ಕಾರು ಅಪಘಾತ: ನಟಿಗೆ ಗಾಯ, ಕಾರ್ಮಿಕ ಸಾವು, ಒರ್ವ ಗಂಭೀರ

Urmilla Kothare: ಜನಪ್ರಿಯ ಮರಾಠಿ ಮತ್ತು ಹಿಂದಿ ಸಿನಿಮಾ ನಟಿ ಊರ್ಮಿಳಾ ಅವರ ಕಾರು ಅಪಘಾತಕ್ಕೆ ಈಡಾಗಿದ್ದು, ಒಬ್ಬ ಕಾರ್ಮಿಕ ಸ್ಥಳದಲ್ಲೇ ನಿಧನ ಹೊಂದಿದ್ದಾನೆ. ಇನ್ನೊಬ್ಬ ಕಾರ್ಮಿಕ ಗಂಭೀರವಾಗಿದ್ದು, ನಟಿ ಮತ್ತು ಆಕೆಯ ಕಾರು ಚಾಲಕರೂ ಸಹ ಗಾಯಗೊಂಡಿದ್ದಾರೆ. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ಕಾರು ಅಪಘಾತ: ನಟಿಗೆ ಗಾಯ, ಕಾರ್ಮಿಕ ಸಾವು, ಒರ್ವ ಗಂಭೀರ
Urmila
Follow us
ಮಂಜುನಾಥ ಸಿ.
|

Updated on:Dec 28, 2024 | 7:51 PM

ಮರಾಠಿ ನಟಿ ಊರ್ಮಿಳಾ ಕೊಠಾರಿ ಕಾರು ಅಪಘಾತದಲ್ಲಿ ಕಾರ್ಮಿಕನೊಬ್ಬನ ಸಾವಾಗಿದ್ದು, ಸ್ವತಃ ನಟಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಮುಂಬೈನಲ್ಲಿ ಘಟನೆ ನಡೆದಿದ್ದು, ನಟಿಯ ಕಾರು ನಿಯಂತ್ರಣ ತಪ್ಪಿ ಕಾರ್ಮಿಕನೊಬ್ಬನಿಗೆ ಢಿಕ್ಕಿ ಹೊಡೆದಿದ್ದು, ಕಾರ್ಮಿಕ ಸ್ಥಳದಲ್ಲಿಯೇ ನಿಧನ ಹೊಂದಿದ್ದಾನೆ. ನಟಿ ಊರ್ಮಿಳಾ ಹಾಗೂ ಅವರ ಕಾರಿನ ಚಾಲಕನಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಮರಾಠಿ ನಟಿ ಊರ್ಮಿಳಾ ಕೊಠಾರಿ ಗುರುವಾರ ತಡರಾತ್ರಿ ಸಿನಿಮಾ ಚಿತ್ರೀಕರಣ ಮುಗಿಸಿ ವಾಪಸ್ಸಾಗಬೇಕಾದರೆ ಮುಂಬೈನ ಕಾಂಧಿವಲಿ ಏರಿಯಾದಲ್ಲಿನ ಪೊಯ್ಸಾರ್ ಮೆಟ್ರೊ ಪ್ರಾಜೆಕ್ಟ್​ಗಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಕಾರು ಢಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ. ಸೂಕ್ತ ಸಮಯಕ್ಕೆ ಏರ್​ಬ್ಯಾಗ್ ತೆರೆದುಕೊಂಡ ಕಾರಣಕ್ಕೆ ನಟಿ ಹಾಗೂ ಆಕೆಯ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಅವರಿಬ್ಬರಿಗೂ ಸಹ ಗಾಯಗಳಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲ ಪ್ರತ್ಯಕ್ಷದರ್ಶಿಗಳ ಪ್ರಕಾರ ನಟಿಯ ಹ್ಯುಂಡೈ ವರ್ನಾ ಕಾರು ಭಾರಿ ವೇಗದಲ್ಲಿ ಚಲಿಸುತ್ತಿತ್ತಂತೆ, ನಿಯಂತ್ರಣ ತಪ್ಪಿ ಕಾರ್ಮಿಕರ ಮೇಲೆ ಹರಿದಿದೆ. ಆ ನಂತರ ರಸ್ತೆ ಬದಿಯ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಸಮತಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕಾರನ್ನು ಸೀಜ್ ಮಾಡಿದ್ದಾರೆ. ಕಾರಿನ ಚಾಲಕನ ಮೇಲೆ ದೂರು ದಾಖಲಿಸಿಕೊಳ್ಳಲಾಗಿದ್ದು, ವಾಹನದ ಪರಿಶೀಲನೆ ಮಾಡಲಾಗುತ್ತಿದೆ.

ಊರ್ಮಿಳಾ ಕೊಥಾರಿ ಬಹುಭಾಷಾ ನಟಿಯಾಗಿದ್ದು, ಮರಾಠಿ ಟಿವಿ, ಸಿನಿಮಾ ಕ್ಷೇತ್ರದಲ್ಲಿ ಬಹಳ ಜನಪ್ರಿಯರು. ಮರಾಠಿಯ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ ‘ವೆಲ್ಕಮ್ ಒಬಾಮಾ’ ಹಿಂದಿಯಲ್ಲಿ ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Sat, 28 December 24