ನಟಿ ಸಮಂತಾ (Samantha) ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ನಾಗ ಚೈತನ್ಯ ಜತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದ ಬಳಿಕ ಅವರ ಚಾರ್ಮ್ ಹೆಚ್ಚಿದೆ. ಅವರು ಇತ್ತೀಚೆಗೆ ಹೆಜ್ಜೆ ಹಾಕಿರುವ ‘ಪುಷ್ಪ’ (Pushpa Movie) ಸಿನಿಮಾದ ಐಟಂ ಸಾಂಗ್ ಸೂಪರ್ ಹಿಟ್ ಆಗಿದೆ. ‘ಹು ಅಂತೀಯಾ ಮಾವ.. ಊಹೂ ಅಂತಿಯಾ ಮಾವ..’ (Oo Antava Oo Oo Antava) ಹಾಡು ಎಲ್ಲೆಲ್ಲೂ ಧೂಳೆಬ್ಬಿಸುತ್ತಿದೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳು ಅವತರಣಿಕೆಗಳಲ್ಲಿ ಈ ಸಾಂಗ್ ಬಿಡುಗಡೆ ಆಗಿ ಜನ ಮೆಚ್ಚುಗೆ ಗಳಿಸಿದೆ. ಆದರೆ ಒಂದಷ್ಟು ವಿವಾದವನ್ನೂ ಈ ಗೀತೆ ಹುಟ್ಟುಹಾಕಿದೆ. ಈ ಹಾಡಿನ ವಿರುದ್ಧ ಗಂಡಸರು ಗರಂ ಆಗಿದ್ದಾರೆ. ಅಲ್ಲದೇ ಕೇಸ್ ಕೂಡ ದಾಖಲಿಸಿದ್ದಾರೆ. ಹಾಗಾದರೆ ಈ ಹಾಡಿನಲ್ಲಿ ಅಂಥದ್ದೇನಿದೆ? ಅವಹೇಳನಕಾರಿ ಸಾಹಿತ್ಯ!
‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ’ ಹಾಡಿನಲ್ಲಿ ಗಂಡಸರ ಕುರಿತು ಸಾಹಿತ್ಯ ಬರೆಯಲಾಗಿದೆ. ಹುಡುಗಿಯರನ್ನು ನೋಡಿದಾಗ ಗಂಡಸರು ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಗಂಡಸರೆಲ್ಲರೂ ಕಾಮುಕ ಬುದ್ಧಿಯವರು ಎಂಬರ್ಥ ಬರುವ ರೀತಿಯಲ್ಲಿ ಈ ಹಾಡಿನ ಸಾಹಿತ್ಯ ಇದೆ ಎಂದು ಕೆಲವರು ಆರೋಪಿಸಿದ್ದಾರೆ. ಹಾಗಾಗಿ, ಆಂಧ್ರ ಪ್ರದೇಶದಲ್ಲಿ ಪುರುಷರ ಸಂಘಟನೆಯೊಂದು ‘ಪುಷ್ಪ’ ಚಿತ್ರತಂಡದ ವಿರುದ್ಧ ಕೇಸ್ ದಾಖಲಿಸಿದೆ.
ಈ ಹಾಡನ್ನು ಬ್ಯಾನ್ ಮಾಡಬೇಕು ಎಂದು ಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ. ಈ ಹಾಡಿನ ತೆಲುಗು ವರ್ಷನ್ ಈಗಾಗಲೇ ಯೂಟ್ಯೂಬ್ನಲ್ಲಿ 2.6 ಕೋಟಿಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ತೆಲುಗಿನಲ್ಲಿ ಚಂದ್ರಬೋಸ್ ಸಾಹಿತ್ಯ ಬರೆದಿದ್ದು, ಇಂದ್ರವತಿ ಚೌಹಾಣ್ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಕಂಠದಲ್ಲಿ ಕನ್ನಡದ ಗೀತೆ ಮೂಡಿಬಂದಿದೆ. ದೇವಿಶ್ರೀ ಪ್ರಸಾದ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಡಿ.17ರಂದು ‘ಪುಷ್ಪ’ ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ರಕ್ತಚಂದನ ಕಳ್ಳಸಾಗಣೆ ಕಥೆಯನ್ನು ಒಳಗೊಂಡಿರುವ ‘ಪುಷ್ಪ’ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ, ಫಹಾದ್ ಫಾಸಿಲ್ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
Samantha: ಏಕಾಏಕಿ ಆಸ್ಪತ್ರೆಗೆ ತೆರಳಿದ ಸಮಂತಾ; ಅಭಿಮಾನಿಗಳಲ್ಲಿ ಆತಂಕದ ಛಾಯೆ
Rashmika Mandanna: ‘ಪುಷ್ಪ’ ಚಿತ್ರ ತಂಡದ ನಡೆಯಿಂದ ಚಿಂತೆಗೆ ಒಳಗಾದ ರಶ್ಮಿಕಾ ಮಂದಣ್ಣ?