15 ವರ್ಷದ ಬಳಿಕ ಬಾಲಿವುಡ್ಗೆ ನಟಿ ತ್ರಿಷಾ ಎಂಟ್ರಿ, ಕನ್ನಡತಿ ಜೊತೆ ನಟನೆ
ದಕ್ಷಿಣ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾದ ತ್ರಿಷಾ, ಬರೋಬ್ಬರಿ 15 ವರ್ಷಗಳ ಬಳಿಕ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ. ತ್ರಿಷಾ, ಕನ್ನಡದ ನಟಿಯೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರಂತೆ.
ದಕ್ಷಿಣದಲ್ಲಿ ಮಿಂಚಿದ ಹಲವು ನಟಿಯರಿಗೆ ಬಾಲಿವುಡ್ನಲ್ಲಿ ಮಿಂಚಲಾಗಲಿಲ್ಲ. ದಕ್ಷಿಣದ ನಟಿಯರಿಗೆ ಬಾಲಿವುಡ್ನವರು (Bollywood) ಅವಕಾಶವೇ ಕೊಡುತ್ತಿರಲಿಲ್ಲ. ಅಲ್ಲದೆ ದಕ್ಷಿಣದ ನಟಿಯರನ್ನು ಅವರ ಬಣ್ಣ, ಆಕಾರಕ್ಕಾಗಿ ಬಾಲಿವುಡ್ ನಟಿಯರು ಚೇಡಿಸಿದ್ದೂ ಉಂಟು. ಈ ಅವಮಾನಗಳನ್ನು ಸಹಿಸಲಾರದೆ ಕೆಲವು ಒಳ್ಳೆಯ ದಕ್ಷಿಣದ ನಟಿಯರು ಬಾಲಿವುಡ್ ನತ್ತ ತಲೆ ಕೂಡ ಹಾಕಲಿಲ್ಲ. ಅನುಷ್ಕಾ ಶೆಟ್ಟಿ ಒಂದೇ ಒಂದು ಹಿಂದಿ ಸಿನಿಮಾದಲ್ಲಿಯೂ ನಟಿಸಲಿಲ್ಲ. ನಯನತಾರಾ (Nayantara) ನಟಿಸಿದ್ದು ಇತ್ತೀಚೆಗಷ್ಟೆ. ನಟಿ ತ್ರಿಷಾ ಕೇವಲ ಒಂದೇ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿ ಬಾಲಿವುಡ್ ಸಹವಾಸ ಬೇಡವೆಂದು ಸುಮ್ಮನಾಗಿದ್ದರು. ಈಗ ಮತ್ತೆ 15 ವರ್ಷದ ಬಳಿಕ ಬಾಲಿವುಡ್ನತ್ತ ಪಾದ ಬೆಳೆಸಿದ್ದಾರೆ. ಅದೂ ಅಲ್ಲಿಯೂ ಸಹ ಕನ್ನಡತಿಯೊಬ್ಬರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
2014 ರಲ್ಲಿ ಬಿಡುಗಡೆ ಆಗಿದ್ದ ಹಾಸ್ಯಪ್ರಧಾನ ಸಿನಿಮಾ ‘ಕಟ್ಟಾ-ಮೀಟಾ’ನಲ್ಲಿ ತ್ರಿಷಾ ಜಿಲ್ಲಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ನಾಯಕ ಅಕ್ಷಯ್ ಕುಮಾರ್. ಜಿಪುಣ ಹಾಗೂ ಭ್ರಷ್ಟ ರಸ್ತೆ ಕಾಂಟ್ರ್ಯಾಕ್ಟರ್ ಪಾತ್ರದಲ್ಲಿ ಅಕ್ಷಯ್ ನಟಿಸಿದ್ದರು. ಇಬ್ಬರ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿತ್ತು. ಆ ಸಿನಿಮಾದ ಹಾಸ್ಯ ದೃಶ್ಯಗಳು ಈಗಲೂ ಫೇಸ್ಬುಕ್, ಯೂಟ್ಯೂಬ್ಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಬಾಲಿವುಡ್ಗೆ ತ್ರಿಷಾ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿಯೂ ಸಹ ಸ್ಟಾರ್ ನಟರೊಬ್ಬರ ಎದುರು ನಟಿಸಲಿದ್ದಾರೆ.
ಇದನ್ನೂ ಓದಿ:ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ನಯನತಾರಾ?
ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾನಲ್ಲಿ ತ್ರಿಷಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ, ಈಗಾಗಲೇ ರಶ್ಮಿಕಾ ಮಂದಣ್ಣ ನಾಯಕಿ ಎಂದು ಘೋಷಣೆಯಾಗಿರುವ ಸಲ್ಮಾನ್ ಖಾನ್ರ ಸಿನಿಮಾ ‘ಸಿಕಂಧರ್’ನಲ್ಲಿ ತ್ರಿಷಾ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ. ‘ಸಿಕಂಧರ್’ ಸಿನಿಮಾವನ್ನು ತಮಿಳಿನ ಎಆರ್ ಮುರುಗದಾಸನ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಎರಡನೇ ನಾಯಕಿ ಪಾತ್ರಕ್ಕೆ ತ್ರಿಷಾರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ತ್ರಿಷಾ ನಾಯಕಿಯಾಗಿ ನಟಿಸಲು ಆರಂಭಿಸಿ 22 ವರ್ಷಗಳಾಗಿವೆ. ಈಗಲೂ ಸಹ ತ್ರಿಷಾ ಬೇಡಿಕೆ ಕಳೆದುಕೊಂಡಿಲ್ಲ. ತ್ರಿಷಾ ಕೈಯಲ್ಲಿ ಪ್ರಸ್ತುತ ಐದು ಸಿನಿಮಾಗಳಿವೆ. ‘ವಿಧ ಮುಯರ್ಚಿ’ ಹೆಸರಿನ ಆಕ್ಷನ್ ಥ್ರಿಲ್ಲರ್ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ‘ರಾಮ್’ ಮತ್ತು ‘ಐಡೆಂಟಿಟಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರಾಮ್’ ಸಿನಿಮಾನಲ್ಲಿ ಮೋಹನ್ಲಾಲ್ ನಾಯಕ. ಕಮಲ್ ಹಾಸನ್ ನಟಿಸಿ, ಮಣಿರತ್ನಂ ನಿರ್ದೇಶನ ಮಾಡುತ್ತಿರುವ ‘ಥಗ್ ಲೈಫ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ತೆಲುಗಿನ ‘ವಿಶ್ವಂಭರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಸಲ್ಮಾನ್ ಖಾನ್ ಜೊತೆಗೆ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ