‘ದಿ ಕಾಶ್ಮೀರ್ ಫೈಲ್ಸ್ 2’ ಮಾಡುವ ಸೂಚನೆ ಕೊಟ್ಟ ವಿವೇಕ್ ಅಗ್ನಿಹೋತ್ರಿ; ಇದರಲ್ಲಿರೋ ಅಂಶಗಳೇನು?
1990ರ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಅವರ ಮೇಲೆ ನಡೆದ ದೌರ್ಜನ್ಯದ ಕುರಿತು ಈ ಸಿನಿಮಾದಲ್ಲಿ ವಿವರಿಸಲಾಗಿತ್ತು.
ಯಾವುದಾದರೂ ಸಿನಿಮಾ ಹಿಟ್ ಆಯಿತು ಎಂದರೆ ಅದಕ್ಕೆ ಸೀಕ್ವೆಲ್ ಮಾಡಿದರೆ ಬಿಸ್ನೆಸ್ ದೃಷ್ಟಿಯಿಂದ ಅದು ಒಳ್ಳೆಯದೇ. ಎರಡನೇ ಭಾಗಕ್ಕೆ ಹೈಪ್ ಸೃಷ್ಟಿ ಆಗುವುದರಿಂದ ಒಳ್ಳೆಯ ಕಮಾಯಿ ಆಗುತ್ತದೆ. ಆದರೆ, ಮೊದಲ ಸಿನಿಮಾ ಹಿಟ್ ಆಗಿ, ಸೀಕ್ವೆಲ್ ಸೋತ ಉದಾಹರಣೆ ಸಾಕಷ್ಟಿದೆ. ಇನ್ನೂ ಕೆಲವು ಕಡೆಗಳಲ್ಲಿ ಸೀಕ್ವೆಲ್ ಗೆದ್ದಿದೆ. ಈ ವರ್ಷದ ಸೂಪರ್ ಹಿಟ್ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ (The Kashmir Files) ಸೀಕ್ವೆಲ್ ರೆಡಿ ಆಗುವ ಸೂಚನೆ ಸಿಕ್ಕಿದೆ. ಈ ಬಗ್ಗೆ ಸ್ವತಃ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಮಾತನಾಡಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಅನೇಕ ರಾಜಕಾರಣಿಗಳು ಸಿನಿಮಾ ನೋಡಿ ಮೆಚ್ಚಿಕೊಂಡರು. ಇದರಿಂದ ಸಿನಿಮಾಗೆ ದೊಡ್ಡ ಮಟ್ಟದ ಬೂಸ್ಟ್ ಸಿಕ್ಕಿತು. 1990ರ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಅವರ ಮೇಲೆ ನಡೆದ ದೌರ್ಜನ್ಯದ ಕುರಿತು ಈ ಸಿನಿಮಾದಲ್ಲಿ ವಿವರಿಸಲಾಗಿತ್ತು.
ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿತ್ತು. ಕಾಶ್ಮೀರಿ ಪಂಡಿತರು ತಮ್ಮ ದುಃಖ ತೋಡಿಕೊಳ್ಳುತ್ತಿರುವುದು ವಿಡಿಯೋದಲ್ಲಿದೆ. ‘ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಹಿಂದು ಪರ ಎಂದು ಹೇಳಿಕೊಳ್ಳುವ ಸರ್ಕಾರವು ನಿದ್ದೆಗೆ ಜಾರಿದೆ. ನಿರಂತರ ಹತ್ಯೆಗಳು, ದೌರ್ಜನ್ಯಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಪರಿಸ್ಥಿತಿ ತುಂಬಾ ಕೆಟ್ಟದಾಗಿವೆ. ಕಾಶ್ಮೀರಿ ಪಂಡಿತರು 90ರ ದಶಕದ ಬಿಕ್ಕಟ್ಟನ್ನು ಮತ್ತೆ ಎದುರಿಸುತ್ತಿದ್ದಾರೆ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
ಈ ವಿಡಿಯೋವನ್ನು ರೀಟ್ವೀಟ್ ಮಾಡಿರುವ ಪತ್ರಕರ್ತರೊಬ್ಬರು, ‘ವಿವೇಕ್ ಅವರೇ ಈ ಬಗ್ಗೆ ಸಿನಿಮಾ ಮಾಡ್ತೀರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ವಿವೇಕ್ ಅಗ್ನಿಹೋತ್ರಿ ಅವರು, ‘ಕೆಲಸಗಳು ನಡೆಯುತ್ತಿವೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿವೇಕ್ ಅವರು ‘ದಿ ಕಾಶ್ಮೀರ್ ಫೈಲ್ಸ್ 2’ ಮಾಡ್ತಾರಾ ಎಂಬ ಕುತೂಹಲ ಮೂಡಿದೆ. ಒಂದೊಮ್ಮೆ ಸೀಕ್ವೆಲ್ ಮಾಡಿದರೆ ಈಗಿನ ಕಾಶ್ಮೀರದ ಸ್ಥಿತಿಗತಿ ಬಗ್ಗೆ ವಿವರಣೆ ಇರುವ ಸಾಧ್ಯತೆ ಇದೆ.
Published On - 6:30 pm, Wed, 19 October 22