‘ಅಕ್ಷಯ್​ ಕುಮಾರ್ ಎಂಬ ವ್ಯಕ್ತಿ ಜೊತೆ ನಿನ್ನ ಮದುವೆ’; ಟ್ವಿಂಕಲ್ ಖನ್ನಾಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ

| Updated By: ರಾಜೇಶ್ ದುಗ್ಗುಮನೆ

Updated on: Jan 19, 2024 | 10:20 AM

ಟ್ವಿಂಕಲ್​ ಯಾರನ್ನು ಮದುವೆ ಆಗುತ್ತಾರೆ ಎಂಬುದನ್ನು ಆ ಜ್ಯೋತಿಷಿ ಹೇಳಿದ್ದರಂತೆ. ಆಗ ಜ್ಯೋತಿಷಿ ಹೇಳಿದ್ದು ಅಕ್ಷಯ್ ಕುಮಾರ್ ಹೆಸರನ್ನು. ಅಚ್ಚರಿಯ ಸಂಗತಿ​ ಅಕ್ಷಯ್ ಎಂದರೆ ಯಾರು ಎಂಬುದೇ ಟ್ವಿಂಕಲ್​ಗೆ ಗೊತ್ತಿರಲಿಲ್ಲ.

‘ಅಕ್ಷಯ್​ ಕುಮಾರ್ ಎಂಬ ವ್ಯಕ್ತಿ ಜೊತೆ ನಿನ್ನ ಮದುವೆ’; ಟ್ವಿಂಕಲ್ ಖನ್ನಾಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಅಕ್ಷಯ್-ಟ್ವಿಂಕಲ್
Follow us on

ಅಕ್ಷಯ್​ ಕುಮಾರ್ (Akshay Kumar)​ ಹಾಗೂ ಟ್ವಿಂಕಲ್​ ಖನ್ನಾ ಇತ್ತೀಚೆಗೆ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ದಂಪತಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇವರ ಮಧ್ಯೆ ಸಣ್ಣಪುಟ್ಟ ಮನಸ್ತಾಪಗಳು ಬಂದಿದ್ದಿದೆ. ಅದನ್ನು ಪರಿಹರಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಅಕ್ಷಯ್ ಕುಮಾರ್ ಹೀರೋ. ಟ್ವಿಂಕಲ್ ನಿರ್ಮಾಪಕಿ ಆಗಿ, ಇಂಟೀರಿಯರ್ ಡಿಸೈನರ್ ಆಗಿ ಹೆಸರು ಮಾಡಿದ್ದಾರೆ. ಒಬ್ಬರ ವೃತ್ತಿ ಜೀವನಕ್ಕೆ ಮತ್ತೊಬ್ಬರು ಬೆಂಬಲ ನೀಡುತ್ತಾ ಇವರು ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಅಕ್ಷಯ್ ಹಾಗೂ ಟ್ವಿಂಕಲ್ ಅವರದ್ದು ಪ್ರೇಮ ವಿವಾಹ. ಇವರಿಬ್ಬರ ಮಧ್ಯೆ ಪರಿಚಯ ಬೆಳೆಯುವ ಮೊದಲೇ ಟ್ವಿಂಕಲ್​ ಖನ್ನಾಗೆ ಜ್ಯೋತಿಷಿ ಒಬ್ಬರು ಮದುವೆ ವಿಚಾರದಲ್ಲಿ ಭವಿಷ್ಯ ನುಡಿದಿದ್ದರು.

ಟ್ವಿಂಕಲ್​ ಖನ್ನಾ ಕೆಲ ವರ್ಷಗಳ ಹಿಂದೆ ಚಾಟ್​ ಶೋ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಟ್ವಿಂಕಲ್​ ಖನ್ನಾ ಈ ವಿಚಾರ ರಿವೀಲ್ ಆಡಿದ್ದರು. ಟ್ವಿಂಕಲ್​ ತಂದೆ ರಾಜೇಶ್​ ಖನ್ನಾ ಜ್ಯೋತಿಷ್ಯವನ್ನು ನಂಬುತ್ತಿದ್ದರು. ಅವರು ಭವಿಷ್ಯವನ್ನು ಕೇಳಲು ಜ್ಯೋತಿಷಿ ಬಳಿ ಹೋಗುತ್ತಿದ್ದರು. ಟ್ವಿಂಕಲ್​ ಯಾರನ್ನು ಮದುವೆ ಆಗುತ್ತಾರೆ ಎಂಬುದನ್ನು ಆ ಜ್ಯೋತಿಷಿ ಹೇಳಿದ್ದರಂತೆ. ಆಗ ಜ್ಯೋತಿಷಿ ಹೇಳಿದ್ದು ಅಕ್ಷಯ್ ಕುಮಾರ್ ಹೆಸರನ್ನು. ಅಚ್ಚರಿಯ ಸಂಗತಿ​ ಅಕ್ಷಯ್ ಎಂದರೆ ಯಾರು ಎಂಬುದೇ ಟ್ವಿಂಕಲ್​ಗೆ ಗೊತ್ತಿರಲಿಲ್ಲ.

‘ನನಗೆ ಜ್ಯೋತಿಷ್ಯದ ಬಗ್ಗೆ ನಂಬಿಕೆ ಇರಲೇ ಇಲ್ಲ. ಆದರೆ ನನ್ನ ತಂದೆಗೆ ನಂಬಿಕೆ ಇತ್ತು. ಅದರ ಬಗ್ಗೆ ಅವರು ಆಗಾಗ ಹೇಳುತ್ತಾ ಇರುತ್ತಿದ್ದರು. ನಮ್ಮ ತಂದೆ ಓರ್ವ ಜ್ಯೋತಿಷಿ ಬಳಿ ಹೋಗುತ್ತಿದ್ದರು. ಆ ಜ್ಯೋತಿಷಿ ನನ್ನ ಭವಿಷ್ಯ ಹೇಳಿದ್ದರು. ನೀವು ಅಕ್ಷಯ್ ಕುಮಾರ್ ಎಂಬುವವರನ್ನು ಮದುವೆಯಾಗುತ್ತೀಯ ಎಂದು ಹೇಳಿದ್ದರು. ಯಾವ ಅಕ್ಷಯ್​ ಕುಮಾರ್ ಎಂದು ಕೇಳಿದ್ದೆ. ಆಗ ನನಗೆ ಅಕ್ಷಯ್​ ಪರಿಚಯವೇ ಇರಲಿಲ್ಲ’ ಎಂದಿದ್ದಾರೆ ಟ್ವಿಂಕಲ್​.

ಟ್ವಿಂಕಲ್ ಆರಂಭದಲ್ಲಿ ನಟಿ ಆಗಿ ಮಿಂಚಿದವರು. ನಂತರ ಸಿನಿಮಾ ನಿರ್ಮಾಣ ಮಾಡಿದರು. ಬರಹಗಾರ್ತಿ ಆಗಿಯೂ ಹೆಸರು ಮಾಡಿದ್ದಾರೆ. ಈ ಬಗ್ಗೆಯೂ ಜ್ಯೋತಿಷಿ ಭವಿಷ್ಯ ನುಡಿದಿದ್ದರಂತೆ. ‘ಮದುವೆ ಭವಿಷ್ಯ ಹೇಳಿದ ಕೆಲವು ವರ್ಷಗಳ ನಂತರ ಅವರು ಮತ್ತೆ ಬಂದಿದ್ದರು. ನಾನು ಬರಹಗಾರ್ತಿ ಆಗುತ್ತೇನೆ ಎಂದು ಹೇಳಿದ್ದರು. ಇಡೀ ಜೀವಮಾನದಲ್ಲಿ ನಾನು ಒಂದೇ ಒಂದು ಕಥೆ ಬರೆದವಳಲ್ಲ. ಹಾಗಿರುವಾಗ ನಾನು ಬರಹಗಾರ್ತಿ ಆಗುವುದೇ ಎಂದು ಹೇಳಿ ನಕ್ಕಿದ್ದೆ. ಈಗ ಏನಾಗಿದೆ ಎಂಬುದನ್ನು ನೀವೇ ನೋಡಿದ್ದೀರಿ’ ಎಂದು ಟ್ವಿಂಕಲ್ ಹೇಳಿದ್ದರು. ಟ್ವಿಂಕಲ್​ ಕೆಲ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಅಂಕಣಕಾರ್ತಿಯೂ ಹೌದು. ಜ್ಯೋತಿಷಿ ಹೇಳಿದ ಎರಡೂ ವಿಚಾರಗಳು ಅವರ ಜೀವನದಲ್ಲಿ ನಡೆದಿವೆ.

ಇದನ್ನೂ ಓದಿ: ಒಂದೇ ಫ್ರೇಮ್​ನಲ್ಲಿ ಸೂರ್ಯ, ಅಮಿತಾಭ್​, ಅಕ್ಷಯ್​ ಕುಮಾರ್​; ಏನ್​ ಸಮಾಚಾರ?

ಅಕ್ಷಯ್​ ಕುಮಾರ್​ ಹಾಗೂ ಟ್ವಿಂಕಲ್​ 2001ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿಯ ಮಗ ಆರವ್​ ಇಂಗ್ಲೆಂಡ್​ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾನೆ. ಮಗಳಿಗೆ ನಿತಾರಾ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಟ್ವಿಂಕಲ್ ಪದವಿ ಪಡೆದಿದ್ದಾರೆ. 50ನೇ ವಯಸ್ಸಿಗೆ ಅವರು ಪದವಿ ಪಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ