‘ಜವಾನ್’ ರಿಲೀಸ್​ಗೂ ಕೆಲವೇ ಗಂಟೆ ಮೊದಲು ಶುರುವಾಯ್ತು ‘ಬೈಕಾಟ್ ಟ್ರೆಂಡ್’; ಇದಕ್ಕೆ ಕಾರಣ ಉದಯನಿಧಿ ಸ್ಟಾಲಿನ್

| Updated By: ಮದನ್​ ಕುಮಾರ್​

Updated on: Sep 06, 2023 | 3:20 PM

‘ಜವಾನ್’ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಶಾರುಖ್ ಅವರು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಉತ್ತಮವಾಗಿದ್ದರೆ ಜನರು ಖಂಡಿತವಾಗಿಯೂ ನೋಡುತ್ತಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಟ್ರೋಲ್​ಗಳು ಹುಟ್ಟಿಕೊಂಡಿದೆ.

‘ಜವಾನ್’ ರಿಲೀಸ್​ಗೂ ಕೆಲವೇ ಗಂಟೆ ಮೊದಲು ಶುರುವಾಯ್ತು ‘ಬೈಕಾಟ್ ಟ್ರೆಂಡ್’; ಇದಕ್ಕೆ ಕಾರಣ ಉದಯನಿಧಿ ಸ್ಟಾಲಿನ್
ಶಾರುಖ್​ ಖಾನ್
Follow us on

‘ಜವಾನ್’ ಚಿತ್ರ (Jawan Movie) ರಿಲೀಸ್​ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಚಿತ್ರದ ಹೈಪ್ ಹೆಚ್ಚಿದೆ. ಶಾರುಖ್ ಖಾನ್ (Shah Rukh Khan) ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಟ್ಲಿ-ಶಾರುಖ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಎನ್ನುವ ಕಾರಣಕ್ಕೂ ಸಿನಿಮಾ ಬಗ್ಗೆ ಹೈಪ್ ಹೆಚ್ಚಿದೆ. ಈಗ ಸಿನಿಮಾಗೆ ಬೈಕಾಟ್ ಟ್ರೆಂಡ್ ಶುರುವಾಗಿದೆ. ಆದರೆ, ಇದು ಶಾರುಖ್ ಖಾನ್ ಚಿತ್ರದ ಮೇಲೆ ಯಾವುದೇ ಪ್ರಭಾವ ಬೀರದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಈ ಟ್ರೆಂಡ್ ಹುಟ್ಟಿಕೊಳ್ಳಲು ಕಾರಣ ಏನು? ಆ ಬಗ್ಗೆ ಇಲ್ಲಿದೆ ವಿವರ.

ಜವಾನ್ ಚಿತ್ರಕ್ಕೆ ಬೈಕಾಟ್ ಟ್ರೆಂಡ್ ಏಕೆ?

‘ಜವಾನ್’ ಸಿನಿಮಾ ಕೇವಲ ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ತಮಿಳುನಾಡಿನಲ್ಲಿ ಈ ಚಿತ್ರದ ಹಂಚಿಕೆ ಹಕ್ಕನ್ನು ರಾಜಕಾರಣಿ, ನಿರ್ಮಾಪಕ ಉದಯನಿಧಿ ಸ್ಟಾಲಿನ್ ತೆಗೆದುಕೊಂಡಿದ್ದಾರೆ. ಅವರ ಒಡೆತನದ ರೆಡ್ ಜಿಯಂಟ್ ಮೂವೀಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ತಮಿಳುನಾಡಿನಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯನ್ನು ಇಟ್ಟುಕೊಂಡು ‘ಜವಾನ್’ ಚಿತ್ರವನ್ನು ಬೈಕಾಟ್ ಮಾಡುವ ಆಗ್ರಹ ಕೇಳಿ ಬಂದಿದೆ.

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್. ಇವರು ತಮಿಳುನಾಡು ಸರ್ಕಾರದಲ್ಲಿ ಸಚಿವರು ಕೂಡ ಹೌದು. ಇತ್ತೀಚೆಗೆ ಚೆನ್ನೈನಲ್ಲಿ ಮಾತನಾಡಿದ್ದ ಅವರು, ಸನಾತನ ಧರ್ಮವನ್ನು ಕೊರೊನಾ ವೈರಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದರು. ‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಕೂಡ ಅವರು ಕರೆ ನೀಡಿದ್ದರು. ಅವರು ‘ಜವಾನ್’ ಸಿನಿಮಾ ಹಂಚಿಕೆ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಬೈಕಾಟ್ ಟ್ರೆಂಡ್ ಶುರುವಾಗಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರವನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟ ಶಾರುಖ್​ ಖಾನ್​ ಅಭಿಮಾನಿಗಳು; ಇಲ್ಲಿದೆ ದೊಡ್ಡ ಪ್ಲ್ಯಾನ್​

‘ಪಠಾಣ್’ ಚಿತ್ರಕ್ಕೆ ತಟ್ಟಿಲ್ಲ ಬೈಕಾಟ್ ಬಿಸಿ

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದಲ್ಲಿ ಬರುವ ಸಾಂಗ್ ಒಂದರಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರು. ಇದೇ ವಿಚಾರ ಇಟ್ಟುಕೊಂಡು ಅನೇಕರು ಟೀಕೆ ಮಾಡಿದ್ದರು. ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೇಳಿಬಂತು. ಈ ಸಂಬಂಧ ಕೇಸ್​ಗಳು ಕೂಡ ದಾಖಲಾದವು. ಸೋಶಿಯಲ್ ಮೀಡಿಯಾದಲ್ಲಿ ಬೈಕಾಟ್ ಟ್ರೆಂಡ್ ಶುರುವಾಯಿತು. ಆದರೆ, ಸಿನಿಮಾ ಚೆನ್ನಾಗಿತ್ತು. ಹೀಗಾಗಿ, ಎಲ್ಲರೂ ಮುಗಿಬಿದ್ದು ‘ಪಠಾಣ್’ ಸಿನಿಮಾ ವೀಕ್ಷಿಸಿದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿತು.

ಜನರ ಅಭಿಪ್ರಾಯ ಏನು?

‘ಜವಾನ್’ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಶಾರುಖ್ ಅವರು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಉತ್ತಮವಾಗಿದ್ದರೆ ಜನರು ಖಂಡಿತವಾಗಿಯೂ ನೋಡುತ್ತಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಟ್ರೋಲ್​ಗಳು ಹುಟ್ಟಿಕೊಂಡಿದೆ.

ಇದನ್ನೂ ಓದಿ: ‘ಶಾರುಖ್​ ಖಾನ್​ಗೆ ಹೇಳಿ ಜವಾನ್​ ಚಿತ್ರದ ಟಿಕೆಟ್​ ಕೊಡಿಸಿ ಪ್ಲೀಸ್​’: ವಿವೇಕ್​ ಅಗ್ನಿಹೋತ್ರಿ ಬಹಿರಂಗ ಮನವಿ

ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಲು ಕಾರಣ ಏನು?

‘ಜವಾನ್’ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಲು ಹಲವು ಕಾರಣ ಇದೆ. ‘ಪಠಾಣ್’ ಹಿಟ್ ಆದ ಬಳಿಕ ಶಾರುಖ್ ಖಾನ್​ಗೆ ಹೊಸ ಚೈತನ್ಯ ಬಂದಿದೆ. ಈ ವರ್ಷ ರಿಲೀಸ್ ಆಗುತ್ತಿರುವ ಅವರ ಎರಡನೇ ಸಿನಿಮಾ. ಈ ಚಿತ್ರದಲ್ಲಿ ಅವರು ಸಖತ್ ಆ್ಯಕ್ಷನ್ ಮೆರೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು, ದಕ್ಷಿಣದ ಸ್ಟಾರ್​ಗಳಾದ ನಯನತಾರಾ, ವಿಜಯ್ ಸೇತುಪತಿ ಮೊದಲಾದವರು ನಟಿಸಿದ್ದಾರೆ. ‘ಜೈಲರ್’ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ರವಿಚಂದರ್ ಅನಿರುದ್ಧ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ದಕ್ಷಿಣದಲ್ಲಿ ಸಾಲು ಸಾಲು ಹಿಟ್ ಚಿತ್ರಕೊಟ್ಟ ಅಟ್ಲಿ ಮೊದಲ ಬಾರಿಗೆ ಬಾಲಿವುಡ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.