
ನಟ ಯಶ್ (Yash) ಅವರು ನಟನೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಸಿನಿಮಾ ನಿರ್ಮಾಣ ಮಾಡಿದ್ದು ಕಡಿಮೆ. ‘ಟಾಕ್ಸಿಕ್’ ಸಿನಿಮಾಗೆ ಅವರು ಕೂಡ ನಿರ್ಮಾಪಕರು. ಈಗ ‘ರಾಮಾಯಣ’ ಸಿನಿಮಾಗೂ ಅವರು ನಿರ್ಮಾಪಕರಾಗುತ್ತಿದ್ದಾರೆ. ಈ ಬಗ್ಗೆ ವರದಿ ಆಗಿತ್ತು. ಈಗ ಈ ವಿಚಾರ ಬಹುತೇ ಖಚಿತ ಆಗಿದೆ. ಅಷ್ಟಕ್ಕೂ ಏನಿದು ವಿಚಾರ? ಯಶ್ ನಿರ್ಮಾಪಕರಾಗಿದ್ದು ಹೇಗೆ ಎನ್ನುವುದಕ್ಕೆ ಇಲ್ಲಿದೆ ವಿವರ.
‘ರಾಮಾಯಣ’ ಸಿನಿಮಾ ಬಾಲಿವುಡ್ನಲ್ಲಿ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಉಳಿದ ಪಾತ್ರವರ್ಗದ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ಯಶ್ ಕೂಡ ನಿರ್ಮಾಪಕರಾಗುತ್ತಿದ್ದಾರೆ ಅನ್ನೋದು ವಿಶೇಷ.
ನಮಿತ್ ಮಲ್ಹೋತ್ರಾ ಅವರು ‘ಪ್ರೈಮ್ ಫೋಕಸ್’ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಇದರ ಜೊತೆಗೆ ಯಶ್ ಅವರು ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್’ ಮೂಲಕ ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ಯಶ್ ಅವರು ಈ ಚಿತ್ರಕ್ಕಾಗಿ 80 ಕೋಟಿ ರೂಪಾಯಿ ಸಂಭಾವನೆ ಪಡೆಯಬೇಕಿತ್ತು. ಆದರೆ ಈ ಹಣವನ್ನು ಅವರು ಈಗಲೇ ಪಡೆಯುತ್ತಿಲ್ಲ. ಬದಲಿಗೆ ಇದನ್ನು ಸಿನಿಮಾ ನಿರ್ಮಾಣದಲ್ಲಿ ಬಳಕೆ ಮಾಡುವಂತೆ ಕೋರಿದ್ದಾರೆ. ಈ ಮೂಲಕ ಅವರು ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ ಎಂದು ವರದಿ ಆಗಿದೆ.
ಬಾಲಿವುಡ್ನಲ್ಲಿ ಈ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಮೊದಲು ರಣಬೀರ್ ಕಪೂರ್ ಅವರು ‘ಬ್ರಹ್ಮಾಸ್ತ್ರ’ ಸಿನಿಮಾಗಾಗಿ ಸಂಭಾವನೆ ಪಡೆದಿರಲಿಲ್ಲ. ಬದಲಿಗೆ ಅದನ್ನು ಸಿನಿಮಾ ಮೇಲೆ ಹೂಡಿಕೆ ಮಾಡಿದ್ದರು. ನಂತರ ಬಂದ ಲಾಭದಲ್ಲಿ ಪಾಲು ಪಡೆದುಕೊಂಡಿದ್ದರು. ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿ ಅನೇಕರು ಇದೇ ತಂತ್ರ ಉಪಯೋಗಿಸುತ್ತಾರೆ. ಯಶ್ ಕೂಡ ಈಗ ಇದೇ ಮಾರ್ಗದಲ್ಲಿ ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಶ್ ಕಡೆಯಿಂದಲೇ ಅಪ್ಡೇಟ್ ಸಿಗಬೇಕಿದೆ.
‘ರಾಮಾಯಣ’ ಚಿತ್ರಕ್ಕೆ ಸದ್ಯ ಮುಂಬೈನಲ್ಲಿ ದೊಡ್ಡ ದೊಡ್ಡ ಸೆಟ್ಗಳನ್ನು ಹಾಕಲಾಗಿದೆ. ಇದರ ಶೂಟಿಂಗ್ ಕೂಡ ನಡೆಯುತ್ತಿದೆ. ಸೆಟ್ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗುತ್ತಿವೆ. ಇದನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಆದರೆ, ಸಿನಿಮಾ ತಂಡಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕೆ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ ಯಶ್?
ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ವಿಶೇಷ ಎಂದರೆ ಯಶ್ ಕೂಡ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಮಲಯಾಳಂನ ಗೀತು ಮೋಹನ್ದಾಸ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ. 2025ರ ಏಪ್ರಿಲ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದ ಪೋಸ್ಟರ್ ಹಾಗೂ ಮೊದಲ ಗ್ಲಿಂಪ್ಸ್ ಗಮನ ಸೆಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ