‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರದ ನಿರೀಕ್ಷೆಗೂ ಮೀರಿದ ಅದ್ಭುತ ಯಶಸ್ಸಿನ ನಂತರ ವಿವೇಕ್ ಅಗ್ನಿಹೋತ್ರಿ (Vivek Agnihotri) ನೇತೃತ್ವದ ಚಿತ್ರತಂಡದ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ಈ ಬಗ್ಗೆ ಹಲವು ಸುದ್ದಿಗಳು ಹರಿದಾಡಿವೆ. ಈಗ ಹೊಸ ಮಾಹಿತಿಯ ಪ್ರಕಾರ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡ ನೂತನ ಚಿತ್ರಕ್ಕಾಗಿ ಒಂದಾಗುತ್ತಿದೆ. ವಿಶೇಷವೆಂದರೆ ‘ದಿ ಕಾಶ್ಮೀರ್ ಫೈಲ್ಸ್’ ಮಾದರಿಯಲ್ಲಿಯೇ ಚರಿತ್ರೆಯಲ್ಲಿ ಹುದುಗಿಹೋದ ಕತೆಗಳನ್ನು ಮತ್ತೆ ಜನರೆದುರು ಇಡುವ ಪ್ರಯತ್ನ ನಡೆಯಲಿದೆ. ಈ ಬಗ್ಗೆ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿ, ಸಣ್ಣ ಟೀಸರ್ಅನ್ನು ಹಂಚಿಕೊಂಡಿದ್ದಾರೆ. ‘‘ದಿ ಕಾಶ್ಮೀರ್ ಫೈಲ್ಸ್ ಚಿತ್ರತಂಡ ಮತ್ತೆರಡು ಚಿತ್ರಗಳಿಗೆ ಒಂದಾಗುತ್ತಿದೆ. ಅಭಿಷೇಕ್ ಅಗರ್ವಾಲ್, ವಿವೇಕ್ ಅಗ್ನಿಹೋತ್ರಿ ಹಾಗೂ ಪಲ್ಲವಿ ಜೋಶಿ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದು- ಇತಿಹಾಸದಲ್ಲಿ ದಾಖಲಾಗದ ಕತೆಗಳನ್ನು ಜನರ ಮುಂದೆ ತೆರೆದಿಡಲಿವೆ. ಚಿತ್ರಗಳು ನಿರ್ದಯವಾದ ಎರಡು ಪ್ರಾಮಾಣಿಕ ಕತೆಗಳನ್ನು ಜನರಿಗೆ ಕಟ್ಟಿಕೊಡಲಾಗುತ್ತದೆ’’ ಎಂದು ತರಣ್ ಆದರ್ಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ತರಣ್ ಆದರ್ಶ್ ಟ್ವೀಟ್ ಇಲ್ಲಿದೆ:
‘THE KASHMIR FILES’ TEAM REUNITES FOR TWO MORE FILMS… After the phenomenal success of #TheKashmirFiles, producers #AbhishekAgarwal, #VivekRanjanAgnihotri and #PallaviJoshi reunite to produce two more films based on unreported stories from #Indian history… OFFICIAL VIDEO… pic.twitter.com/SUgEfyNvY9
— taran adarsh (@taran_adarsh) April 11, 2022
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ವಿಚಾರಕ್ಕ ಬಂದರೆ, ಈ ಸಿನಿಮಾವು ಒಟ್ಟಾರೆ 250 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಗಳಿಸಿತ್ತು. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಪೈಪೋಟಿಯ ನಡುವೆಯೂ ಚಿತ್ರ ಉತ್ತಮವಾಗಿ ಗಳಿಸಿತ್ತು. ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ ಮೊದಲಾದವರು ನಟಿಸಿದ್ದಾರೆ. ಕಾಶ್ಮೀರಿ ಪಂಡಿತರ ವಲಸೆಯ ಕತೆಯನ್ನು, ಅದರ ಹಿಂದಿನ ಘಟನೆಗಳನ್ನು ಚಿತ್ರ ಕಟ್ಟಿಕೊಟ್ಟಿತ್ತು.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದವು. ಅವುಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರ್ಯಾಣ, ಗೋವಾ, ತ್ರಿಪುರಾ, ಉತ್ತರಾಖಂಡ್ ರಾಜ್ಯಗಳು ಸೇರಿದ್ದವು.
ಸದ್ದಿಲ್ಲದೇ ‘ನೌಟಂಕಿ’ ಚಿತ್ರೀಕರಣ ಮುಗಿಸಿರುವ ವಿವೇಕ್ ಅಗ್ನಿಹೋತ್ರಿ:
ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಮೂಡಿವೆ. ಈ ನಡುವೆ ಅವರು ಸದ್ದಿಲ್ಲದೇ ಚಿತ್ರವೊಂದರ ಶೂಟಿಂಗ್ ಮುಗಿಸಿರುವ ವಿಚಾರ ಇತ್ತೀಚೆಗೆ ಬಹಿರಂಗವಾಗಿತ್ತು. ಲಾಕ್ಡೌನ್ನಿಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರೀಕರಣ ಅರ್ಧಕ್ಕೆ ನಿಂತಾಗ ‘ನೌಟಂಕಿ’ ಚಿತ್ರವನ್ನು ಸಿದ್ಧಪಡಿಸಿದ್ದರು ವಿವೇಕ್. ಇದರಲ್ಲೂ ಅನುಪಮ್ ಖೇರ್ ಮುಖ್ಯಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ.
ಈ ಬಗ್ಗೆ ಮಾತನಾಡಿದ್ದ ವಿವೇಕ್ ಅಗ್ನಿಹೋತ್ರಿ, ‘‘2021ರ ಮಾರ್ಚ್ ತಿಂಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಶೂಟಿಂಗ್ನಲ್ಲಿ ತೊಡಗಿದ್ದೆವು. ಆ ಸಂದರ್ಭದಲ್ಲಿ ಕೊರೊನಾದಿಂದ ಲಾಕ್ಡೌನ್ ಘೋಷಣೆ ಆಯಿತು. ಅನುಪಮ್ ಖೇರ್ ಅವರು ಅಮೆರಿಕದಿಂದ ಶೂಟಿಂಗ್ಗಾಗಿ ಭಾರತಕ್ಕೆ ಬಂದಿದ್ದರು. ಲಾಕ್ಡೌನ್ನಿಂದ ಅವರು ಕೂಡ ಇಲ್ಲೇ ಉಳಿಯಬೇಕಾಯಿತು. ಈ ಸಮಯವನ್ನು ಬಳಕೆ ಮಾಡಿಕೊಳ್ಳಲು ನಾವು ನಿರ್ಧರಿಸಿದೆವು. ಸ್ಕ್ರಿಪ್ಟ್ ರೆಡಿ ಇತ್ತು. ಹೀಗಾಗಿ ಮತ್ತೊಂದು ಸಿನಿಮಾದ ಶೂಟಿಂಗ್ಅನ್ನು ಭೋಪಾಲ್ನಲ್ಲಿ ಪೂರ್ಣಗೊಳಿಸಿದೆವು’’ ಎಂದಿದ್ದಾರೆ.
‘ನೌಟಂಕಿ’ ಸಿನಿಮಾ ತುಂಬಾ ಕಡಿಮೆ ಬಜೆಟ್ನಲ್ಲಿ ಸಿದ್ಧಗೊಂಡ ಸಿನಿಮಾ ಎನ್ನಲಾಗುತ್ತಿದೆ. ‘ಇದು ಕಲೆ, ಸೃಜನಶೀಲತೆ, ರಂಗಭೂಮಿ ಹಾಗೂ ಸಿನಿಮಾಗೆ ನಾವು ನೀಡುತ್ತಿರುವ ಟ್ರಿಬ್ಯೂಟ್’ ಎಂದು ವಿವೇಕ್ ಹೇಳಿಕೊಂಡಿದ್ದಾರೆ. ಈ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಯಶಸ್ಸಿಗೂ ಮುನ್ನವೇ ಸಿದ್ಧಗೊಂಡ ಚಿತ್ರವಾಗಿದೆ. ಹೀಗಾಗಿ ವಿವೇಕ್ ಮುಂದಿನ ಚಿತ್ರಗಳ ಆಯ್ಕೆಯ ಬಗ್ಗೆ ಕುತೂಹಲ ಮೂಡಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸೀಕ್ರೇಟ್ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ