ಯಶ್, ರಣ್​ಬೀರ್ ಕಪೂರ್ ನಟಿಸಲಿರುವ ‘ರಾಮಾಯಣ’ ಮುಹೂರ್ತಕ್ಕೆ ದಿನಾಂಕ ನಿಗದಿ

|

Updated on: Mar 02, 2024 | 7:49 PM

Ramayana: ‘ಆದಿಪುರುಷ್’ ಸಿನಿಮಾ ಸೋತ ಬಳಿಕ, ಇದೀಗ ಮತ್ತೊಮ್ಮೆ ರಾಮಾಯಣ ಆಧರಿಸಿದ ಸಿನಿಮಾ ಮಾಡಲು ಬಾಲಿವುಡ್ ಮುಂದಾಗಿದ್ದು, ಯಶ್ ಸಹ ನಟಿಸಲಿರುವ ಈ ಸಿನಿಮಾದ ಘೋಷಣೆಗೆ ದಿನಾಂಕ ನಿಗದಿಯಾಗಿದೆ.

ಯಶ್, ರಣ್​ಬೀರ್ ಕಪೂರ್ ನಟಿಸಲಿರುವ ‘ರಾಮಾಯಣ’ ಮುಹೂರ್ತಕ್ಕೆ ದಿನಾಂಕ ನಿಗದಿ
ಯಶ್-ರಣ್​ಬೀರ್ ಕಪೂರ್
Follow us on

ರಾಮಾಯಣ (Ramayana) ಕತೆ ಆಧರಿಸಿ ನಿರ್ಮಾಣಗೊಂಡಿದ್ದ ‘ಆದಿಪುರುಷ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ವಿಫಲವಾಗಿದೆ. ಸ್ಟಾರ್ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದರೂ ಸಹ ‘ಆದಿಪುರುಷ್’ ಸಿನಿಮಾ ಗೆಲ್ಲಲಿಲ್ಲ. ಪೌರಾಣಿಕ ಕತೆಗಳನ್ನು ವಿಶೇಷವಾಗಿ ರಾಮಾಯಣ ಕತೆಯನ್ನು ಸಿನಿಮಾ ಮಾಡುವುದು ಅಪಾಯಕ್ಕೆ ಆಹ್ವಾನ ಎಂದು ಹಲವು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ ಬಾಲಿವುಡ್​ನಲ್ಲಿ ಇದೀಗ ಮತ್ತೊಂದು ರಾಮಾಯಣ ಆಧರಿಸಿದ ಸಿನಿಮಾ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. ಸಿನಿಮಾದಲ್ಲಿ ಕನ್ನಡದ ನಟ ಯಶ್ ಸಹ ನಟಿಸಲಿದ್ದಾರೆ.

ರಣ್​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ತಾರೆಯರು ನಟಿಸಲಿರುವ ರಾಮಾಯಣ ಸಿನಿಮಾ ನಿರ್ಮಾಣಗೊಳ್ಳುವ ಸುದ್ದಿ ಕಳೆದ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇದೆ. ಜನಪ್ರಿಯ ನಿರ್ದೇಶಕ ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಎಲ್ಲ ನಟ-ನಟಿಯರ ಲುಕ್ ಟೆಸ್ಟ್, ಧ್ವನಿ ಪರೀಕ್ಷೆ ಇನ್ನಿತರೆಗಳು ಮುಗಿದಿದೆ ಎನ್ನಲಾಗಿದೆ. ಇದೀಗ ಸಿನಿಮಾದ ಮುಹೂರ್ತಕ್ಕೆ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿದೆ.

ಏಪ್ರಿಲ್ 17ರಂದು ಸಿನಿಮಾದ ಮುಹೂರ್ತವನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡಲಿದೆ. ಸಿನಿಮಾದ ಬಗ್ಗೆ ಹಲವು ಮಾಹಿತಿಗಳನ್ನು ನಿರ್ದೇಶಕ ನಿತೀಶ್ ತಿವಾರಿ ಅದೇ ದಿನ ಹಂಚಿಕೊಳ್ಳಲಿದ್ದಾರೆ. ಸಿನಿಮಾ ಘೋಷಣೆಗೆ ಏಪ್ರಿಲ್ 17ನ್ನೇ ಆಯ್ದುಕೊಳ್ಳಲು ಕಾರಣವೂ ಇದೆ. ಅಂದು ರಾಮನವಮಿ. ಹಾಗಾಗಿ ಅದೇ ದಿನದಂದು ಚಿತ್ರತಂಡ ಸಿನಿಮಾದ ಮುಹೂರ್ತ ಮಾಡಲಿದೆ. ಸಿನಿಮಾದ ಹೆಸರು ಸಹ ಅದೇ ದಿನ ಘೋಷಣೆ ಆಗಲಿದೆ.

ಇದನ್ನೂ ಓದಿ:ಹಿರಿದಾಗುತ್ತಲೇ ಇದೆ ‘ರಾಮಾಯಣ’ ತಂಡ; ಈ ಪ್ರಮುಖ ಪಾತ್ರಗಳಲ್ಲಿ ನಟಿಸೋ ಕಲಾವಿದರಿವರು..

ಸಿನಿಮಾದಲ್ಲಿ ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ. ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಅವರುಗಳು ಕೈಕೆ, ಊರ್ಮಿಳೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಿನಿಮಾದ ಚಿತ್ರೀಕರಣವನ್ನು ನಿತೀಶ್ ತಿವಾರಿ ಮಾಡಲಿದ್ದಾರೆ.

ಪ್ರಭಾಸ್ ನಟಿಸಿದ್ದ ‘ಆದಿಪುರುಷ್’ ಸಿನಿಮಾ ರಾಮಾಯಣದ ಕತೆಯನ್ನು ಆಧರಿಸಿತ್ತು. ಆದರೆ ಆ ಸಿನಿಮಾವನ್ನು ಜನ ತಿರಸ್ಕರಿಸಿದರು. ‘ಆದಿಪುರುಷ್’ ಸಿನಿಮಾ ರಾಮಾಯಣಕ್ಕೆ ಮಾಡಿದ ಅಪಮಾನವೆಂದು ದೇಶದ ಹಲವೆಡೆ ಸಿನಿಮಾದ ನಿರ್ದೇಶಕರ ಮೇಲೆ, ಸಂಭಾಷಣೆಕಾರರ ಮೇಲೆ ದೂರುಗಳು ದಾಖಲಾಗಿದ್ದವು. ಕೊನೆಗೆ ಚಿತ್ರತಂಡ ಕ್ಷಮೆ ಕೋರಿತು, ಕೆಲವು ಸಂಭಾಷಣೆಗಳನ್ನು ಕತ್ತರಿಸಿತು, ಏನೇ ಮಾಡಿದರು ಸಿನಿಮಾ ವಿಫಲವಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ