ಬಾಲಿವುಡ್ನ ಖ್ಯಾತ ನಟ ವಿಜಯ್ ರಾಝ್ ಅವರು ವಿವಾದದಲ್ಲಿ ಸಿಲುಕಿದ್ದಾರೆ. ‘ಸನ್ ಆಫ್ ಸರ್ದಾರ್ 2’ ಸಿನಿಮಾ ತಂಡದಿಂದ ಅವರನ್ನು ಹೊರಗೆ ಹಾಕಲಾಗಿದೆ. ಇದಕ್ಕೆಲ್ಲ ಕಾರಣ ಏನು ಎಂಬುದನ್ನು ಸಹ-ನಿರ್ಮಾಪಕ ಕುಮಾರ್ ಪಾಠಕ್ ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ವಿಜಯ್ ರಾಝ್ ಅವರು ದುರ್ವರ್ತನೆ ತೋರಿದ್ದಾರೆ ಎಂಬುದು ನಿರ್ಮಾಪಕರ ಆರೋಪ. ಅಲ್ಲದೇ, ವಿಜಯ್ ರಾಝ್ ಅವರ ಸಹಾಯಕನಿಂದ ಹೋಟೆಲ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಕೂಡ ಆರೋಪಿಸಲಾಗಿದೆ.
ವಿಜಯ್ ರಾಝ್ ಅವರು ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಅವರು ಅಜಯ್ ದೇವಗನ್ ಜೊತೆ ನಟಿಸುತ್ತಿದ್ದಾರೆ. ಆದರೆ ಅಜಯ್ ದೇವಗನ್ಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ತಮಗೆ ನೀಡಬೇಕು ಎಂದು ವಿಜಯ್ ರಾಝ್ ಡಿಮ್ಯಾಂಡ್ ಮಾಡಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ವಿದೇಶದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಅಲ್ಲಿಗೆ ವಿಜಯ್ ರಾಝ್ ತೆರಳಿದ್ದರು. ತಮಗೆ ಉಳಿದುಕೊಳ್ಳಲು ನೀಡಿದ ಹೋಟೆಲ್ ರೂಮ್ ತುಂಬ ಚಿಕ್ಕದಾಗಿದೆ ಎಂದು ವಿಜಯ್ ರಾಝ್ ಅವರು ಸಮಸ್ಯೆ ಹೇಳಿಕೊಂಡಿದ್ದಾರೆ. ಆ ಕಾರಣದಿಂದಲೇ ನಿರ್ಮಾಪಕರು ಇಷ್ಟೆಲ್ಲ ಕಿರಿಕ್ ಶುರು ಮಾಡಿದ್ದಾರೆ ಎನ್ನಲಾಗಿದೆ. ಅಜಯ್ ದೇವಗನ್ಗೆ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಸಿನಿಮಾದಿಂದ ಹೊರಗೆ ಇಡಲಾಗಿದೆ ಎಂದು ವಿಜಯ್ ರಾಝ್ ಹೇಳಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತ ಅಜಯ್ ದೇವಗನ್-ಟಬು ಜೋಡಿಯ ಸಿನಿಮಾ
ಪ್ರತಿ ಕಲಾವಿದರನ್ನು ನೋಡಿಕೊಳ್ಳಲು ಸಹಾಯಕರನ್ನು ನೀಡಲಾಗುತ್ತದೆ. ಅವರನ್ನು ಸ್ಪಾಟ್ ಬಾಯ್ಸ್ ಎಂದು ಕರೆಯುತ್ತಾರೆ. ಆ ಪೈಕಿ ಒಬ್ಬನಿಂದ ಹೋಟೆಲ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಇದೆ. ಅದರ ಬಗ್ಗೆಯೂ ವಿಜಯ್ ರಾಝ್ ಮಾತನಾಡಿದ್ದಾರೆ. ‘ನನ್ನನ್ನು ಸಿನಿಮಾದಿಂದ ತೆಗೆದುಹಾಕಿದ್ದು ಹಾಗೂ ಸ್ಪಾಟ್ ಬಾಯ್ ಮೇಲಿನ ಆರೋಪ ಎಂಬುದು ಎರಡು ಪ್ರತ್ಯೇಕ ಘಟನೆ. ಇದನ್ನು ಒಟ್ಟಾಗಿ ನೋಡಬೇಡಿ. ಸ್ಪಾಟ್ ಬಾಯ್ ವರ್ತನೆಗೂ ನನಗೂ ಸಂಬಂಧ ಇಲ್ಲ. ಅಂಥ ಕೃತ್ಯವನ್ನು ನಾನು ಬೆಂಬಲಿಸುವುದಿಲ್ಲ. ಆ ವ್ಯಕ್ತಿ ಜೊತೆ ನಾನು ಇನ್ಮುಂದೆ ಕೆಲಸ ಮಾಡಲ್ಲ’ ಎಂದು ವಿಜಯ್ ರಾಝ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.