ದೀಪಿಕಾ ಯಾರೆಂಬುದೇ ಗೊತ್ತಿಲ್ಲ; ಬಾಫ್ಟಾ ವೇದಿಕೆಯಲ್ಲಿ ಮಿಂಚಿದ ನಟಿ ಕಂಡು ವಿದೇಶಿಗರಿಗೆ ಅಚ್ಚರಿ

ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಅವರು ಪ್ರತಿ ಬಾರಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದಾಗ ಅಭಿಮಾನಿಗಳು ವಾವ್​ ಎನ್ನುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಆದರೆ ವಿದೇಶದ ಕೆಲವು ನೆಟ್ಟಿಗರಿಗೆ ದೀಪಿಕಾ ಪಡುಕೋಣೆ ಯಾರು ಎಂಬುದು ಗೊತ್ತಾಗಿಲ್ಲ. ಹಾಗಾಗಿ, ‘ಇವರು ಭಾರತದ ಸೂಪರ್​ ಸ್ಟಾರ್​’ ಎಂದು ದೀಪಿಕಾ ಅಭಿಮಾನಿಗಳು ಉತ್ತರ ನೀಡಿದ್ದಾರೆ.

ದೀಪಿಕಾ ಯಾರೆಂಬುದೇ ಗೊತ್ತಿಲ್ಲ; ಬಾಫ್ಟಾ ವೇದಿಕೆಯಲ್ಲಿ ಮಿಂಚಿದ ನಟಿ ಕಂಡು ವಿದೇಶಿಗರಿಗೆ ಅಚ್ಚರಿ
ದೀಪಿಕಾ ಪಡುಕೋಣೆ

Updated on: Feb 19, 2024 | 5:43 PM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಭಾರತದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅವರು ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೇ, ಹಾಲಿವುಡ್​ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್​ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ವಿದೇಶದ ಕೆಲವು ಮಂದಿಗೆ ದೀಪಿಕಾ ಪಡುಕೋಣೆ ಯಾರೆಂಬುದೇ ಗೊತ್ತಿಲ್ಲ. ಹೌದು, ಬಾಫ್ಟಾ (BAFTA) ಸಮಾರಂಭದ ರೆಡ್​ ಕಾರ್ಪೆಟ್​ ಮೇಲೆ ಮಿಂಚಿದ ದೀಪಿಕಾ ಪಡುಕೋಣೆ ಅವರ ಫೋಟೋಗಳು ವೈರಲ್​ ಆಗಿದ್ದನ್ನು ಕಂಡು ವಿದೇಶದ ಕೆಲವು ನೆಟ್ಟಿಗರು ‘ಯಾರು ಇವರು’ ಎಂದು ಪ್ರಶ್ನಿಸಿದ್ದಾರೆ!

ಭಾನುವಾರ (ಫೆಬ್ರವರಿ 18) ರಾತ್ರಿ ಲಂಡನ್​ನಲ್ಲಿ ಬಾಫ್ಟಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಅವರು ಭಾಗಿಯಾಗಿದ್ದಾರೆ. ರೆಡ್​ ಕಾರ್ಪೆಟ್​ ಮೇಲೆ ಅವರು ಹೆಜ್ಜೆ ಹಾಕಿದ್ದಾರೆ. ಆಕರ್ಷಕವಾದ ಸೀರೆ ಧರಿಸಿ ಅವರು ಮಿರಿಮಿರಿ ಮಿಂಚಿದ್ದಾರೆ. ವೇದಿಕೆಗೆ ಬಂದು ‘ಇಂಗ್ಲಿಷೇತರ ಅತ್ಯುತ್ತಮ ಸಿನಿಮಾ’ ವಿಭಾಗದ ಪ್ರಶಸ್ತಿಯನ್ನು ದೀಪಿಕಾ ಪಡುಕೋಣೆ ಅವರು ಪ್ರದಾನ ಮಾಡಿದ್ದಾರೆ.

ಬಾಫ್ಟಾದಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಅವರ ಫೋಟೋಗಳನ್ನು ನೋಡಿ ವಿದೇಶದ ಮಂದಿಗೆ ಅಚ್ಚರಿ ಆಗಿದೆ. ಯಾಕೆಂದರೆ, ಅವರಿಗೆ ದೀಪಿಕಾ ಯಾರು ಎಂಬುದು ತಿಳಿದಿಲ್ಲ. ‘ಇವರು ಯಾರು ಎಂಬುದು ಗೊತ್ತಿಲ್ಲ. ಆದರೆ ಆ ಡ್ರೆಸ್​ನಲ್ಲಿ ತುಂಬ ಚೆನ್ನಾಗಿ ಕಾಣುತ್ತಿದ್ದಾರೆ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ದೀಪಿಕಾ ಪಡುಕೋಣೆ ಅಭಿಮಾನಿಗಳು, ‘ಇವರು ಭಾರತದ ಸೂಪರ್​ ಸ್ಟಾರ್​ ನಟಿ’ ಎಂದು ಕಮೆಂಟ್​ ಮಾಡಿದ್ದಾರೆ.

‘ಇವರ ಹೆಸರು ದೀಪಿಕಾ ಪಡುಕೋಣೆ. ಭಾರತೀಯ ಚಿತ್ರರಂಗದ ಸೂಪರ್​ ಸ್ಟಾರ್​ಗಳಲ್ಲಿ ಇವರೂ ಒಬ್ಬರು. ಹೌದು, ಇವರು ತುಂಬ ಸುಂದರವಾಗಿದ್ದಾರೆ. ಫ್ಯಾಷನ್​ ವಿಚಾರದಲ್ಲಿ ಇವರು ಯಾವಾಗಲೂ ಪರ್ಫೆಕ್ಟ್​ ಆಗಿರುತ್ತಾರೆ’ ಎಂದು ದೀಪಿಕಾ ಅಭಿಮಾನಿಗಳು ಪೋಸ್ಟ್​ ಮಾಡಿದ್ದಾರೆ. ಬಾಫ್ಟ ಸಮಾರಂಭದಲ್ಲಿ ತಾವು ಧರಿಸಿದ ಸೀರೆಯ ಫೋಟೋಗಳನ್ನು ದೀಪಿಕಾ ಪಡುಕೋಣೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೋಗೆ ಕೆಲವೇ ಗಂಟೆಗಳಲ್ಲಿ 12 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಏಳೂವರೆ ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿದೆ.

ಇದನ್ನೂ ಓದಿ: ಹೃತಿಕ್ ರೋಷನ್-ದೀಪಿಕಾ ಚುಂಬನ ದೃಶ್ಯಕ್ಕೆ ಆಕ್ಷೇಪ: ‘ಫೈಟರ್’ ವಿರುದ್ಧ ದೂರು

ಸಿನಿಮಾ ವಿಚಾರಕ್ಕೆ ಬರುವುದಾದರೆ, 2023ರಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಅವರು ನಟಿಸಿದ ‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳು ಸೂಪರ್ ಹಿಟ್​ ಆಗಿದ್ದವು. 2024ರ ಆರಂಭದಲ್ಲೇ ಅವರ ‘ಫೈಟರ್​’ ಸಿನಿಮಾ ತೆರೆಕಂಡಿತು. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 190 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ದೀಪಿಕಾ ಅವರು ಸದ್ಯ ‘ಕಲ್ಕಿ 2989 ಎಡಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಪ್ರಭಾಸ್​ ಹೀರೋ. ಮೇ 9ರಂದು ಈ ಚಿತ್ರ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.