Fact Check: ‘ದಿ ಕಾಶ್ಮೀರ್ ಫೈಲ್ಸ್’ ನೋಡಿ ಅಡ್ವಾಣಿ ಅತ್ತರು ಅನ್ನೋದು ಸುಳ್ಳು; ಇಲ್ಲಿದೆ ಅಸಲಿ ವಿಷಯ
ಒಂದು ವಿಡಿಯೋವನ್ನು ಸಿಕ್ಕಾಪಟ್ಟೆ ವೈರಲ್ ಮಾಡಲಾಗುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡಿಯೇ ಎಲ್.ಕೆ. ಅಡ್ವಾಣಿ ಅತ್ತರು ಎಂದು ಬಿಂಬಿಸಲಾಗುತ್ತಿದೆ.
ಇದು ಸೋಶಿಯಲ್ ಮೀಡಿಯಾ ಯುಗ. ಕ್ಷಣಾರ್ಧದಲ್ಲಿ ಯಾವುದು ಬೇಕಾದರೂ ವೈರಲ್ ಆಗುತ್ತದೆ. ಆದರೆ ನಿಜ ಯಾವುದು, ಸುಳ್ಳು ಯಾವುದು ಎಂಬುದನ್ನು ತಿಳಿದುಕೊಳ್ಳುವ ತಾಳ್ಮೆ ಜನರಿಗೆ ಇರಲೇಬೇಕು. ಇಲ್ಲದಿದ್ದರೆ ಕಟ್ಟುಕಥೆಯನ್ನೇ ನಿಜವೆಂದು ನಂಬಿಕೊಂಡು ಯಾಮಾರಬೇಕಾಗುತ್ತದೆ. ಈಗ ಎಲ್.ಕೆ. ಅಡ್ವಾಣಿ ಅವರ ಒಂದು ವಿಡಿಯೋ ವೈರಲ್ ಆಗಿದೆ. ದೇಶಾದ್ಯಂತ ಸುದ್ದಿ ಆಗುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಎಲ್.ಕೆ. ಅಡ್ವಾಣಿ (LK Advani) ನೋಡಿ ಕಣ್ಣೀರು ಹಾಕಿದರು ಎಂದು ಕಥೆ ಕಟ್ಟಲಾಗುತ್ತಿದೆ. ಆ ಸುಳ್ಳು ಸುದ್ದಿಗೆ ಬೆಂಬಲವಾಗಿ ಈ ವೈರಲ್ ವಿಡಿಯೋ ತೋರಿಸಲಾಗುತ್ತಿದೆ. ಆ ವಿಡಿಯೋದಲ್ಲಿ ಅಡ್ವಾಣಿ ಅವರು ಅತ್ತಿರುವುದು ನಿಜ. ಆದರೆ ಅವರು ನೋಡಿದ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಅಲ್ಲ. ಅದರ ಹಿಂದೆ ಬೇರೆಯದೇ ಸತ್ಯ ಇದೆ. ಅದನ್ನು ತಿಳಿಯುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಸಿಕ್ಕಾಪಟ್ಟೆ ವೈರಲ್ ಮಾಡಲಾಗುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡಿಯೇ ಅಡ್ವಾಣಿ ಅತ್ತರು ಎಂದು ಬಿಂಬಿಸಲಾಗುತ್ತಿದೆ. ಅಂದಹಾಗೆ, ಆ ವಿಡಿಯೋ (LK Advani Viral Video) ಎರಡು ವರ್ಷ ಹಳೆಯದು. ಅದಕ್ಕೆ ಇಲ್ಲಿದೆ ಸಾಕ್ಷಿ..
ಖ್ಯಾತ ನಿರ್ದೇಶಕ/ನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರು 2020ರಲ್ಲಿ ‘ಶಿಕಾರ’ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಎಲ್.ಕೆ. ಅಡ್ವಾಣಿ ಅವರು ಭಾಗಿ ಆಗಿದ್ದರು. ‘ಶಿಕಾರ’ ಸಿನಿಮಾ ನೋಡಿದ ಬಳಿಕ ಅಡ್ವಾಣಿ ಎಮೋಷನಲ್ ಆಗಿದ್ದರು. ಅಂದು ಅವರು ಕಣ್ಣೀರು ಹಾಕಿದ್ದರು. ಆ ವಿಡಿಯೋವನ್ನು ವಿಧು ವಿನೋದ್ ಚೋಪ್ರಾ ಅವರು 2020ರ ಫೆ.7ರಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.
Shri L K Advani at the special screening of #Shikara We are so humbled and grateful for your blessings and your appreciation for the film Sir. @foxstarhindi @rahulpandita pic.twitter.com/oUeymMayhc
— Vidhu Vinod Chopra Films (@VVCFilms) February 7, 2020
ವಿಶೇಷ ಏನೆಂದರೆ ‘ಶಿಕಾರ’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ನಡುವೆ ಒಂದು ಸಾಮ್ಯತೆ ಇದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಹೇಳಲಾಗಿದೆ. ‘ಶಿಕಾರ’ ಸಿನಿಮಾ ಕೂಡ ಅದೇ ವಿಚಾರವನ್ನು ಆಧರಿಸಿದೆ. ಆದರೆ ಒಂದು ಲವ್ ಸ್ಟೋರಿಯ ಹಿನ್ನೆಲೆಯಲ್ಲಿ ‘ಶಿಕಾರ’ ಸಿನಿಮಾವನ್ನು ವಿಧು ವಿನೋದ್ ಚೋಪ್ರಾ ಕಟ್ಟಿಕೊಟ್ಟಿದ್ದರು. ಆದರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ತುಂಬ ರಾ ಆಗಿ ಚಿತ್ರಿಸಿದ್ದಾರೆ.
ಈ ಸಿನಿಮಾ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಂಗಳವಾರ (ಮಾ.15) ಬೆಂಗಳೂರಿನಲ್ಲಿ ಅನೇಕ ಸಚಿವರು ಮತ್ತು ಶಾಸಕರಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ಬಾಲಿವುಡ್ ಮಂದಿಯ ಮೌನಕ್ಕೆ ಕಂಗನಾ ಗರಂ:
‘ಈ ಸಿನಿಮಾದ ಕಂಟೆಂಟ್ ಮಾತ್ರವಲ್ಲದೇ ಬಾಕ್ಸ್ ಆಫೀಸ್ ಗಳಿಕೆ ಕೂಡ ಗಮನಾರ್ಹ ಆಗಿವೆ. ಈ ಬಗ್ಗೆ ಬಾಲಿವುಡ್ನಲ್ಲಿ ಸೃಷ್ಟಿ ಆಗಿರುವ ಮೌನವನ್ನು ಗಮನಿಸಿ. ಬಂಡವಾಳ ಮತ್ತು ಲಾಭದ ದೃಷ್ಟಿಯಿಂದ ನೋಡಿದರೆ ಈ ವರ್ಷ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಇದಾಗಲಿದೆ. ಕೊರೊನಾ ಬಳಿಕ ದೊಡ್ಡ ಸಿನಿಮಾಗಳಿಗೆ ಮಾತ್ರ ಥಿಯೇಟರ್ಗಳು ಸೂಕ್ತ ಎಂಬ ಕಲ್ಪನೆಯನ್ನು ಈ ಚಿತ್ರ ಹೊಡೆದುಹಾಕಿದೆ. ಮುಂಜಾನೆ 6 ಗಂಟೆಯ ಶೋಗಳು ಹೌಸ್ಫುಲ್ ಆಗುತ್ತಿವೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇಡೀ ಜಗತ್ತು ಈ ಚಿತ್ರವನ್ನು ನೋಡುತ್ತಿದೆ. ಆದರೆ ಬಾಲಿವುಡ್ನವರು ಸೈಲೆಂಟ್ ಆಗಿದ್ದಾರೆ’ ಎಂದು ಕಂಗನಾ ರಣಾವತ್ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವಿಶೇಷ ಶೋ; ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿದ ಸ್ಪೀಕರ್ ಕಾಗೇರಿ