200 ಕೋಟಿ ರೂಪಾಯಿ ಸನಿಹಕ್ಕೆ ಬಂದ ‘ಛಾವ’ ಬಾಕ್ಸ್ ಆಫೀಸ್​ ಕಲೆಕ್ಷನ್​

ಕರ್ನಾಟಕದಲ್ಲಿ ಕೂಡ ‘ಛಾವ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಪ್ರತಿ ದಿನವೂ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ವಿಕ್ಕಿ ಕೌಶಲ್ ಅವರು ಈ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಕೂಡ ಹೆಚ್ಚಾಗಿದೆ. ಕಲೆಕ್ಷನ್ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..

200 ಕೋಟಿ ರೂಪಾಯಿ ಸನಿಹಕ್ಕೆ ಬಂದ ‘ಛಾವ’ ಬಾಕ್ಸ್ ಆಫೀಸ್​ ಕಲೆಕ್ಷನ್​
Vicky Kaushal

Updated on: Feb 19, 2025 | 10:52 PM

ನಟ ವಿಕ್ಕಿ ಕೌಶಲ್ ಅವರು ಬಾಲಿವುಡ್​ನಲ್ಲಿ ಕೆಲವು ಗಮನಾರ್ಹ ಸಿನಿಮಾಗಳನ್ನು ಮಾಡಿದ್ದಾರೆ. ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಬಳಿಕ ಅವರ ಖ್ಯಾತಿ ಸಿಕ್ಕಾಪಟ್ಟೆ ಹೆಚ್ಚಾಯಿತು. ಈಗ ಅವರು ‘ಛಾವ’ ಸಿನಿಮಾದ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಎಲ್ಲ ಕಡೆಗಳಲ್ಲೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ‘ಛಾವ’ ಸಿನಿಮಾಗೆ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದ್ದು, ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ. ಈಗ ಈ ಸಿನಿಮಾದ ಕಲೆಕ್ಷನ್ 200 ಕೋಟಿ ರೂಪಾಯಿ ಸನಿಹದಲ್ಲಿದೆ.

ಲಕ್ಷ್ಮಣ್ ಉಟೇಕರ್ ಅವರು ನಿರ್ದೇಶನ ಮಾಡಿದ ‘ಛಾವ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಛತ್ರಪತಿ ಶಂಭಾಜಿ ಮಹಾರಾಜ್ ಪಾತ್ರವನ್ನು ಮಾಡಿದ್ದಾರೆ. ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ಬಣ್ಣ ಹಚ್ಚಿದ್ದಾರೆ. ಔರಂಗ್​ಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಅವರು ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಮೊದಲ ದಿನ (ಫೆ.14) ‘ಛಾವ’ ಸಿನಿಮಾಗೆ 33.10 ಕೋಟಿ ರೂಪಾಯಿ ಕಮಾಯಿ ಆಗಿತ್ತು. 2ನೇ ದಿನ 39.30 ಕೋಟಿ ರೂಪಾಯಿ, 3ನೇ ದಿನ 49.03 ಕೋಟಿ ರೂಪಾಯಿ, 4ನೇ ದಿನ 24.10 ಕೋಟಿ ರೂಪಾಯಿ ಹಾಗೂ 5ನೇ ದಿನ 25.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. 6ನೇ ದಿನ ಕೂಡ ಅನೇಕ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿದೆ. 6 ದಿನಕ್ಕೆ ಸಿನಿಮಾದ ಕಲೆಕ್ಷನ್​ 200 ಕೋಟಿ ರೂಪಾಯಿ ಸನಿಹದಲ್ಲಿ ಇರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆಗೆ ನಮಿಸಿದ ‘ಛಾವ’ ನಟ ವಿಕ್ಕಿ ಕೌಶಲ್

ಎರಡನೇ ವೀಕೆಂಡ್​ನಲ್ಲಿ ಕೂಡ ‘ಛಾವ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣಲಿದೆ. ಛತ್ರಪತಿ ಶಂಭಾಜಿ ಮಹಾರಾಜ್ ಜೀವನದ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಣೆ ಮಾಡಲಾಗಿದೆ. ಕರ್ನಾಟಕದ ಕೆಲವೆಡೆ ಕೂಡ ಆಚರಣೆ ನಡೆದಿದೆ. ಈ ಪ್ರಯುಕ್ತ ಹಲವರು ‘ಛಾವ’ ನೋಡಲು ಚಿತ್ರಮಂದಿರಕ್ಕೆ ಬಂದಿದ್ದಾರೆ. ಇದರ ಪರಿಣಾಮವಾಗಿ ಕಲೆಕ್ಷನ್​ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.