ಮೋಸ ಮಾಡಿದ್ರಾ ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರನ್? ಕೇಸ್ ಹಾಕಿದ ಪೊಲೀಸರು

ಹಣಕ್ಕಾಗಿ ರವೀಂದರ್ ಅವರನ್ನು ಮಹಾಲಕ್ಷ್ಮಿ ಮದುವೆಯಾದರು ಎಂದು ಟೀಕಿಸಲಾಗಿತ್ತು. ಈಗ ರವೀಂದರ್​ ವಿರುದ್ಧ ಚೆನ್ನೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಮುಖ್ಯ ಕಾರಣವೂ ಇದೆ.

ಮೋಸ ಮಾಡಿದ್ರಾ ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರನ್? ಕೇಸ್ ಹಾಕಿದ ಪೊಲೀಸರು
ರವೀಂದರ್​-ಮಹಾಲಕ್ಷ್ಮಿ

Updated on: Jul 14, 2023 | 11:32 AM

ಕಾಲಿವುಡ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrasekaran) ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವರ್ಷದ ಹಿಂದೆ ಕಿರುತೆರೆ ನಟಿ ಮಹಾಲಕ್ಷ್ಮಿ ಶಂಕರ್ (Mahalakshmi Shankar) ಅವರನ್ನು ವಿವಾಹವಾದರು. ಮದುವೆಯಾದಾಗಿನಿಂದಲೂ ಅವರ ಹೆಸರು ಚರ್ಚೆಯಲ್ಲಿದೆ. ಮದುವೆ ಬಳಿಕ ಇಬ್ಬರನ್ನೂ ಸಖತ್ ಟ್ರೋಲ್ ಮಾಡಲಾಗಿತ್ತು. ಅನೇಕರು ನಿರ್ಮಾಪಕನಿಗೆ ಬಾಡಿ ಶೇಮಿಂಗ್ ಮಾಡಿ ಕಮೆಂಟ್ ಹಾಕಿದ್ದರು. ಹಣಕ್ಕಾಗಿ ರವೀಂದರ್ ಅವರನ್ನು ಮಹಾಲಕ್ಷ್ಮಿ ಮದುವೆಯಾದರು ಎಂದು ಟೀಕಿಸಲಾಗಿತ್ತು. ಈಗ ಸಿನಿಮಾವೊಂದಕ್ಕೆ ಸಂಬಂಧಿಸಿದಂತೆ ರವೀಂದರ್​ ವಿರುದ್ಧ ಚೆನ್ನೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವೀಂದರ್ ಚಂದ್ರಶೇಖರನ್ ಈಗಾಗಲೇ ಹಲವು ಚಿತ್ರಗಳಿಗೆ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ ಅಮೆರಿಕದಲ್ಲಿ ನೆಲೆಸಿರುವ ವಿಜಯ್ ಎಂಬ ವ್ಯಕ್ತಿಯ ಜೊತೆ ರವೀಂದರ್ ಸಂಪರ್ಕದಲ್ಲಿದ್ದರು. ‘ಸಿನಿಮಾ ಒಂದನ್ನು ನಿರ್ಮಿಸಲಾಗುತ್ತಿದ್ದು, ಅದಕ್ಕೆ ಹಣ ಹೂಡಿ. ಸಿನಿಮಾ ಉತ್ತಮ ಲಾಭ ತಂದುಕೊಡುತ್ತದೆ’ ಎಂದು ವಿಜಯ್​ಗೆ ರವೀಂದರ್ ಪುಸಲಾಯಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ವಿಜಯ್ ಅವರು 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ, ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆದರೂ ರವೀಂದರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ವಿಜಯ್ ಪೊಲೀಸರ ಮೊರೆ ಹೋಗಿದ್ದಾರೆ.

‘ರವೀಂದರ್ ಹಣ ಕೇಳಿದಾಗ ಅವಮಾನ ಮಾಡುತ್ತಿದ್ದಾರೆ. ಇದೀಗ ನನ್ನ ಮೊಬೈಲ್ ಸಂಖ್ಯೆ ಕೂಡ ಬ್ಲಾಕ್ ಮಾಡಿದ್ದಾರೆ’ ಎಂದು ನಿರ್ಮಾಪಕನ ವಿರುದ್ಧ ವಿಜಯ್ ಪ್ರಕರಣ ದಾಖಲಿಸಿದ್ದಾರೆ. ಈ ಮೊದಲು ಕೂಡ ವಿಜಯ್ ಅವರು ರವೀಂದರ್ ವಿರುದ್ಧ ಕೇಸ್ ದಾಖಲಿಸಿದ್ದರು. ಆದರೆ, ಪ್ರಕರಣ ಹಿಂಪಡೆದರೆ ಹಣ ನೀಡುವುದಾಗಿ ರವೀಂದರ್ ಭರವಸೆ ನೀಡಿದ್ದರು. ಹೀಗಾಗಿ ವಿಜಯ್ ಕೇಸ್ ವಾಪಸ್ ತೆಗೆದುಕೊಂಡಿದ್ದರು. ಆದರೆ, ಅವರು ಹಣ ನೀಡದ ಕಾರಣ ವಿಜಯ್ ಮತ್ತೊಮ್ಮೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೇಂದ್ರ ಅಪರಾಧ ವಿಭಾಗದ ಪೊಲೀಸರು ರವೀಂದರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’; ಲೈವ್​ ಬಂದು ಟ್ರೋಲಿಗರ ಬಳಿ ಮನವಿ ಮಾಡಿಕೊಂಡ ಮಹಾಲಕ್ಷ್ಮಿ

ರವೀಂದರ್ ಚಂದ್ರಶೇಖರನ್ ಮತ್ತು ನಟಿ ಮಹಾಲಕ್ಷ್ಮಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಕಳೆದ ಆಗಸ್ಟ್​ನಲ್ಲಿ ಮದುವೆ ಆಗುವ ಮೂಲಕ ಇಬ್ಬರೂ ಸರ್ಪ್ರೈಸ್​ ನೀಡಿದ್ದರು. ಮಹಾಲಕ್ಷ್ಮಿ ಹಾಗೂ ರವೀಂದರ್​ ಮಧ್ಯೆ 6 ವರ್ಷಗಳ ಅಂತರ ಇದೆ.  ಪತ್ನಿ ಮಹಾಲಕ್ಷ್ಮಿಗೆ ಪತಿ ಕಡೆಯಿಂದ ದುಬಾರಿ ಗಿಫ್ಟ್​ಗಳನ್ನು ಸಿಕ್ಕಿದೆ ಎನ್ನಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:12 am, Fri, 14 July 23