ಪ್ರಭಾಸ್ ಜೊತೆ ನಟಿಸೋ ಆಸೆ ಇದೆಯಾ? ಇಲ್ಲಿದೆ ‘ಸ್ಪಿರಿಟ್’ ತಂಡದ ಅವಕಾಶ

ಪ್ರಭಾಸ್ ಅಭಿನಯದ ಸಿನಿಮಾದಲ್ಲಿ ತಾವು ಕೂಡ ನಟಿಸಬೇಕು ಎಂಬ ಆಸೆ ಅನೇಕರಿಗೆ ಇದೆ. ಅಂಥ ಕಲಾವಿದರಿಗೆ ‘ಸ್ಪಿರಿಟ್’ ಚಿತ್ರತಂಡ ಈ ಅವಕಾಶ ನೀಡುತ್ತಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ‘ಭದ್ರಕಾಳಿ ಪಿಕ್ಚರ್ಸ್’ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ನೋಡಿ ಹಲವರ ಮನದಲ್ಲಿ ಆಸೆ ಚಿಗುರಿದೆ.​

ಪ್ರಭಾಸ್ ಜೊತೆ ನಟಿಸೋ ಆಸೆ ಇದೆಯಾ? ಇಲ್ಲಿದೆ ‘ಸ್ಪಿರಿಟ್’ ತಂಡದ ಅವಕಾಶ
Prabhas

Updated on: Feb 12, 2025 | 9:24 PM

ನಟ ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಿಂದ ಯಶಸ್ಸು ಕಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾದ ಬಿಡುಗಡೆಗೆ ಪ್ರೇಕ್ಷಕರು ಕಾದಿದ್ದಾರೆ. ಅದರ ಜೊತೆಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿರುವ ‘ಸ್ಪಿರಿಟ್’ ಸಿನಿಮಾದಲ್ಲೂ ಪ್ರಭಾಸ್ ನಟಿಸಲಿದ್ದಾರೆ. ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ಆದ್ದರಿಂದ ನಿರೀಕ್ಷೆ ಜೋರಾಗಿದೆ. ಈ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಆ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹಂಚಿಕೊಳ್ಳಲಾಗಿದೆ.

‘ಭದ್ರಕಾಳಿ ಪಿಕ್ಚರ್ಸ್’ ಮತ್ತು ‘ಟಿ ಸಿರೀಸ್’ ಮೂಲಕ ‘ಸ್ಪಿರಿಟ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ನಿರ್ಮಾಣ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಡಿಷನ್ ಬಗ್ಗೆ ವಿವರ ನೀಡಲಾಗಿದೆ. ಸಿನಿಮಾದಲ್ಲಿ ಹಾಗೂ ರಂಗಭೂಮಿಯಲ್ಲಿ ಅನುಭವ ಹೊಂದಿರುವವರಿಗಾಗಿ ‘ಸ್ಪಿರಿಟ್’ ತಂಡ ಹುಡುಕಾಟ ನಡೆಸಿದೆ. ಎಲ್ಲ ವಯೋಮಾನದ ಮಹಿಳೆಯರು ಮತ್ತು ಪುರುಷರು ಆಡಿಷನ್​ಗೆ ತಮ್ಮ ವಿವರಗಳನ್ನು ಕಳಿಸಬಹುದು ಎಂದು ಹೇಳಲಾಗಿದೆ.

ಎರಡು ಫೋಟೋ ಮತ್ತು ಸ್ವ ಪರಿಚಯ ಮಾಡಿಕೊಡುವ 2 ನಿಮಿಷದ ವಿಡಿಯೋವನ್ನು spirit.bhadrakalipictures@gmail.com ಗೆ ಕಳಿಸಿಕೊಡಬೇಕು ಎಂದು ‘ಸ್ಪಿರಿಟ್’ ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದಾರೆ. ಅಂತಿಮವಾಗಿ ಯಾವೆಲ್ಲ ಕಲಾವಿದರಿಗೆ ಆಡಿಷನ್​ನಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ ಹಾಗೂ ಯಾರು ಆಯ್ಕೆ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ಕಣ್ಣಪ್ಪ’ ಸಿನಿಮಾದಿಂದ ಪ್ರಭಾಸ್​ ಲುಕ್ ಬಹಿರಂಗ; ರುದ್ರನಾದ ರೆಬೆಲ್ ಸ್ಟಾರ್

ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ಹಾಗಾಗಿ ‘ಸ್ಪಿರಿಟ್’ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಎಲ್ಲ ಭಾಷೆಗಳಿಂದ ಪ್ರಮುಖ ಕಲಾವಿದರು ನಟಿಸುವ ಸಾಧ್ಯತೆ ಇದೆ. ಅದರ ಜೊತೆಗೆ ಹೊಸ ಕಲಾವಿದರಿಗೂ ಅವಕಾಶ ನೀಡುತ್ತಿರುವುದು ಖುಷಿಯ ವಿಚಾರ. ಪ್ರಭಾಸ್ ನಟನೆಯ ಸಿನಿಮಾದಲ್ಲಿ ತಾವು ಕೂಡ ಬಣ್ಣ ಹಚ್ಚಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಅಂಥವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇದು ಸೂಕ್ತ ಅವಕಾಶ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:23 pm, Wed, 12 February 25