James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ
Puneeth Rajkumar: ಪುನೀತ್ ರಾಜ್ಕುಮಾರ್ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ‘ಜೇಮ್ಸ್’ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಈಗ ಸಿನಿಮಾ ರಿಲೀಸ್ ಆಗಿದೆ. ಚೇತನ್ ಕುಮಾರ್ ನಿರ್ದೇಶನದ ಸಿನಿಮಾ ಹೇಗಿದೆ? ಇಲ್ಲಿದೆ ‘ಜೇಮ್ಸ್’ ವಿಮರ್ಶೆ.
ಸಿನಿಮಾ: ಜೇಮ್ಸ್
ಕಲಾವಿದರು: ಪುನೀತ್ ರಾಜ್ಕುಮಾರ್, ಪ್ರಿಯಾ ಆನಂದ್, ಶರತ್ ಕುಮಾರ್, ಅನು ಪ್ರಭಾಕರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮೊದಲಾದವರು
ನಿರ್ದೇಶನ: ಚೇತನ್ ಕುಮಾರ್
ಸಂಗೀತ: ಚರಣ್ ರಾಜ್
ನಿರ್ಮಾಣ: ಕಿಶೋರ್ ಪ್ರೊಡಕ್ಷನ್ಸ್
ಸ್ಟಾರ್: 3.5/5
ಪುನೀತ್ ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಎಂಬ ಕಾರಣಕ್ಕೆ ಇದು ಭಾವನಾತ್ಮಕವಾಗಿ ಅಭಿಮಾನಿಗಳಿಗೆ ಕನೆಕ್ಟ್ ಆಗಿದೆ. ಈ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿರುವಾಗಲೇ ಅವರು ನಿಧನ ಹೊಂದಿದ್ದು ನಿಜಕ್ಕೂ ನೋವಿನ ಸಂಗತಿ. ಈಗ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿದೆ. ಪುನೀತ್ ಇಲ್ಲ ಎಂಬ ಸತ್ಯವನ್ನು ಎದೆಯಲ್ಲಿಟ್ಟುಕೊಂಡೇ ಜನರು ಈ ಚಿತ್ರ ನೋಡುತ್ತಿದ್ದಾರೆ. ಹೀಗಾಗಿ, ಫ್ಯಾನ್ಸ್ಗೆ ಸಿನಿಮಾ ಭಾವನಾತ್ಮಕವಾಗಿ ಸಖತ್ ಕನೆಕ್ಟ್ ಆಗುತ್ತಿದೆ. ಅವರನ್ನು ದೊಡ್ಡ ಪರದೆಯಲ್ಲಿ ನೋಡುತ್ತಿರುವುದು ಒಂದು ಕಡೆ ಖುಷಿ, ಮತ್ತೊಂದು ಕಡೆ ನೋವನ್ನು ನೀಡುತ್ತಿದೆ. ಭಾವನಾತ್ಮಕವಾಗಿ ಸಿನಿಮಾ ನೋಡಿದಾಗ ಈ ಚಿತ್ರದ ವಿಮರ್ಶೆ ಮಾಡುವುದು ಕಷ್ಟ ಎನಿಸುತ್ತದೆ. ಅಷ್ಟರ ಮಟ್ಟಿಗೆ ಪುನೀತ್ ನೆನಪು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಆ ವಿಚಾರದಲ್ಲಿ ಅಭಿಮಾನಿಗಳಿಗೆ ಒಂದು ವಿಶ್ಯೂವಲ್ ಟ್ರೀಟ್. ದೊಡ್ಡ ಪರದೆಯಲ್ಲಿ ಅಪ್ಪುನ ಸಂಭ್ರಮಿಸೋಕೆ ಸಿಕ್ಕ ಕೊನೆಯ ಅವಕಾಶ. ಇದೆಲ್ಲವನ್ನು ಬದಿಗಿಟ್ಟು ಒಂದು ವಿಮರ್ಶಾತ್ಮಕ ದೃಷ್ಟಿಯಲ್ಲಿ ನೋಡಿದಾಗ ಈ ಸಿನಿಮಾದಲ್ಲಿ ಕೆಲವು ಪ್ಲಸ್, ಮೈನಸ್ ಕಾಣುತ್ತವೆ. ಈ ಸಿನಿಮಾ ಹೇಗಿದೆ ಎಂದು ನೋಡೋದಾದರೆ…
ಜೇಮ್ಸ್ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಓರ್ವ ಪವರ್ಫುಲ್ ಸೋಲ್ಜರ್ ಈ ಸಂತೋಷ್ (ಪುನೀತ್ ರಾಜ್ಕುಮಾರ್). ಆತ ರೇಸ್ಗೆ ಇಳಿದರೆ, ಅಲ್ಲಿ ರೇಸ್ ಇರೋದಿಲ್ಲ, ಓನ್ಲಿ ಒನ್ ಮ್ಯಾನ್ ಶೋ. ಎದುರಾಳಿಯ ಎದೆಯಲ್ಲಿ ಭಯ ಹುಟ್ಟಿಸುತ್ತಾನೆ. ವೈರಿಗಳು ಎಷ್ಟೇ ಬರಲಿ, ಒಂದೇ ಗನ್ನಿಂದ ಎಲ್ಲರನ್ನೂ ಸುಟ್ಟು ನಾಶ ಮಾಡುತ್ತಾನೆ. ಅಷ್ಟು ಪವರ್ಫುಲ್ ಇರುವ ಈ ಜೇಮ್ಸ್ಗೆ ಗೆಳೆಯರೇ ಕುಟುಂಬ. ಅವರಿಗೋಸ್ಕರ ಏನು ಮಾಡೋಕೆ ಈತ ರೆಡಿ. ಆದರೆ, ಈ ಸಂತೋಷ್ ವೈರಿಗಳ ರಕ್ಷಣೆಗೆ ನಿಲ್ಲುತ್ತಾನೆ. ಅದು ಏಕೆ? ಇದರ ಉದ್ದೇಶ ಏನು? ಸಂತೋಷ್ ಹಿನ್ನೆಲೆ ಏನು? ಈ ಚಿತ್ರಕ್ಕೆ ‘ಜೇಮ್ಸ್’ ಅಂತ ಹೆಸರಿಡೋಕೆ ಕಾರಣ ಏನು? ಇದೆಲ್ಲವನ್ನೂ ತಿಳಿಯೋಕೆ ಸಿನಿಮಾ ಕಣ್ತುಂಬಿಕೊಳ್ಳಬೇಕು.
‘ಜೇಮ್ಸ್’ ಸಿನಿಮಾದಲ್ಲಿ ಎರಡು ಶೇಡ್ನಲ್ಲಿ ಪುನೀತ್ ಮಿಂಚಿದ್ದಾರೆ. ಸಿನಿಮಾ ಆರಂಭದಲ್ಲಿ ಅವರ ಎಂಟ್ರಿ ಥ್ರಿಲ್ ನೀಡುತ್ತದೆ. ಕಾರ್ ಚೇಸಿಂಗ್ ದೃಶ್ಯಗಳು ಪ್ರೇಕ್ಷಕನ ಮೈಯಲ್ಲಿ ಪವರ್ ಹರಿಸುತ್ತದೆ. ಇಡೀ ಚಿತ್ರವನ್ನು ಪುನೀತ್ ಆವರಿಸಿಕೊಂಡಿದ್ದಾರೆ. ವೈರಿಗಳನ್ನು ರಕ್ಷಣೆ ಮಾಡಿ, ಆ ಬಳಿಕ ಅವರಿಗೆ ದುಸ್ವಪ್ನವಾಗಿ ಕಾಡುವ ಮೇಜರ್ ಸಂತೋಷ್ ಆಗಿ ಪುನೀತ್ ಗಮನ ಸೆಳೆಯುತ್ತಾರೆ. ಫೈಟಿಂಗ್ ದೃಶ್ಯಗಳಲ್ಲಿ ಪುನೀತ್ ಹಾಕಿದ ಶ್ರಮ ಎದ್ದು ಕಾಣುತ್ತದೆ. ಪೂರ್ಣಗೊಳ್ಳದೆ ಇರುವ ಕೆಲ ದೃಶ್ಯಗಳಿಗೆ ಕತ್ತರಿ ಹಾಕದೆ, ಅದನ್ನು ಬೇರೆ ರೀತಿಯಲ್ಲಿ ತೋರಿಸುವ ಚಾಕಚಕ್ಯತೆಯನ್ನು ನಿರ್ದೇಶಕ ಚೇತನ್ ಕುಮಾರ್ ಮಾಡಿದ್ದಾರೆ. ಪರದೆಯಮೇಲೆ ಪುನೀತ್ ಅವರನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳಿಗೆ, ಅಪ್ಪು ಇಲ್ಲ ಎಂಬ ನೋವು ಪ್ರತಿ ದೃಶ್ಯದಲ್ಲೂ ಕಾಡದೆ ಇರದು.
ಈ ಸಿನಿಮಾದಲ್ಲಿ ನಿಶಾ ಗಾಯಕ್ವಾಡ್ಗೂ (ಪ್ರಿಯಾ ಆನಂದ್) ಜೇಮ್ಸ್ ನಡುವೆ ಒಂದು ಲವ್ ಟ್ರ್ಯಾಕ್ ಸಾಗುತ್ತದೆಯಾದರೂ ಅದಕ್ಕೆ ನಿರ್ದೇಶಕರು ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ಚಿತ್ರದ ಕಥೆ ಹಾಗೂ ನಿರೂಪಣೆ ವಿಚಾರದಲ್ಲಿ ನಿರ್ದೇಶಕರು ಮತ್ತಷ್ಟು ಗಮನ ವಹಿಸಬೇಕಿತ್ತು. ಈ ಸಿನಿಮಾದಲ್ಲಿ ಹೇರಳವಾಗಿ ವಿಲನ್ಗಳಿದ್ದಾರೆ. ಕೆಲವು ಕಡೆಗಳಲ್ಲಿ ಇದೇ ವಿಚಾರ ಪ್ರೇಕ್ಷಕನಲ್ಲಿ ಗೊಂದಲ ಮೂಡಿಸುತ್ತದೆ. ಆ ಗೊಂದಲ ಪರಿಹರಿಸುವ ಕೆಲಸವೂ ನಿರ್ದೇಶಕರಿಂದ ಆಗಬೇಕಿತ್ತು.
ಶ್ರೀಕಾಂತ್, ಆರ್. ಶರತ್ಕುಮಾರ್, ಮುಕೇಶ್ ರಿಷಿ, ಆದಿತ್ಯ ಮೆನನ್ ಮೊದಲಾದವರು ವಿಲನ್ ಆಗಿ ಮಿಂಚಿದ್ದಾರೆ. ಸಾಧು ಕೋಕಿಲ, ಅನು ಪ್ರಭಾಕರ್ ಮೊದಲಾದವರ ಪಾತ್ರ ಹೀಗೆ ಬಂದು ಹಾಗೆ ಹೋಗುತ್ತದೆ. ಶೈನ್ ಶೆಟ್ಟಿ, ಚಿಕ್ಕಣ್ಣ, ತಿಲಕ್, ಹರ್ಷ ಈ ನಾಲ್ವರು ಪುನೀತ್ ಗೆಳೆಯರ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಮಾಡಿರುವ ಪಾತ್ರ ಎಂತಹದ್ದು ಎಂಬುದನ್ನು ಚಿತ್ರಮಂದಿರದಲ್ಲೇ ಕಣ್ತುಂಬಿಕೊಳ್ಳಬೇಕು. ಸಿಕ್ಕ ಪ್ರಿಯಾ ಆನಂದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಿನ್ನೆಲೆ ಸಂಗೀತದ ಮೂಲಕ ಸಂಗೀತ ನಿರ್ದೇಶಕ ಚರಣ್ ರಾಜ್ ಚಿತ್ರದ ತೂಕ ಹೆಚ್ಚಿಸಿದ್ದಾರೆ. ಅವರ ಬತ್ತಳಿಕೆಯಿಂದ ಇನ್ನೂ ಉತ್ತಮ ಹಾಡುಗಳನ್ನು ತರಲು ಅವಕಾಶ ಇತ್ತು. ಸ್ವಾಮಿ ಗೌಡ ಛಾಯಾಗ್ರಹಣ ಚಿತ್ರದ ಅಂದ ಹೆಚ್ಚಿಸಿದೆ. ಕಾರ್ ಚೇಸಿಂಗ್ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ಸಂಕಲನಕಾರ ದೀಪು ಎಸ್. ಕುಮಾರ್ ಅವರಿಗೆ ಇತ್ತು.
ಇದನ್ನೂ ಓದಿ: James Movie: ‘ಜೇಮ್ಸ್’ ಜಾತ್ರೆ: ಪುನೀತ್ ಸಿನಿಮಾಗೆ ಸಿಕ್ತು ದಾಖಲೆ ಶೋ
James First Half Review: ಹೇಗಿದೆ ಪುನೀತ್ ನಟನೆಯ ‘ಜೇಮ್ಸ್’ ಚಿತ್ರದ ಫಸ್ಟ್ಹಾಫ್? ಇಲ್ಲಿದೆ ಫುಲ್ ಡಿಟೈಲ್ಸ್
Published On - 9:08 am, Thu, 17 March 22