‘ರಾಮಾಯಣ’ವನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಆಗರ್ಭ ಶ್ರೀಮಂತ ನಮಿತ್ ಮಲ್ಹೋತ್ರಾ ಯಾರು?

Who is Namit Malhotra: ‘ರಾಮಾಯ ಸಿನಿಮಾ ವಿಶ್ವಕ್ಕಾಗಿ ನಿರ್ಮಿಸಲಾಗಿರುವ ಭಾರತೀಯ ಸಿನಿಮಾ’ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಅದರಂತೆಯೇ ಸಿನಿಮಾದ ಪ್ರಚಾರವನ್ನು ಪ್ರತಿಷ್ಠಿತ ಹಾಲಿವುಡ್ ವೇದಿಕೆಗಳಲ್ಲಿ, ಟಾಪ್ ಹಾಲಿವುಡ್​ ಸಿನಿಮಾಗಳ ಜೊತೆಯಲ್ಲಿಯೇ ಮಾಡಲಾಗುತ್ತಿದೆ. ‘ರಾಮಾಯಣ’ದಂತಹಾ ಅಪ್ಪಟ ಭಾರತೀಯ ಕತೆಯನ್ನು ವಿಶ್ವಕ್ಕೆ ಪರಿಚಯಿಸಲು ಊಹಿಸಲಾಗದ ಬಜೆಟ್​​ ಅನ್ನು ಹೂಡಿಕೆ ಮಾಡಿದ್ದಾರೆ ನಿರ್ಮಾಪಕ ನಮಿತ್ ಮಲ್ಹೋತ್ರಾ. ಅಷ್ಟಕ್ಕೂ ಯಾರು ಈ ನಮಿತ್ ಮಲ್ಹೋತ್ರಾ?

‘ರಾಮಾಯಣ’ವನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಆಗರ್ಭ ಶ್ರೀಮಂತ ನಮಿತ್ ಮಲ್ಹೋತ್ರಾ ಯಾರು?
ರಾಮಾಯಣ

Updated on: Aug 13, 2026 | 1:34 PM

ಮುಖ್ಯಾಂಶಗಳು

  • ‘ರಾಮಾಯಣ’ ಭಾರತದ ಅತಿ ಹೆಚ್ಚು ಬಜೆಟ್​​ನ ಸಿನಿಮಾ ಎನಿಸಿಕೊಂಡಿದೆ
  • ‘ರಾಮಾಯಣ’ ಸಿನಿಮಾದ ಎರಡು ಭಾಗಕ್ಕೆ ಸುಮಾರು 4000 ಕೋಟಿ ಬಜೆಟ್ ಹಾಕಲಾಗಿದೆ.
  • ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು? ಹಿನ್ನೆಲೆ ಏನು?

‘ರಾಮಾಯಣ’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಭಾರತೀಯ ಸಿನಿಮಾಗಳಲ್ಲಿ ಹಿಂದೆಂದೂ ನೋಡಿರದ ರೀತಿಯ ವಿಎಫ್​​ಎಕ್ಸ್, ಸ್ಪೆಷಲ್ ಎಫೆಕ್ಸ್​​ಗಳನ್ನು ಸಿನಿಮಾ ಹೊಂದಿದೆ. ‘ರಾಮಾಯಣ’ ಸಿನಿಮಾದ ಎರಡು ಭಾಗಕ್ಕಾಗಿ ಸುಮಾರು 4000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎನ್ನಲಾಗುತ್ತಿದೆ. ‘ಇದು ವಿಶ್ವಕ್ಕಾಗಿ ನಿರ್ಮಿಸಲಾಗಿರುವ ಭಾರತೀಯ ಸಿನಿಮಾ’ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಅದರಂತೆಯೇ ಸಿನಿಮಾದ ಪ್ರಚಾರವನ್ನು ಪ್ರತಿಷ್ಠಿತ ಹಾಲಿವುಡ್ ವೇದಿಕೆಗಳಲ್ಲಿ, ಟಾಪ್ ಹಾಲಿವುಡ್​ ಸಿನಿಮಾಗಳ ಜೊತೆಯಲ್ಲಿಯೇ ಮಾಡಲಾಗುತ್ತಿದೆ. ‘ರಾಮಾಯಣ’ದಂತಹಾ ಅಪ್ಪಟ ಭಾರತೀಯ ಕತೆಯನ್ನು ವಿಶ್ವಕ್ಕೆ ಪರಿಚಯಿಸಲು ಊಹಿಸಲಾಗದ ಬಜೆಟ್​​ ಅನ್ನು ಹೂಡಿಕೆ ಮಾಡಿದ್ದಾರೆ ನಿರ್ಮಾಪಕ ನಮಿತ್ ಮಲ್ಹೋತ್ರಾ. ಅಷ್ಟಕ್ಕೂ ಯಾರು ಈ ನಮಿತ್ ಮಲ್ಹೋತ್ರಾ?

‘ರಾಮಾಯಣ’ ಸಿನಿಮಾ ಪ್ರಾರಂಭವಾಗುವುದಕ್ಕೆ ಮುಂಚೆ ಭಾರತೀಯ ಚಿತ್ರಪ್ರೇಮಿಗಳಿಗೆ ನಮಿತ್ ಮಲ್ಹೋತ್ರಾ ಹೆಸರು ಪರಿಚಯವೇ ಇರಲಿಲ್ಲ. ಆದರೆ ನಮಿತ್ ಅವರಿಗೆ ಸಿನಿಮಾಗಳು ಹೊಸದಲ್ಲ. ದಶಕಗಳಿಂದಲೂ ಅದೇ ರಂಗದಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. ಭಾರತೀಯ ಸಿನಿಮಾಗಳು ಆಸ್ಕರ್ ವೇದಿಕೆ ಏರಲು ಹೆಣಗಾಡುತ್ತಿರುವ ಸಮಯದಲ್ಲಿಯೇ ನಮಿತ್ ಮಲ್ಹೋತ್ರಾ ಅವರು ಬರೋಬ್ಬರಿ ಎಂಟು ಆಸ್ಕರ್ ವಿಜಯಗಳ ಹಿಂದೆ ಪ್ರಮುಖ ಶಕ್ತಿಯಾಗಿ ನಿಂತವರು.

ಇಂದು ಭಾರತೀಯ ಸಿನಿಮಾ ಪ್ರೇಮಿಗಳು ಕೊಂಡಾಡುವ ನೋಲನ್ ಸಿನಿಮಾಗಳು, ಮಾರ್ವೆಲ್, ಡಿಸಿ ಸಿನಿಮಾಗಳಿಗೆ ವಿಎಫ್​​ಎಕ್ಸ್, ಸ್ಪೆಷಲ್ ಎಫೆಕ್ಟ್ ಮಾಡಿಕೊಡುವ ಡಿನಿಜ್ (DNEG) ಸಂಸ್ಥೆಯ ಸಿಇಓ ನಮಿತ್ ಮಲ್ಹೋತ್ರಾ. ಕಾರ್ಯಕ್ರೇತ್ರ ಹಾಲಿವುಡ್ ಆದರೂ ಅವರ ಮೂಲ ಭಾರತ. 1995ರಲ್ಲಿ, 18 ವರ್ಷದ ಯುವಕನಾಗಿದ್ದ ನಮಿತ್ ಮಲ್ಹೋತ್ರಾ ಮುಂಬೈನಲ್ಲಿ, ತಮ್ಮ ತಂದೆಯ ಗ್ಯಾರೇಜ್‌ನಲ್ಲಿ ಒಂದೇ ಒಂದು ಕಂಪ್ಯೂಟರ್ ಬಳಸಿ ಎಡಿಟಿಂಗ್ ಸ್ಟುಡಿಯೋ ಆರಂಭಿಸಿದ್ದರು. ಆ ಸ್ಟುಡಿಯೋ ಸ್ಥಾಪಿಸಲು ಅವರು ತಮ್ಮ ಕುಟುಂಬದ ಮನೆಯನ್ನೇ ಅಡಮಾನವಿಟ್ಟಿದ್ದರು. ಆ ಸಮಯದಲ್ಲಿ ಭಾರತೀಯ ವಿಎಫ್‌ಎಕ್ಸ್ ಎನ್ನುವುದು ತೀರ ಕಳಪೆ ಆಗಿತ್ತು. ಅದನ್ನು ಬದಲಾಯಿಸುವುದೇ ನಮಿತ್ ಮಲ್ಹೋತ್ರಾ ಗುರಿ ಆಗಿತ್ತು.

‘ಪ್ರೈಂ ಫೋಕಸ್’ ಹೆಸರಿನಲ್ಲಿ ಸ್ಟುಡಿಯೋ ಆರಂಭಿಸಿ ಭಾರತೀಯ ಸಿನಿಮಾ ಮತ್ತು ಟಿವಿ ಶೋಗಳಿಗೆ ಗ್ರಾಫಿಕ್ಸ್ ಒದಗಿಸುವ ಕಾರ್ಯ ಮಾಡುತ್ತಿದ್ದರು. ‘ಭೂಗಿ ವೂಗಿ’ ಸೇರಿದಂತೆ ಸೋನಿ, ಜೀ ಎಂಟರ್ಟೈನ್​​ಮೆಂಟ್​​ನ ಹಲವು ಕಾರ್ಯಕ್ರಮಗಳಿಗೆ ಗ್ರಾಫಿಕ್ಸ್ ಮಾಡಿಕೊಟ್ಟಿದ್ದರು. ಭಾರತದಲ್ಲಿ 90ರ ದಶಕದಲ್ಲಿ ಜನಪ್ರಿಯವಾದ ಹಲವಾರು ಜಾಹೀರಾತುಗಳ ಹಿಂದೆ ನಮಿತ್ ಮಲ್ಹೋತ್ರಾ ಅವರ ಶ್ರಮವಿದೆ. 2006ರ ವೇಳೆಗೆ ಪ್ರೈಂ ಫೋಕಸ್ ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸಿದ ನಮಿತ್, ಭಾರತೀಯ ಷೇರು ಮಾರುಕಟ್ಟೆಗೆ ಲಿಸ್ಟ್ ಮಾಡಿಸಿದರು.

2009ರ ವೇಳೆಗೆ ನಮಿತ್ ಹಾಗೂ ಅವರ ಸಂಸ್ಥೆಯ ವೃತ್ತಿಪರತೆ, ಗುಣಮಟ್ಟದ ಕಾರಣಕ್ಕೆ ಹಾಲಿವುಡ್ ಸಿನಿಮಾಗಳು ಸಹ ಅರಸಿ ಬಂದವು. ‘ಸ್ಟಾರ್ ವಾರ್ಸ್’, ‘ಹ್ಯಾರಿ ಪಾಟರ್’, ‘ನಾರ್ನಿಯಾ’, ‘ಟೈಟನ್ಸ್’, ‘ಟ್ರಾನ್ಸ್​ಫಾರ್ಮರ್ಸ್’ ಇನ್ನೂ ಹಲವು ಸಿನಿಮಾಗಳಿಗೆ 3ಡಿ ಸೇರಿದಂತೆ ಇನ್ನೂ ಕೆಲವು ಎಫೆಕ್ಟ್ಸ್ ಕೆಲಸಗಳನ್ನು ಮಾಡಿದ್ದು ಇದೇ ನಮಿತ್ ಮಲ್ಹೋತ್ರಾ ಮತ್ತು ತಂಡ.

2014 ರಲ್ಲಿ ನಮಿತ್ ಮಲ್ಹೋತ್ರಾ ಅವರು ತಮ್ಮ ಪ್ರೈಂ ಫೋಕಸ್ ಸಂಸ್ಥೆಯನ್ನು ಲಂಡನ್ ಮೂಲಕ ಡಿಎನ್​ಜಿ (DNEG) ಸಂಸ್ಥೆಯ ಜೊತೆಗೆ ಮರ್ಜ್ ಮಾಡಿದರು ಮಾತ್ರವಲ್ಲದೆ ಆ ಸಂಸ್ಥೆಯ ಸಿಇಓ ಆಗುವ ಮೂಲಕ ಸಂಸ್ಥೆಯ ಚುಕ್ಕಾಣಿ ಹಿಡಿದುಕೊಂಡರು. ನಮಿತ್ ಅವರು ಸಂಸ್ಥೆಯ ಸಿಇಓ ಆದ ಬಳಿಕ ‘ಇಂಟರ್ಸೆಲ್ಲರ್’, ‘ಡ್ಯೂನ್’, ‘ಟೆನೆಟ್’, ‘ಬ್ಲೇಡ್ ರನ್ನರ್’ ಇನ್ನೂ ಹತ್ತು ಹಲವು ಸಿನಿಮಾಗಳು, ವೆಬ್ ಸರಣಿಗಳಿಗೆ ಸಂಸ್ಥೆ ವಿಎಫ್​​ಎಕ್ಸ್, ಸ್ಪೆಷಲ್ ಎಫೆಕ್ಟ್ಸ್ ಮಾಡಿದ್ದು ಮಾತ್ರವಲ್ಲದೆ ಹಲವು ಆಸ್ಕರ್ ಗಳನ್ನು ಸಹ ಪಡೆದುಕೊಂಡಿತು.

ವೃತ್ತಿ ಬದುಕಿನ ಬಹುತೇಕ ವರ್ಷಗಳನ್ನು ಹಾಲಿವುಡ್​​ ಅಂಗಳದಲ್ಲೇ ಕಳೆದಿದ್ದರೂ ಭಾರತೀಯತೆಯನ್ನು ಉಳಿಸಿಕೊಂಡಿದ್ದ ನಮಿತ್ ಮಲ್ಹೋತ್ರಾ ತಮ್ಮ ನೆಲದ ಕತೆಗಳನ್ನು ವಿಶ್ವಕ್ಕೆ ಸಾರಿ ಹೇಳಬೇಕು ಎಂಬ ಅದಮ್ಯ ಬಯಕೆಯಿಂದ ‘ರಾಮಾಯಣ’ ಸಿನಿಮಾಕ್ಕೆ ಕೈ ಹಾಕಿದರು. ನಮಿತ್ ಮಲ್ಹೋತ್ರಾ ‘ರಾಮಾಯಣ’ ಸಿನಿಮಾ ಘೋಷಿಸುವ ವೇಳೆಗೆ ಅದೇ ಕತೆ ಆಧರಿಸಿದ ‘ಆದಿಪುರುಷ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಗಿತ್ತು. ಆದರೂ ಆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ತಮ್ಮ ವೃತ್ತಿ ಕೌಶಲ್ಯ, ನಿರ್ದೇಶಕ ನಿತೀಶ್ ತಿವಾರಿ ಅವರ ವಿಷನ್​​ ಮೇಲೆ ನಂಬಿಕೆ ಇಟ್ಟು ಸಿನಿಮಾಕ್ಕೆ ಭಾರಿ ದೊಡ್ಡ ಮೊತ್ತದ ಹಣಕಾಸು ಹೂಡಿಕೆ ಮಾಡಿದರು.

ಇದನ್ನೂ ಓದಿ: ‘ರಾಮಾಯಣ ಟ್ರೇಲರ್‌ ನನ್ನನ್ನು ಇಂಪ್ರೆಸ್ ಮಾಡಿಲ್ಲ: ‘ಮಹಾಭಾರತ’ ಖ್ಯಾತಿಯ ಗಜೇಂದ್ರ ಚೌಹಾಣ್ ಪ್ರತಿಕ್ರಿಯೆ

ಅದರ ಫಲವಾಗಿ ಈಗ ‘ರಾಮಾಯಣ’ ಚಿತ್ರವನ್ನು ಅತ್ಯಂತ ಭವ್ಯವಾಗಿ, ಐಮ್ಯಾಕ್ಸ್ (IMAX) ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ನಮಿತ್ ಅವರ ಪ್ರಕಾರ, ಈ ಚಿತ್ರ ಕೇವಲ ದೊಡ್ಡ ಬಜೆಟ್‌ನ ಚಲನಚಿತ್ರವಲ್ಲ, ಬದಲಿಗೆ ಇದು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ನೀಡುವ ಕೊಡುಗೆಯಾಗಿದೆ. ಭಾರತೀಯ ಪ್ರತಿಭೆಗಳಿಗೆ ಸೂಕ್ತ ಅವಕಾಶ ಮತ್ತು ತಂತ್ರಜ್ಞಾನ ಒದಗಿಸಿದರೆ, ಇಡೀ ವಿಶ್ವವೇ ನೋಡುವಂತಹ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ನಮಿತ್ ಅವರ ಯಶೋಗಾಥೆಯೇ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us