯಿ, ಮೂರನೇ ದಿನ 15.10 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 15.05 ಕೋಟಿ ರೂಪಾಯಿ ಗಳಿಕೆ ಆಗಿತ್ತು. ಅದೆಲ್ಲವನ್ನೂ ಮೀರಿಸಿ 5ನೇ ದಿನ ಅತಿ ಹೆಚ್ಚು, ಅಂದರೆ 18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಇದನ್ನೂ ಓದಿ:
James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು