
ಬಾಲಿವುಡ್‌ನ ಜನಪ್ರಿಯ ಚಾಟ್ ಶೋ ‘ಕಾಫಿ ವಿತ್ ಕರಣ್ ಸೀಸನ್ 9’ ಇತ್ತೀಚಿನ ಸಂಚಿಕೆಯಲ್ಲಿ ನಟ ಅಕ್ಷಯ್ ಕುಮಾರ್ ಮತ್ತು ರವಿ ಕಿಶನ್ ಅತಿಥಿಗಳಾಗಿ ಭಾಗವಹಿಸಿದ್ದರು. ಎಂದಿನಂತೆ ಈ ಸಂಚಿಕೆ ಸಖತ್ ಮನರಂಜನೆಯಿಂದ ಕೂಡಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾರ್ಯಕ್ರಮದ ನಡುವೆ ಅಕ್ಷಯ್ ಕುಮಾರ್ ಅವರು ತಮ್ಮ ಪತ್ನಿ, ಮಾಜಿ ನಟಿ ಹಾಗೂ ಲೇಖಕಿ ಟ್ವಿಂಕಲ್ ಖನ್ನಾ ಅವರಿಂದಲೇ ಸಖತ್ ಟ್ರೋಲ್ ಆಗುತ್ತಾರೆ ಎಂದು ಅಭಿಮಾನಿಗಳು ಊಹಿಸಿರಲಿಲ್ಲ.
ಶೋನ ಜನಪ್ರಿಯ ‘ರ್ಯಾಪಿಡ್ ಫೈರ್’ ಸುತ್ತಿನಲ್ಲಿ ನಿರೂಪಕ ಕರಣ್ ಜೋಹರ್ ಅವರು ಅಕ್ಷಯ್ ಕುಮಾರ್ ಮತ್ತು ರವಿ ಕಿಶನ್ ಅವರಿಗೆ ತಮ್ಮ ಪತ್ನಿಯರಿಗೆ ಕರೆ ಮಾಡಿ ಶೋಗೆ ಶುಭ ಹಾರೈಸುವಂತೆ ಕೇಳಿಕೊಳ್ಳಲು ಸೂಚಿಸಿದರು. ಇದರಲ್ಲಿ ಗೆದ್ದವರಿಗೆ 5 ಅಂಕಗಳು ಸಿಗಲಿದ್ದವು. ಅದರಂತೆ ಅಕ್ಷಯ್ ಕುಮಾರ್ ಅವರು ಪತ್ನಿ ಟ್ವಿಂಕಲ್ ಖನ್ನಾಗೆ ಕರೆ ಮಾಡಿದರು. ಫೋನ್ ರಿಸೀವ್ ಮಾಡಿದ ಟ್ವಿಂಕಲ್, ನೇರವಾಗಿ ‘ಹೇಳು’ ಎಂದರು. ಪತ್ನಿಯ ಈ ಒರಟು ಉತ್ತರದಿಂದ ಒಂದು ಕ್ಷಣ ಶಾಕ್ ಆದ ಅಕ್ಷಯ್, ‘ಹೇಳು ಅಂದ್ರೆ ಏನು? ಸ್ವಲ್ಪ ಪ್ರೀತಿಯಿಂದ ಮಾತಾಡು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಂಕಲ್, ‘ನನಗೆ ತುಂಬಾ ಸುಸ್ತಾಗಿದೆ, ಸರಿಯಾಗಿ ನಿದ್ದೆಯೂ ಆಗಿಲ್ಲ. ಅದರ ನಡುವೆ ನೀನು ಬೆಳಗ್ಗೆ 6 ಗಂಟೆಗೇ ಜೋರಾಗಿ ಭಜನೆ ಹಾಡುತ್ತಾ ನನ್ನ ನಿದ್ದೆ ಕೆಡಿಸಿದ್ದೀಯ. ಕನಿಷ್ಠ ಬಾತ್‌ರೂಮ್ ಬಾಗಿಲನ್ನಾದರೂ ಸರಿಯಾಗಿ ಮುಚ್ಚಿಕೊಳ್ಳಬಾರದೇ?’ ಎಂದು ನೇರವಾಗಿಯೇ ಗದರಿದರು. ಪತ್ನಿಯನ್ನು ಸಮಾಧಾನಪಡಿಸಲು ಮುಂದಾದ ಅಕ್ಷಯ್, ತಾವು ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿ ಇರುವುದಾಗಿ ತಿಳಿಸಿದರು. ಆಗ ತಕ್ಷಣವೇ ಅಕ್ಷಯ್ ಕಾಲೆಳೆದ ಟ್ವಿಂಕಲ್, ‘ಹೌದಾ? ನೀವಂತೂ ಫ್ರೀಯಾಗಿಯೇ ಈ ಶೋ ಮಾಡ್ತಿರ್ತೀರಾ ಬಿಡಿ’ ಎಂದು ವ್ಯಂಗ್ಯವಾಡಿದರು.
ಮಧ್ಯಪ್ರವೇಶಿಸಿದ ಕರಣ್ ಜೋಹರ್ ನಗುತ್ತಾ, ‘ನಿಮಗೆ ಎಲ್ಲದರಲ್ಲೂ ಹಣ ಸಂಪಾದಿಸುವುದೇ ಆಗಿರುತ್ತದೆ. ನೀವೀಗ ಲೈವ್ ಶೋನಲ್ಲಿದ್ದೀರಿ, ನೀವಾಡುವ ಮಾತುಗಳೆಲ್ಲಾ ಪ್ರಸಾರವಾಗುತ್ತವೆ’ ಎಂದು ಟ್ವಿಂಕಲ್ ಅವರಿಗೆ ನೆನಪಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಅಕ್ಷಯ್ ಕುಮಾರ್ ಜೊತೆ ಟ್ವಿಂಕಲ್ ನಡೆದುಕೊಂಡ ರೀತಿಗೆ ಅನೇಕ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಇದು ಮೊದಲೇ ಸಿದ್ಧಪಡಿಸಿದ ಸ್ಕ್ರಿಪ್ಟೆಡ್ ನಾಟಕ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ‘ಹನುಮಾನ್ ಅಂಶ್’ ಸೀಕ್ವೆಲ್‌ನಲ್ಲಿ ಅಕ್ಷಯ್ ಕುಮಾರ್? ಸ್ಪಷ್ಟನೆ ನೀಡಿದ ನಿರ್ಮಾಪಕಿ
‘ಕೊನೆಗೂ ಟ್ವಿಂಕಲ್ ಅವರಿಗೆ ಧ್ವನಿ ಮೂಲಕವಾದರೂ ನಟಿಸಲು ಬರುತ್ತದೆ ಎಂಬುದು ಸಾಬೀತಾಯಿತು. ಕಾಫಿ ವಿತ್ ಕರಣ್ ಶೋ ಸ್ಕ್ರಿಪ್ಟೆಡ್ ಎಂಬುದು ಈಗ ಬಯಲಾಗಿದೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಪಾಪ ಅಕ್ಷಯ್ ಕುಮಾರ್. ಅವರ ಪತ್ನಿ ಅವರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ನೋಡಿ’ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.