
ಖ್ಯಾತ ರ‍್ಯಾಪರ್ ಹಾಗೂ ಗಾಯಕ ಯೋ ಯೋ ಹನಿ ಸಿಂಗ್ (Yo Yo Honey Singh) ತಮ್ಮ ವೈಯಕ್ತಿಕ ಜೀವನದ ಕುರಿತು ಅತ್ಯಂತ ಆಘಾತಕಾರಿ ಮತ್ತು ಭಾವುಕ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ತಮಗೆ ಸಂಪೂರ್ಣವಾಗಿ ಬೋಳು ತಲೆಯಾಗಿದ್ದು, ಸದ್ಯ ತಾವು ವಿಗ್ (Wig) ಧರಿಸುತ್ತಿರುವುದಾಗಿ ಅವರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಡ್ರಗ್ಸ್ (Drugs) ಸೇವನೆ ಬಳಿಕ ಉಂಟಾದ ಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ತೆಗೆದುಕೊಂಡ ಭಾರಿ ಪ್ರಮಾಣದ ಔಷಧಿಗಳೇ ತಮ್ಮ ಈ ಸ್ಥಿತಿಗೆ ಕಾರಣ ಎಂದು ಅವರು ಹೇಳಿದ್ದಾರೆ.
ದೇಶದ ಅತ್ಯಂತ ಯಶಸ್ವಿ ಮ್ಯೂಸಿಕ್ ಐಕಾನ್‌ಗಳಲ್ಲಿ ಒಬ್ಬರಾಗಿದ್ದರೂ, ತಮ್ಮ ಜೀವನದ ಅತ್ಯಂತ ಕರಾಳ ದಿನಗಳಲ್ಲಿ ತೀವ್ರವಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ಹನಿ ಸಿಂಗ್ ತಿಳಿಸಿದ್ದಾರೆ. ಇತ್ತೀಚೆಗೆ ‘ABtalks’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಅವರು, ವರ್ಷಗಟ್ಟಲೆ ತೆಗೆದುಕೊಂಡ ಮೆಡಿಕೇಶನ್ ತಮ್ಮ ದೇಹದ ಮೇಲೆ ಬೀರಿದ ಭೀಕರ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.
‘ನಾನು ಸತತ ಏಳು ವರ್ಷಗಳ ಕಾಲ ಭಾರಿ ಪ್ರಮಾಣದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಅದರ ಪರಿಣಾಮವಾಗಿ ನನ್ನ ತೂಕ 105 ಕೆಜಿಗೆ ಏರಿತು ಮತ್ತು ನಾನು ನನ್ನ ತಲೆ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡೆ. ಈಗ ನನ್ನ ತಲೆಯ ಮೇಲಿರುವುದು ನಕಲಿ ಕೂದಲು. ನನಗೆ ಸಂಪೂರ್ಣವಾಗಿ ಬೋಳು ತಲೆಯಾಗಿದೆ. ನಾನು ವಿಗ್ ಧರಿಸುತ್ತಿದ್ದೇನೆ’ ಎಂದು ಹನಿ ಸಿಂಗ್ ಹೇಳಿದ್ದಾರೆ.
ತಮ್ಮ ಅನಾರೋಗ್ಯದ ದಿನಗಳಲ್ಲಿ ಅನುಭವಿಸಿದ ನರಕಯಾತನೆ ಮತ್ತು ಹೊರಜಗತ್ತಿನಿಂದ ಸಂಪೂರ್ಣವಾಗಿ ದೂರ ಸರಿದಿದ್ದ ದಿನಗಳನ್ನು ನೆನಸಿಕೊಂಡ ಹನಿ ಸಿಂಗ್, ‘ಒಮ್ಮೆ ಲೈವ್ ಶೋ ನಡೆಸಿಕೊಡುತ್ತಿದ್ದಾಗ ಸ್ಟೇಜ್ ಮೇಲೆಯೇ ನನಗೆ ಏನೋ ತೊಂದರೆ ಆಗುತ್ತಿರುವುದು ತಿಳಿಯಿತು. ನನ್ನ ತಂಗಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಶೋ ಮುಗಿಸುವಂತೆ ಆಕೆ ಹೇಳಿದಳು. ಆದರೆ ನನಗೆ ಸಾಧ್ಯವಾಗದೆ ಕೇವಲ ಎರಡು ಹಾಡುಗಳನ್ನು ಹಾಡಿ ಅರ್ಧದಲ್ಲೇ ವೇದಿಕೆ ಬಿಟ್ಟು ಬಂದೆ’ ಎಂದಿದ್ದಾರೆ.
ಇದನ್ನೂ ಓದಿ: ‘ನನಗೆ ಡ್ರಗ್ಸ್ ಚಟ ಹಿಡಿಸಿದ್ದು ಬಾಲಿವುಡ್ನ ದೊಡ್ಡ ಸೆಲೆಬ್ರಿಟಿಗಳು’; ಹನಿ ಸಿಂಗ್ ಶಾಕಿಂಗ್ ವಿಚಾರ ರಿವೀಲ್
‘ಆ ಘಟನೆಯ ನಂತರ, ನಾನು ಸತತ ಏಳು ವರ್ಷಗಳ ಕಾಲ ನನ್ನ ಮನೆಯೊಳಗೇ ಉಳಿದುಕೊಂಡೆ. ನನ್ನ ಅಭಿಮಾನಿಗಳು ನನ್ನನ್ನು ಆ ಸ್ಥಿತಿಯಲ್ಲಿ ನೋಡುವುದು ನನಗೆ ಇಷ್ಟವಿರಲಿಲ್ಲ. ನನ್ನನ್ನು ನಾನೇ ಕೋಣೆಯೊಳಗೆ ಲಾಕ್ ಮಾಡಿಕೊಂಡಿದ್ದೆ. ನನ್ನ ಬಾಲ್ಯದ ಸ್ನೇಹಿತರನ್ನೂ ಭೇಟಿಯಾಗಲಿಲ್ಲ. ಯಾವುದೇ ಸಂವಹನ, ಫೋನ್ ಕರೆಗಳು, ಟಿವಿ ಅಥವಾ ಇಂಟರ್ನೆಟ್ ಸಂಪರ್ಕ ನನಗಿರಲಿಲ್ಲ. ಜನರು ನನ್ನೊಂದಿಗೆ ದೆವ್ವ ಮಾತನಾಡುತ್ತಿದೆ ಎಂದೆಲ್ಲ ಅಂದುಕೊಳ್ಳುತ್ತಿದ್ದರು’ ಎಂದು ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.