ವಿವೇಕ್- ಕಂಗನಾ ಕಾಂಬಿನೇಷನ್ನಲ್ಲಿ ಹೊಸ ಚಿತ್ರ? ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಮುಂದಿನ ಚಿತ್ರದ ಬಗ್ಗೆ ಹೆಚ್ಚಾಯ್ತು ಕುತೂಹಲ
Vivek Agnihotri | Kangana Ranaut: ‘ದಿ ಕಾಶ್ಮೀರ್ ಫೈಲ್ಸ್’ ಯಶಸ್ಸಿನ ನಡುವೆಯೇ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರದ ಬಗ್ಗೆ ಕುತೂಹಲ ಗರಿಗೆದರಿದೆ. ಬಿಟೌನ್‌ನಲ್ಲಿ ಕೇಳಿಬರುತ್ತಿರುವ ಹೊಸ ಸಮಾಚಾರದ ಪ್ರಕಾರ ಕಂಗನಾ ಹಾಗೂ ವಿವೇಕ್ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ.
The Kashmir Files | ‘ ದಿ ಕಾಶ್ಮೀರ್ ಫೈಲ್ಸ್ ‘ ಚಿತ್ರವು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದರೊಂದಿಗೆ ಬಾಕ್ಸ್ ಆಫೀಸ್‌ನಲ್ಲೂ (The Kashmir Files Box Office) ಒಳ್ಳೆಯ ಗಳಿಕೆ ಮಾಡುತ್ತಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಪಾತ್ರಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ತಾರೆಯರಲ್ಲಿ ಚಿತ್ರವನ್ನು ಹೊಗಳಿದವರ ಸಂಖ್ಯೆ ಕಡಿಮೆ. ಆದರೆ ಮೆಚ್ಚುಗೆ ಸೂಚಿಸಿದವರ ಪೈಕಿ ಕಂಗನಾ ಸಾಕಷ್ಟು ಸುದ್ದಿ ಮಾಡಿದ್ದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರವನ್ನು ಅವರು ಹೊಗಳಿದ್ದಲ್ಲದೇ ಈ ಬಗ್ಗೆ ಬಾಲಿವುಡ್ ಮೌನ ತಾಳಿದ್ದನ್ನು ಪ್ರಶ್ನಿಸಿದ್ದರು. ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಯಶಸ್ಸು ಸಾಧಿಸುತ್ತಿರುವ ಬೆನ್ನಲ್ಲೇ ವಿವೇಕ್ ಅಗ್ನಿಹೋತ್ರಿ (Vivek Agnihotri) ಮುಂದಿನ ಚಿತ್ರಗಳ ಬಗ್ಗೆ ಕುತೂಹಲ ಗರಿಗೆದರಿದೆ. ಈ ನಡುವೆ ಬಿಟೌನ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ವರದಿಗಳ ಪ್ರಕಾರ ಕಂಗನಾ ರಣಾವತ್ (Kangana Ranaut) ಹಾಗೂ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರಕ್ಕೆ ಮಾತುಕತೆ ನಡೆಸುತ್ತಿದ್ದಾರೆ. ಬಾಲಿವುಡ್ ಹಂಗಾಮಾ ಈ ಬಗ್ಗೆ ವರದಿ ಮಾಡಿದ್ದು, ವಿವೇಕ್ ಕಂಗನಾ ಅವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಅಲ್ಲದೇ ಕೆಲವು ಸುತ್ತಿನ ಮಾತುಕತೆಗಳೂ ನಡೆದಿವೆ ಎಂದು ಹೇಳಿದೆ.
ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಕೆಲವು ಸ್ಕ್ರಿಪ್ಟ್ ಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ ಒಂದನ್ನು ಕಂಗನಾ ಜತೆ ಚರ್ಚಿಸಿದ್ದಾರೆ. ನಟಿ ಕೂಡ ವಿವೇಕ ಜತೆ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ. ಈರ್ವರೂ ಸಮಾನ ಮನಸ್ಕರಾಗಿರುವುದರಿಂದ ಶೀಘ್ರದಲ್ಲೇ ಪ್ರಾಜೆಕ್ಟ್ ಓಕೆಯಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಪ್ರಾಜೆಕ್ಟ್ ಓಕೆಯಾದರೆ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಈ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದು, ಯಾವ ವಿಷಯ ವಸ್ತುವಿನ ಬಗ್ಗೆ ಕಂಗನಾ ಹಾಗೂ ವಿವೇಕ್ ಚರ್ಚಿಸಿದ್ದಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
4,000ಕ್ಕೇರಿದ ‘ದಿ ಕಾಶ್ಮೀರ್ ಫೈಲ್ಸ್’ ಸ್ಕ್ರೀನ್ಗಳ ಸಂಖ್ಯೆ:
1990ರ ಸಮಯದಲ್ಲಿ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪ್ರೇಕ್ಷಕರನ್ನು ಸೆಳೆದಿದೆ. ಇದೇ ಕಾರಣಕ್ಕೆ ದೇಶಾದ್ಯಂತ ಜನರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುತ್ತಿದ್ದಾರೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶ್, ಪ್ರಕಾಶ್ ಬೆಳವಾಡಿ ಮೊದಲಾದವರು ನಟಿಸಿರುವ ಈ ಚಿತ್ರ ಇದುವರೆಗೆ ಸುಮಾರು 100 ಕೋಟಿ ರೂಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಈ ನಡುವೆ ಚಿತ್ರದ ಸ್ಕ್ರೀನ್ಗಳಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಿದೆ. ಬಿಡುಗಡೆಯಾದ ಮೊದಲ ದಿನ ಅಂದರೆ ಮಾರ್ಚ್ 11ರಂದು 630 ಚಿತ್ರಮಂದಿರಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನ ಕಂಡಿತ್ತು. ಇದೀಗ ಎಂಟನೇ ದಿನಕ್ಕೆ ಸ್ಕ್ರೀನ್ಗಳ ಸಂಖ್ಯೆ ಬರೋಬ್ಬರಿ 4,000ಕ್ಕೇರಿದೆ. ಇದು ಚಿತ್ರದ ಗಳಿಕೆಗೂ ಸಹಾಯ ಮಾಡುತ್ತಿದೆ. ಜತೆಗೆ ಹಲವು ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿವೆ.
ಟ್ಯಾಕ್ಸ್ ಸಮೇತ ಟಿಕೇಟ್ ದರ ವಸೂಲಿ ಮಾಡಿದ ಮಲ್ಟಿಪ್ಲೆಕ್ಸ್:
ನೆಲಮಂಗಲ: ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಆದರೆ ರಾಕ್ ಲೈನ್ ಮಾಲ್ನಲ್ಲಿ ಸಿನಿಮಾ ನೋಡಲು ಬಂದವರಿಗೆ ತೆರಿಗೆ ಸಮೇತ ಟಿಕೆಟ್ ದರ ವಿಧಿಸಲಾಗಿದೆ. ಈ ಬಗ್ಗೆ ಪ್ರೇಕ್ಷಕರು ಸರ್ಕಾರದ ನಿರ್ಧಾರದ ವಿರುದ್ಧ ಮಾಲ್ ವರ್ತಿಸುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಪ್ರೇಕ್ಷಕರ ಒತ್ತಡಕ್ಕೆ ಮಣಿದಿರುವ ಮಾಲ್, ಟ್ಯಾಕ್ಸ್ ಹಣ ವಾಪಸ್ ಮಾಡುವುದಾಗಿ ತಿಳಿಸಿದೆ.
ಇದನ್ನೂ ಓದಿ:
Prabhas: ‘ರಾಧೆ ಶ್ಯಾಮ್’ ಸೋಲಿನ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪ್ರಭಾಸ್; ‘ಬಾಹುಬಲಿ’ ನಟನಿಗೆ ಏನಾಯ್ತು?
Published On - 9:01 am, Sat, 19 March 22