ಟಿವಿ9 ಬಾಂಗ್ಲಾ ಬಯೋಸ್ಕೋಪ್ ಅವಾರ್ಡ್: ‘ಹಳೆಯ ದಿನಗಳು ಮತ್ತೆ ಬರಲಿ’
TV9 Bangla: ಟಿವಿ9 ಬಾಂಗ್ಲಾ ಗೊರೆರ್ ಬಯೋಸ್ಕೋಪ್ ಅವಾರ್ಡ್ ಕಾರ್ಯಕ್ರಮ ಕೊಲ್ಕತ್ತನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಟಿವಿ9 ಸಿಇಓ, ಎಂಡಿ ಬರುಣ್ ದಾಸ್ ಅವರು ಬಾಂಗ್ಲಾ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.
ಟಿವಿ9 ಬಾಂಗ್ಲಾ ಗೊರೇರ್ ಬಯೋಸ್ಕೋಪ್ ಅವಾರ್ಡ್ ಕಾರ್ಯಕ್ರಮ ಕೊಲ್ಕತ್ತದಲ್ಲಿ ನಿನ್ನೆ (ಡಿಸೆಂಬರ್ 02) ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಟಿವಿ9 ಸಿಇಓ ಬರುಣ್ ದಾಸ್ ಜೊತೆಗೆ ಹಲವು ಸಿನಿಮಾ, ರಾಜಕೀಯ ತಾರೆಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಟಿವಿ9 ಸಿಇಓ, ಎಂಡಿ ಬರುಣ್ ದಾಸ್, ‘ಕೊಲ್ಕತ್ತ, ವಿಶ್ವದ ಕ್ರಿಯಾಶೀಲ ನಗರಗಳಲ್ಲಿ ಒಂದಾಗಿದೆ. ಖ್ಯಾತ ಇತಿಹಾಸಕಾರ ಎರಿಕ್ ಕೊಲ್ಕತ್ತ ನಗರವನ್ನು ವೆನ್ನಿಸ್, ಫ್ಲೋರೆನ್ಸ್ ನಗರಗಳಿಗೆ ಹೋಲಿಸಿದ್ದಾರೆ’ ಎಂದರು.
‘ಬೆಂಗಾಳಿ ಚಿತ್ರರಂಗದ ಮಾರುಕಟ್ಟೆ ಗಾತ್ರ ಹಿರಿದಾಡುತ್ತಿದೆ. ಈ ವರ್ಷ ಅದು 100 ಕೋಟಿಯನ್ನು ದಾಟಲಿದೆ. ಅಲ್ಲು ಅರ್ಜುನ್ ಇಲ್ಲಿನ ಮೆಚ್ಚಿನ ನಟ. ಬೆಂಗಾಳಿ ಚಿತ್ರರಂಗ ಪ್ರಾದೇಶಿಕ ಚಿತ್ರರಂಗ ಆದರೆ ಇಲ್ಲಿನ ಕ್ರಿಯಾಶೀಲತೆ ಭಾರತದ ಹಲವು ಪ್ರಮುಖ ನಗರಗಳಿಗಿಂತಲೂ ಹೆಚ್ಚಿದೆ. ಬಂಗಾಳದಲ್ಲಿ ಇರುವಷ್ಟು ಕ್ರಿಯಾಶೀಲ ಮನಸ್ಸುಗಳ ಸಂಖ್ಯೆ ದೊಡ್ಡದು’ ಎಂದಿದ್ದಾರೆ.
‘ಒಂದು ಕಾಲದಲ್ಲಿ ಬೆಂಗಾಳಿ ಕ್ರಿಯಾಶೀಲ ವ್ಯಕ್ತಿಗಳು ಬಾಲಿವುಡ್ ಅನ್ನು ಆಳುತ್ತಿದ್ದರು. ಭಾರತದ ಅತ್ಯುತ್ತಮ ನಿರ್ದೇಶಕರುಗಳ ಸಾಲಿನಲ್ಲಿರುವ ಸತ್ಯಜಿತ್ ರೇ, ರಿತ್ವಿಕ್ ಘಾಟಕ್, ಮೃಣಾಲ್ ಸೇನ್ ಅವರುಗಳು ಬೆಂಗಾಳಿಗಳು ಎಂಬುದು ಹೆಮ್ಮೆಯ ವಿಷಯ. ಬೆಂಗಾಲಿ ಟಿವಿ ಉದ್ಯಮ 50 ವರ್ಷಗಳನ್ನು ಈ ವರ್ಷ ಪೂರೈಸುತ್ತಿದೆ. ಇದೇ ವರ್ಷ ನಾವು ಖ್ಯಾತ ನಿರ್ದೇಶಕ ರಿತ್ವಕ್ ಘಾಟಕ್ ಅವರ ನೂರನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. 2023 ರಲ್ಲಿ ನಾವು ಮೃಣಾಲ್ ಸೇನ್ ಅವರ 100ನೇ ವರ್ಷದ ಜಯಂತಿಯನ್ನು ಆಚರಿಸಿದ್ದೇವೆ’ ಎಂದರು ಬರುಣ್ ದಾಸ್.
ಒಟಿಟಿ ಮತ್ತು ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ವಿಷಯವಾಗಿ ಮಾತನಾಡಿದ ಬರುಣ್ ದಾಸ್, ‘ಒಟಿಟಿ ಬೆಂಗಾಳಿ ಚಿತ್ರರಂಗ ಬೆಳೆಯಲು ಹೆಚ್ಚು ಸಹಾಯ ಮಾಡುತ್ತಿದೆ. ವಿತರಕರ ಅವಶ್ಯಕತೆಯನ್ನು ಅದು ತೆಗೆದು ಹಾಕುತ್ತಿದೆ. ಚಿತ್ರರಂಗದ ಕ್ರಿಯಾಶೀಲ ಕಾರ್ಯ ನೇರವಾಗಿ ಪ್ರೇಕ್ಷಕನಿಗೆ ತಲುಪುವುದು ಇದರಿಂದ ಸಾಧ್ಯವಾಗಿದೆ. ಇದರಿಂದ ಪ್ರೇಕ್ಷಕ ಮತ್ತೆ ರಾಜನಾಗಿದ್ದಾನೆ. ಆತ ಈಗ ತನಗೆ ಬೇಕಾದುದ್ದನ್ನು ಬೇಕಾದ ಕಡೆಯಿಂದ ನೋಡಬಹುದಾಗಿದೆ’ ಎಂದಿದ್ದಾರೆ. ಎಐ ಬಗ್ಗೆಯೂ ಮಾತನಾಡಿದ ಬರುಣ್ ದಾಸ್, ‘ಎಐ ಒಂದು ಪೆಡಂಭೂತದಂತಿದೆ, ಆದರೆ ಕ್ರಿಯಾಶೀಲತೆಯ ಅಸ್ತ್ರದಿಂದ ನಾವು ಅದನ್ನು ಮಣಿಸಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.
ತಮ್ಮ ಭಾಷಣದಲ್ಲಿ ಬೆಂಗಳೂರಿನ ಉಲ್ಲೇಖ ಮಾಡಿದ ಬರುಣ್ ದಾಸ್, ‘ಐಟಿ ವಿಭಾಗದಲ್ಲಿ ಅದ್ಭುತ ಪ್ರಗತಿ ತೋರಿಸಿರುವ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿದೆ. ಇದೇ ಕಾರ್ಯವನ್ನು ಕೊಲ್ಕತ್ತ ಸಹ ಮಾಡಬೇಕಿದೆ. ಇಲ್ಲಿ ಸಾಕಷ್ಟು ಕ್ರಿಯಾಶೀಲ ಪ್ರತಿಭಾವಂತರಿದ್ದಾರೆ. ಮಾತ್ರವಲ್ಲದೆ ಭಾರತದ ಇತರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ಅತ್ಯಂತ ಕಡಿಮೆ ಮೌಲ್ಯಕ್ಕೆ ಕ್ರಿಯಾಶೀಲರು, ಪ್ರತಿಭಾವಂತರು ಲಭ್ಯವಿದ್ದಾರೆ. ಕೈಗೆಟುಕುವ ಮೌಲ್ಯದಲ್ಲಿ ಸಿಗುವುದು ಮಾತ್ರವೇ ಅಲ್ಲದೆ ಗುಣಮಟ್ಟದ ಕಾರ್ಯವನ್ನೂ ಸಹ ಇಲ್ಲಿನ ಪ್ರತಿಭಾವಂತರು ನೀಡಬಲ್ಲರು. ನಮಗೆ ಅವಕಾಶವಿದೆ, ಪ್ರತಿಭೆ ಇದೆ, ನಾವು ಬೆಂಗಾಳಿ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬಹುದಾಗಿದೆ’ ಎಂದಿದ್ದಾರೆ.
ಅಲ್ಲು ಅರ್ಜುನ್ ಅವರು ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಬೇಕಿತ್ತು, ಆದರೆ ಕೊನೆ ಕ್ಷಣದಲ್ಲಿ ಅಲ್ಲು ಅರ್ಜುನ್, ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ಸಿಇಓ ಬರುಣ್ ದಾಸ್, ‘ಕೆಲವು ಅನಿವಾರ್ಯ ಕಾರಣಗಳಿಂದಾಗಿ ಅಲ್ಲು ಅರ್ಜುನ್ ಇಂದು ಇಲ್ಲಿ ಬರಲಾಗಲಿಲ್ಲ, ಆದರೆ ಅವರ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಅಡ್ವಾನ್ಸ್ ಬುಕಿಂಗ್ ಅದ್ಭುತವಾಗಿ ನಡೆದಿದೆ. ಮೊದಲ ದಿನವೇ ಈ ಸಿನಿಮಾ 300 ಕೋಟಿ ಗಳಿಸುವ ನಿರೀಕ್ಷೆ ಇದೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ