ಬಾಲಿವುಡ್ ನಿರ್ಮಾಪಕರ ಮೋಸ: ‘ಸ್ತ್ರೀ 2’, ‘ಛಾವಾ’ ನಿರ್ಮಾಪಕ ಮಾಡಿದ್ದೇನು?
Dinesh Vijayan: ಬಾಲಿವುಡ್ ಸಿನಿಮಾ ನಿರ್ಮಾಪಕರುಗಳ ವಿರುದ್ಧ ಅದರಲ್ಲೂ ಸೂಪರ್ ಹಿಟ್ ಸಿನಿಮಾಗಳು ಎನಿಸಿಕೊಂಡಿರುವ ‘ಸ್ತ್ರೀ 2’ ಮತ್ತು ರಶ್ಮಿಕಾ ಮಂದಣ್ಣ-ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾದ ನಿರ್ಮಾಪಕ ದಿನೇಶ್ ವಿಜಯನ್ ವಿರುದ್ಧ ಅನೈತಿಕ ವ್ಯವಹಾರ, ಮೋಸದ ಆರೋಪವನ್ನು ಹಿರಿಯ ಸಿನಿಮಾ ವಿಶ್ಲೇಷಕರೊಬ್ಬರು ಹೊರಿಸಿದ್ದಾರೆ. ಏನಿವು ಆರೋಪಗಳು?

ಕೆಲ ಸಿನಿಮಾ ನಿರ್ಮಾಪಕರುಗಳು (Producer) ತಮ್ಮ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಜನರಿಗೆ ಮೋಸ ಮಾಡಿ ಅವರನ್ನು ಚಿತ್ರಮಂದಿರಗಳಿಗೆ ಕರೆಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಹಿಂದಿಯಲ್ಲಿ ಹಿಟ್ ಎನಿಸಿಕೊಂಡಿದ್ದ ಕೆಲ ಸಿನಿಮಾಗಳು ಸಹ ಈ ರೀತಿಯ ಮೋಸ ಮಾಡಿಯೇ ಹಿಟ್ ಆಗಿದ್ದು ಎನ್ನುವ ಆರೋಪ ಎದುರಾಗಿದೆ. ಹಿರಿಯ ಟ್ರೇಡ್ ಅನಲಿಸ್ಟ್ ಕೋಮಲ್ ನಹತಾ ಬಾಲಿವುಡ್ ನಿರ್ಮಾಪಕರುಗಳ ಮೇಲೆ ಮೋಸದ ಆರೋಪ ಮಾಡಿದ್ದಾರೆ.
ಕಳೆದ ವರ್ಷ ಬಿಡುಗಡೆ ಆದ ‘ಸ್ತ್ರೀ 2’ ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಬರೆಯಿತು. 800 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿತು. ಇದೇ ವರ್ಷ ಬಿಡುಗಡೆ ಆದ ಐತಿಹಾಸಿಕ ಕತೆಯುಳ್ಳ ಸಿನಿಮಾ ‘ಛಾವಾ’ ಸಹ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಸಿತ್ತು, ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ 800 ಕೋಟಿಗೂ ಹೆಚ್ಚು ಮೊತ್ತ ಗಳಿಸಿತು. ಆದರೆ ಇದೀಗ ಹಿರಿಯ ಟ್ರೇಡ್ ಅನಲಿಸ್ಟ್ ಕೋಮಲ್ ಅವರು ಈ ಎರಡೂ ಸಿನಿಮಾಗಳು ಅಡ್ಡದಾರಿ ಹಿಡಿದು ಸಿನಿಮಾಗಳನ್ನು ಗೆಲ್ಲಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.
ಕೋಮಲ್ ಆರೋಪ ಮಾಡಿರುವಂತೆ, ನಿರ್ಮಾಪಕರುಗಳು ಉದ್ದೇಶಪೂರ್ವಕವಾಗಿ ಸಿನಿಮಾಗಳ ಸೀಟುಗಳನ್ನು ಬುಕ್ ಮಾಡಿ ಬ್ಲಾಕ್ ಮಾಡುತ್ತಿದ್ದಾರಂತೆ. ಮೊದಲ ಕೆಲ ವಾರ ಸಿನಿಮಾಗಳ ಟಿಕೆಟ್ಗಳು ಜನರಿಗೆ ಸಿಗದಂತೆ ಮಾಡಿ, ಅದೇ ಸಮಯದಲ್ಲಿ ಸಿನಿಮಾದ ಬಗ್ಗೆ ನಕಲಿ ಪ್ರಚಾರ ಮಾಡಿಸಿ, ಕಲೆಕ್ಷನ್ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಿಬಿಟ್ಟು ನಕಲಿ ಟ್ರೇಂಡ್ ಒಂದನ್ನು ಸೃಷ್ಟಿಸಿ ಜನರನ್ನು ಚಿತ್ರಮಂದಿರದತ್ತ ಕರೆತರುತ್ತಾರೆ. ಇದೇ ನೀತಿಯನ್ನು ‘ಸ್ತ್ರೀ 2’ ಮತ್ತು ‘ಛಾವಾ’ ಸಿನಿಮಾದ ನಿರ್ಮಾಪಕರು ಬಳಸಿದ್ದಾರೆ ಎಂದು ಕೋಮಲ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿ ಆಸಿಫ್ ಹತ್ಯೆ
‘ಸ್ತ್ರೀ 2’, ‘ಛಾವಾ’ ನಿರ್ಮಾಪಕ ದಿನೇಶ್ ವಿಜಯನ್ ವಿರುದ್ಧ ನೇರ ಆರೋಪವನ್ನೇ ಕೋಮಲ್ ಮಾಡಿದ್ದು, ದಿನೇಶ್ ವಿಜಯನ್ ಕೆಲ ವರ್ಷಗಳಿಂದಲೂ ಹೀಗೆ ಸೀಟು ಬ್ಲಾಕ್ ತಂತ್ರ ಅನುಸರಿಸುತ್ತಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾರೆ. ಇದನ್ನು ಈ ಮೊದಲೂ ಸಹ ನಾನು ಗುರುತಿಸಿ ಖಂಡಿಸಿದ್ದೆ. ಇದರಿಂದಾಗಿ ಈಗ ಜನ ನಿಜವಾದ ಹಿಟ್ ಸಿನಿಮಾಗಳನ್ನೂ ಸಹ ಅನುಮಾನದಿಂದ ನೋಡುವಂತಾಗಿದೆ’ ಎಂದಿದ್ದಾರೆ.
ಸೀಟು ಬ್ಲಾಕ್ ತಂತ್ರ ಕೇವಲ ಬಾಲಿವುಡ್ಗೆ ಮಾತ್ರವೇ ಸೀಮಿತವಲ್ಲ. ಹಲವು ಚಿತ್ರರಂಗಗಳಲ್ಲಿ ಈ ಸೀಟು ಬ್ಲಾಕ್ ತಂತ್ರವನ್ನು ನಿರ್ಮಾಪಕರುಗಳು ಬಳಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಸೀಟುಗಳನ್ನು ಬ್ಲಾಕ್ ಮಾಡಿಸಿ ನಕಲಿ ಬೇಡಿಕೆ ತೋರಿಸಲಾಗುತ್ತದೆ. ಶೋಗಳು ಬುಕ್ ಆಗುತ್ತಿರುವುದನ್ನು ಗಮನಿಸುವ ಜನ ಸಿನಿಮಾ ಚೆನ್ನಾಗಿರಬಹುದು ಹಾಗಾಗಿ ಹೆಚ್ಚು ಜನ ಸಿನಿಮಾ ನೋಡುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಆ ಮೂಲಕ ತಾವೂ ಸಹ ಸಿನಿಮಾ ನೋಡಲು ಉತ್ಸುಕತೆ ತೋರಿಸುತ್ತಾರೆ. ಕನ್ನಡದಲ್ಲಿಯೂ ಕೆಲವಾರು ನಿರ್ಮಾಪಕರುಗಳು ಬುಕ್ಮೈಶೋನಲ್ಲಿ ಹೀಗೆ ಸೀಟು ಬ್ಲಾಕ್ ಮಾಡಿದ್ದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Fri, 8 August 25




