Pamela Chopra Passes Away: ಯಶ್ ಚೋಪ್ರಾ ಪತ್ನಿ, ಗಾಯಕಿ, ನಿರ್ಮಾಪಕಿ ಪಮೇಲಾ ಚೋಪ್ರಾ ನಿಧನ
ಪಮೇಲಾ ಚೋಪ್ರಾ ಅವರಿಗೆ ವಯೋಸಹಜ ಕಾಯಿಲೆ ಕಾಡುತ್ತಿತ್ತು. ಕಳೆದ 15 ದಿನಗಳಿಂದ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು.
ನಿರ್ಮಾಪಕ ಯಶ್ ಚೋಪ್ರಾ (Yash Chopra) ಅವರ ಪತ್ನಿ ಪಮೇಲಾ ಚೋಪ್ರಾ ಅವರು ಇಂದು (ಏಪ್ರಿಲ್ 20) ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಪಮೇಲಾ ಅವರು ಗಾಯಕಿ ಆಗಿ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ಅವರು ಬರಹಗಾರ್ತಿ ಹಾಗೂ ನಿರ್ಮಾಪಕಿ ಕೂಡ ಹೌದು. ಅವರನ್ನು ಕಳೆದುಕೊಂಡಿದ್ದರ ಬಗ್ಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಪಮೇಲಾ (Pamela Chopra) ಪತಿ ಯಶ್ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು. 2012ರಲ್ಲಿ ಅವರು ಮೃತಪಟ್ಟರು.
ಪಮೇಲಾ ಚೋಪ್ರಾ ಅವರಿಗೆ ವಯೋಸಹಜ ಕಾಯಿಲೆ ಕಾಡುತ್ತಿತ್ತು. ಕಳೆದ 15 ದಿನಗಳಿಂದ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಇಂದು ಅವರು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.
ಯಶ್ ರಾಜ್ ಫಿಲ್ಮ್ಸ್ ಇತ್ತೀಚೆಗೆ ‘ದಿ ರೊಮ್ಯಾಂಟಿಕ್ಸ್’ ಹೆಸರಿನ ಡಾಕ್ಯುಮೆಂಟರಿ ನಿರ್ಮಾಣ ಮಾಡಿತ್ತು. ಇದರಲ್ಲಿ ಪಮೇಲಾ ಅವರು ಕಾಣಿಸಿಕೊಂಡಿದ್ದರು. ಯಶ್ ರಾಜ್ ಬಗ್ಗೆ ಹಾಗೂ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದರು. ಈ ಡಾಕ್ಯುಮೆಂಟರಿಯಲ್ಲಿ ಕೇವಲ ಯಶ್ ರಾಜ್ ಬಗ್ಗೆ ಮಾತ್ರವಲ್ಲದೆ ಪಮೇಲಾ ಅವರ ಬಗ್ಗೆಯೂ ಮಾಹಿತಿ ಇತ್ತು.
ಪಮೇಲಾ ಹಾಗೂ ಯಶ್ ಚೋಪ್ರಾ ಮದುವೆ 1970ರಲ್ಲಿ ನಡೆಯಿತು. ಇದು ಅರೇಂಜ್ ಮ್ಯಾರೇಜ್ ಆಗಿತ್ತು. ಈ ದಂಪತಿಗೆ ಆದಿತ್ಯ ಚೋಪ್ರಾ ಹಾಗೂ ಉದಯ್ ಚೋಪ್ರಾ ಹೆಸರಿನ ಮಕ್ಕಳಿದ್ದಾರೆ. ಆದಿತ್ಯ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ನ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ನಿರ್ದೇಶಕರೂ ಹೌದು. ರಾಣಿ ಮುಖರ್ಜಿಯನ್ನು ಅವರು ಮದುವೆ ಆಗಿದ್ದಾರೆ. ಉದಯ್ ಅವರು ಹೀರೋ ಆಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ವಾರ್ 2’ ಚಿತ್ರಕ್ಕೆ ಅಯಾನ್ ಮುಖರ್ಜಿ ಪಡೆಯುತ್ತಿರೋ ಸಂಭಾವನೆ ಇಷ್ಟೊಂದಾ? ಯಾವ ಹೀರೋಗೂ ಕಡಿಮೆ ಇಲ್ಲ
ಪಮೇಲಾ ಅವರು ಅನೇಕ ಹಾಡುಗಳನ್ನು ಹಾಡಿದ್ದರು. ವಿಶೇಷ ಎಂದರೆ ಪತಿ ಯಶ್ ಚೋಪ್ರಾ ನಿರ್ಮಾಣದ ಸಿನಿಮಾಗಳಲ್ಲಿನ ಹಾಡಿಗೆ ಮಾತ್ರ ಅವರು ಧ್ವನಿ ಆಗಿದ್ದರು. ‘ಕಭಿ ಕಭಿ’ (1976) ಚಿತ್ರದಿಂದ ಹಿಡಿದು ‘ಮುಜ್ಸೆ ದೋಸ್ತಿ ಕರೋಗಿ’ ವರೆಗೆ (2002) ಹಲವು ಸಿನಿಮಾಗಳಲ್ಲಿ ಹಾಡಿದ್ದರು. 1993ರಲ್ಲಿ ರಿಲೀಸ್ ಆದ ‘ಆಯ್ನಾ’ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದರು. ಪಮೇಲಾ ಅವರು ಒಮ್ಮೆ ಮಾತ್ರ ತೆರೆಮೇಲೆ ಬಂದಿದ್ದರು. ‘ದಿಲ್ ತೊ ಪಾಗಲ್ ಹೈ’ ಚಿತ್ರದ ಒಂದು ಹಾಡಿನಲ್ಲಿ ಪತಿ ಜೊತೆ ಅವರು ಕಾಣಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ