
ನಿರ್ದೇಶಕ ರಾಜ್ಕುಮಾರ್ ಹಿರಾನಿ (Rajkumar Hirani) ಮತ್ತು ನಟ ಶಾರುಖ್ ಖಾನ್ ಅವರ ಕಾಂಬಿನೇಷನ್ನಿಂದಾಗಿ ‘ಡಂಕಿ’ ಸಿನಿಮಾದ ಮೇಲೆ ನಿರೀಕ್ಷೆ ಮೂಡುವಂತಾಗಿದೆ. ಈ ಸಿನಿಮಾದ ಶೀರ್ಷಿಕೆಯೇ ಕ್ಯಾಚಿ ಆಗಿದೆ. ಈ ಟೈಟಲ್ನ ಅರ್ಥ ಏನು ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಸಿನಿಮಾ ನೋಡಿದಾಗ ಅದಕ್ಕೆ ಉತ್ತರ ಸಿಗುತ್ತದೆ. ಆದರೆ ಅದನ್ನೂ ಮುನ್ನವೇ ಶಾರುಖ್ ಖಾನ್ ಅವರು ‘ಡಂಕಿ’ (Dunki) ಎಂದರೆ ಏನು ಎಂಬುದನ್ನು ತಿಳಿಸಿದ್ದಾರೆ. ಟ್ವಿಟರ್ನಲ್ಲಿ ಪ್ರಶ್ನೋತ್ತರ ನಡೆಸಿದ ಶಾರುಖ್ ಖಾನ್ (Shah Rukh Khan) ಅವರು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಈ ವಿಚಾರ ಬಹಿರಂಗಪಡಿಸಿದ್ದಾರೆ.
‘ಅನುಮತಿ ಇಲ್ಲದೇ ದೇಶದ ಗಡಿ ದಾಟುವುದಕ್ಕೆ ಡಾಂಕಿ ಜರ್ನಿ ಎನ್ನುತ್ತಾರೆ. ಪಂಬಾಬಿ ಉಚ್ಛಾರದಲ್ಲಿ ಇದನ್ನು ಡಂಕಿ ಎನ್ನುತ್ತಾರೆ’ ಎಂದು ಶಾರುಖ್ ಖಾನ್ ಅವರು ತಿಳಿಸಿದ್ದಾರೆ. ಪಂಜಾಬಿನ ಕೆಲವು ಯುವಕರು ಇಂಗ್ಲೆಂಡ್ಗೆ ಹೋಗಬೇಕು ಎಂದು ಕನಸು ಕಾಣುವ ಮತ್ತು ಭಾರತದ ಗಡಿ ದಾಟಲು ಪ್ರಯತ್ನಿಸುವ ಕಥೆ ‘ಡಂಕಿ’ ಸಿನಿಮಾದಲ್ಲಿ ಇದೆ. ಆ ಬಗ್ಗೆ ಟ್ರೇಲರ್ನಲ್ಲೇ ಸುಳಿವು ಬಿಟ್ಟುಕೊಡಲಾಗಿದೆ. ಸದ್ಯ ಯೂಟ್ಯೂಬ್ನಲ್ಲಿ ಈ ಟ್ರೇಲರ್ ಧೂಳೆಬ್ಬಿಸಿದೆ.
ಇದನ್ನೂ ಓದಿ: ‘ಸಲಾರ್’ ವರ್ಸಸ್ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್ ಖಾನ್ ಮೇಲುಗೈ
ಡಿಸೆಂಬರ್ 21ರಂದು ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಎರಡು ಶೇಡ್ನ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ತಾಪ್ಸಿ ಪನ್ನು ನಟಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ ಅಭಿನಯಿಸಿದ್ದಾರೆ. ಈ ಎಲ್ಲ ಕಲಾವಿದರ ಕಾರಣದಿಂದ ಸಿನಿಮಾದ ಚಾರ್ಮ್ ಹೆಚ್ಚಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ತುಂಬ ಕ್ಲಾಸ್ ಆಗಿ ಈ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ.
ರಾಜ್ಕುಮಾರ್ ಹಿರಾನಿ ಅವರ ಕೆಲಸದ ಮೇಲೆ ಅಭಿಮಾನಿಗಳಿಗೆ ಭರವಸೆ ಇದೆ. ಈಗಾಗಲೇ ಅವರು ‘ಪಿಕೆ’, ‘ಸಂಜು’, ‘3 ಈಡಿಯಟ್ಸ್’, ‘ಮುನ್ನಾಭಾಯ್ ಎಂಬಿಬಿಎಸ್’ ಸಿನಿಮಾಗಳ ಮೂಲಕ ತಮ್ಮ ಪ್ರತಿಭೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ಅವರು ‘ಡಂಕಿ’ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಹೊಸ ಕಹಾನಿ ತೋರಿಸಲು ಸಜ್ಜಾಗಿದ್ದಾರೆ. ‘ಡಂಕಿ’ ತೆರೆಕಂಡ ಮರುದಿನವೇ, ಅಂದರೆ ಡಿ.22ರಂದು ‘ಸಲಾರ್’ ಬಿಡುಗಡೆ ಆಗಲಿದೆ. ಹಾಗಾಗಿ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಏರ್ಪಡಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.