
ನಟಿ ಕಂಗನಾ ರಣಾವತ್ (Kangana Ranaut) ಅವರು ಯಾವುದೇ ವಿಚಾರವಾಗಲಿ ಹೊಗಳಿದ್ದಕಿಂತ ತೆಗಳಿದ್ದೇ ಹೆಚ್ಚು. ಯಾವುದಾದರೂ ಸಿನಿಮಾ ರಿಲೀಸ್ ಆದರೆ ಅದನ್ನು ನೋಡಿ ಟೀಕೆ ಮಾಡಿದ್ದಿದೆ. ವಿವಾದಗಳನ್ನು ಅವರು ಸದಾ ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಆದರೆ, ಈಗ ಅವರು ‘ಕಾಂತಾರ’ ಸಿನಿಮಾ ನೋಡಿ ಬಂದು ಅದನ್ನು ಮನಸಾರೆ ಹೊಗಳಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಅವರ ಕೆಲಸವನ್ನು ಬಾಯ್ತುಂಬ ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಟಿಯ ಬಾಯಿಂದ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದ್ದು ರಿಷಬ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.
ಕಂಗನಾ ಯಾವ ಚಿತ್ರವನ್ನೂ ಹಾಗೆ ಹೊಗಳುವವರಲ್ಲ. ಆದರೆ, ‘ಕಾಂತಾರ’ವನ್ನು ಮೆಚ್ಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರವನ್ನು ಕುಟುಂಬ ಸಮೇತ ನೋಡಿ ಬಂದಿದ್ದಾರೆ ಕಂಗನಾ. ಸಿನಿಮಾ ಯಾವ ರೀತಿಯ ಅನುಭವ ನೀಡಿತು ಎಂಬ ಬಗ್ಗೆ ವಿಡಿಯೋ ಮಾಡಿದ್ದಾರೆ. ‘ನಾನು ಕುಟುಂಬದವರ ಜತೆ ಕಾಂತಾರ ನೋಡಿ ಬಂದೆ. ಈಗಲೂ ನಾನು ಶೇಕ್ ಆಗುತ್ತಿದ್ದೇನೆ. ಎಂತಹ ಸ್ಫೋಟಕ ಅನುಭವ. ರಿಷಬ್ ಶೆಟ್ಟಿ ಅವರೇ ನಿಮಗೆ ಹ್ಯಾಟ್ಸ್ ಆಫ್. ಬರವಣಿಗೆ, ನಿರ್ದೇಶನ, ನಟನೆ, ಆ್ಯಕ್ಷನ್ ಎಲ್ಲವೂ ಬ್ರಿಲಿಯಂಟ್. ನಂಬೋಕೆ ಸಾಧ್ಯವಾಗುತ್ತಿಲ್ಲ’ ಎಂದು ವಿಡಿಯೋದಲ್ಲಿ ಕಂಗನಾ ಹೇಳಿದ್ದಾರೆ.
‘ಸಂಪ್ರದಾಯ, ಜಾನಪದ ವಿಚಾರ, ಸ್ಥಳೀಯ ಸಮಸ್ಯೆಗಳನ್ನು ಸಿನಿಮಾದಲ್ಲಿ ಹದವಾಗಿ ಬೆರೆಸಲಾಗಿದೆ. ಎಂಥ ಸುಂದರ ಛಾಯಾಗ್ರಹಣ, ಸಿನಿಮಾ ಎಂದರೆ ಇದು. ಒಂದು ವಾರಗಳ ಕಾಲ ಈ ಹ್ಯಾಂಗೋವರ್ನಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಕಂಗನಾ ಘೋಷಿಸಿದ್ದಾರೆ.
‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುಮಾರು 170 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಮೂಲಕ ಕನ್ನಡದ ಹಲವು ಸಿನಿಮಾಗಳು ಮಾಡಿದ್ದ ದಾಖಲೆಗಳನ್ನು ಈ ಚಿತ್ರ ಉಡೀಸ್ ಮಾಡಿದೆ. ಈ ಮೂಲಕ ಈ ವರ್ಷ ತೆರೆಗೆ ಬಂದ ಕನ್ನಡದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಇದಾಗಿದೆ. ಮೊದಲ ಸ್ಥಾನದಲ್ಲಿ ‘ಕೆಜಿಎಫ್ 2’ ಇದೆ.
ಇದನ್ನೂ ಓದಿ: ‘ಪ್ರಧಾನಿ ನರೇಂದ್ರ ಮೋದಿ ಕಾಂತಾರ ನೋಡ್ತಾರೆ ಅನ್ನೋದು ಸುಳ್ಳು ಸುದ್ದಿ’; ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್
‘ಕಾಂತಾರ’ ಚಿತ್ರದಿಂದ ರಿಷಬ್ ಶೆಟ್ಟಿ ಅವರ ಖ್ಯಾತಿ ಹೆಚ್ಚಿದೆ. ಅವರು ವಿಶ್ವ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಪರ ರಾಜ್ಯಗಳಿಗೂ ತೆರಳಿ ಅವರು ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದ್ದಾರೆ.
Published On - 6:58 am, Fri, 21 October 22