ವಿವೇಕ್​ ಅಗ್ನಿಹೋತ್ರಿ ಹಿನ್ನೆಲೆ ಏನು? ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕರ ಬಗ್ಗೆ ಇಲ್ಲಿದೆ ಮಾಹಿತಿ..

| Updated By: ಮದನ್​ ಕುಮಾರ್​

Updated on: Mar 16, 2022 | 9:29 AM

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅವರ ಹಿನ್ನೆಲೆ ಬಗ್ಗೆ ವಿವರ ಇಲ್ಲಿದೆ..

ವಿವೇಕ್​ ಅಗ್ನಿಹೋತ್ರಿ ಹಿನ್ನೆಲೆ ಏನು? ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕರ ಬಗ್ಗೆ ಇಲ್ಲಿದೆ ಮಾಹಿತಿ..
ವಿವೇಕ್ ಅಗ್ನಿಹೋತ್ರಿ
Follow us on

ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files Movie) ಸಿನಿಮಾ ಮೋಡಿ ಮಾಡುತ್ತಿದೆ. ದೇಶದ ಹಲವು ನಗರಗಳಲ್ಲಿ ಜನರು ಮುಗಿಬಿದ್ದು ಈ ಸಿನಿಮಾ ನೋಡುತ್ತಿದ್ದಾರೆ. 1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕುಟುಂಬ ಸಮೇತರಾಗಿ ಜನರು ಬಂದು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾವನ್ನು ನೋಡುತ್ತಿದ್ದಾರೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕೂಡ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಮೊದಲ ದಿನ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕೇವಲ 3.5 ಕೋಟಿ ರೂಪಾಯಿ ಗಳಿಸಿತ್ತು. ಆದರೆ ದಿನದಿಂದ ದಿನಕ್ಕೆ ಇದರ ಕಲೆಕ್ಷನ್​ ಹೆಚ್ಚುತ್ತಾ ಬಂತು. 5ನೇ ದಿನ 50 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಇಂಥ ಸಿನಿಮಾ ನಿರ್ದೇಶನ ಮಾಡಿದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri Profile) ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತಿ ತೋರುತ್ತಿದ್ದಾರೆ. ಅವರ ಹಿನ್ನೆಲೆ ಬಗ್ಗೆ ಇಲ್ಲಿದೆ ಮಾಹಿತಿ..

ವಿವೇಕ್​ ಅಗ್ನಿಹೋತ್ರಿ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಇಂಡಿಯನ್​ ಇನ್ಸ್​ಟಿಟ್ಯೂಟ್​ ಆಫ್​ ಮಾಸ್​ ಕಮ್ಯುನಿಕೇಷನ್​, ಭೋಪಾಲ್​ ಸ್ಕೂಲ್​ ಆಫ್​ ಸೋಶಿಯಲ್​ ಸೈನ್ಸ್​, ಜೆಎನ್​ಯು ಮುಂತಾದ ಕಡೆಗಳಲ್ಲಿ ವಿವೇಕ್​ ಅಗ್ನಿಹೋತ್ರಿ ಶಿಕ್ಷಣ ಪಡೆದಿದ್ದಾರೆ. ಈವರೆಗೂ 8 ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಆ ಪೈಕಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಿಂದ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ.

ಜಾಹೀರಾತು ಮತ್ತು ಕಿರುತೆರೆಯಲ್ಲಿ ಕೆಲಸ ಆರಂಭ:

ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ವಿವೇಕ್​ ಅಗ್ನಿಹೋತ್ರಿ ಅವರು ಜಾಹೀರಾತು ಮತ್ತು ಕಿರಿತೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿಷ್ಠಿತ ಜಾಹೀರಾತು ಕಂಪನಿಗಳಲ್ಲಿ ಅವರು ಕ್ರಿಯೇಟಿವ್​ ಡೈರೆಕ್ಟರ್​ ಆಗಿದ್ದರು. ನಂತರ ಕೆಲವು ಧಾರಾವಾಹಿಗಳ ನಿರ್ದೇಶನ ಮತ್ತು ನಿರ್ಮಾಣದಲ್ಲೂ ಅವರು ತೊಡಗಿಕೊಂಡರು. ಆಗಲೇ ಕೆಲವು ವಿವಾದಗಳು ಅವರನ್ನು ಸುತ್ತಿಕೊಂಡಿದ್ದವು.

2005ರಲ್ಲಿ ಮೊದಲ ಸಿನಿಮಾ:

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು 2005ರಲ್ಲಿ ಬಾಲಿವುಡ್​ಗೆ ಕಾಲಿಟ್ಟರು. ಅವರು ನಿರ್ದೇಶಿಸಿದ ಮೊದಲ ಹಿಂದಿ ಸಿನಿಮಾ ‘ಚಾಕೊಲೇಟ್​’ 2005ರ ಸೆಪ್ಟೆಂಬರ್​ 16ರಂದು ತೆರೆಕಂಡಿತು. ಆ ಚಿತ್ರದಲ್ಲಿ ಇಮ್ರಾನ್​ ಹಷ್ಮಿ, ತನುಶ್ರೀ ದತ್ತ ಅಭಿನಯಿಸಿದ್ದರು. ಬಳಿಕ ‘ಧನ್​ ಧನಾ ಧನ್​ ಗೋಲ್​’, ‘ಹೇಟ್​ ಸ್ಟೋರಿ’, ‘ಝಿದ್​’, ‘ಬುದ್ಧ ಇನ್​ ಎ ಟ್ರಾಫಿಕ್​ ಜಾಮ್​’, ‘ಜುನೂನಿಯತ್​’, ‘ದಿ ತಾಷ್ಕೆಂಟ್​ ಫೈಲ್ಸ್​’ ಮತ್ತು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗಳನ್ನು ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ.

‘ದಿ ತಾಷ್ಕೆಂಟ್​ ಫೈಲ್ಸ್’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ:

ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ನಿಧನದ ಕುರಿತು ಸಿದ್ಧವಾದ ಸಿನಿಮಾ ‘ದಿ ತಾಷ್ಕೆಂಟ್​ ಫೈಲ್ಸ್’. 2019ರ ಏಪ್ರಿಲ್​ 12ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಕೆಲವರಿಂದ ನೆಗಟಿವ್​ ವಿಮರ್ಶೆ ಸಿಕ್ಕಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ನಿಧಾನವಾಗಿ ಯಶಸ್ಸು ಕಂಡಿತ್ತು. ಅಲ್ಲದೇ ರಾಷ್ಟ್ರ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ‘ದಿ ತಾಷ್ಕೆಂಟ್​ ಫೈಲ್ಸ್’ ಯಶಸ್ವಿ ಆಯಿತು. ‘ಅತ್ಯುತ್ತಮ ಚಿತ್ರಕಥೆ’ ರಾಷ್ಟ್ರ ಪ್ರಶಸ್ತಿಯನ್ನು ವಿವೇಕ್​ ಅಗ್ನಿಹೋತ್ರಿ ಸ್ವೀಕರಿಸಿದರು. ಈ ಸಿನಿಮಾದಲ್ಲಿನ ನಟನೆಗೆ ಪಲ್ಲವಿ ಜೋಶಿ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತು.

ಸೆನ್ಸಾರ್ ಮಂಡಳಿಯಲ್ಲೂ ಸೇವೆ ಸಲ್ಲಿಸಿದ ವಿವೇಕ್​ ಅಗ್ನಿಹೋತ್ರಿ:

ಚಿತ್ರರಂಗದಲ್ಲಿ ಸಕ್ರಿಯರಾಗಿರುವ ವಿವೇಕ್​ ಅಗ್ನಿಹೋತ್ರಿ ಅವರು ಸೆನ್ಸಾರ್​ ಮಂಡಳಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 2017ರಲ್ಲಿ ಅವರು ‘ಕೇಂದ್ರ ಚಲನಚಿತ್ರ ಪ್ರಮಾಣಿಕೃತ ಮಂಡಳಿ’ ಸದಸ್ಯನಾಗಿ ಆಯ್ಕೆ ಆಗಿದ್ದರು. ‘48ನೇ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾ’ ಪ್ರೀವ್ಯೂ ಕಮಿಟಿಯಲ್ಲೂ ಅವರು ಕೆಲಸ ಮಾಡಿದರು.

ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ:

ಅನುಭವಿ ನಟಿ ಪಲ್ಲವಿ ಜೋಶಿ ಅವರನ್ನು ವಿವೇಕ್​ ಅಗ್ನಿಹೋತ್ರಿ ಅವರು ವಿವಾಹವಾಗಿದ್ದಾರೆ. ಬಾಲನಟಿ ಆಗಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟು ಅನುಭವ ಪಡೆದವರು ಪಲ್ಲವಿ ಜೋಶಿ. ನಂತರ ಅನೇಕ ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ಅವರು ನಟಿಸಿದರು. ‘ದಿ ತಾಷ್ಕೆಂಟ್​ ಫೈಲ್ಸ್​’ ಸಿನಿಮಾದಲ್ಲಿನ ಅಭಿನಯಕ್ಕೆ ಅವರು ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ಈಗ ಸೂಪರ್​ ಹಿಟ್​ ಆಗಿರುವ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ಪ್ರೊಫೆಸರ್​ ರಾಧಿಕಾ ಮೆನನ್​ ಎಂಬ ಪಾತ್ರವನ್ನು ಪಲ್ಲವಿ ಜೋಶಿ ನಿಭಾಯಿಸಿದ್ದಾರೆ. ಪಲ್ಲವಿ ಜೋಶಿ-ವಿವೇಕ್​ ಅಗ್ನಿಹೋತ್ರಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

Fact Check: ‘ದಿ ಕಾಶ್ಮೀರ್​ ಫೈಲ್ಸ್​’ ನೋಡಿ ಅಡ್ವಾಣಿ ಅತ್ತರು ಅನ್ನೋದು ಸುಳ್ಳು; ಇಲ್ಲಿದೆ ಅಸಲಿ ವಿಷಯ