‘ಜನ ನಾಯಗನ್’ ಸಿನಿಮಾಗೆ 12 ಕಡೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ
‘ಜನ ನಾಯಗನ್’ ಚಿತ್ರವನ್ನು 2025ರ ಡಿಸೆಂಬರ್ನಲ್ಲೇ ಸೆನ್ಸಾರ್‌ಗೆ ಸಲ್ಲಿಸಲಾಗಿತ್ತು. ಆದರೆ ಚಿತ್ರದ ಕೆಲವು ದೃಶ್ಯಗಳು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂಬ ದೂರಿನ ಹಿನ್ನೆಲೆಯಲ್ಲಿ ಸೆನ್ಸಾರ್ ಪ್ರಮಾಣಪತ್ರ ನೀಡಲು ಮಂಡಳಿ ನಿರಾಕರಿಸಿತ್ತು. 7 ತಿಂಗಳ ಬಳಿಕ ಕಡೆಗೂ ಈ ಸಿನಿಮಾಗೆ ಪ್ರಮಾಣಪತ್ರ ನೀಡಲಾಗಿದೆ. ಹಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಗಿದೆ.

ಮುಖ್ಯಾಂಶಗಳು
- ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಪೂರ್ಣ.
- ಒಟ್ಟು 12 ಕಡೆಗಳಲ್ಲಿ ಬದಲಾವಣೆ ಮಾಡುವಂತೆ ಸಿಬಿಎಫ್ಸಿ ಸೂಚಿಸಿದೆ.
- ಇದು ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಎಂಬುದು ವಿಶೇಷ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ರಾಜಕೀಯ ಥ್ರಿಲ್ಲರ್ ಸಿನಿಮಾ ‘ಜನ ನಾಯಗನ್’ (Jana Nayagan) ಕೊನೆಗೂ ತನ್ನ ಅತಿ ದೊಡ್ಡ ಅಡಚಣೆಯನ್ನು ದಾಟಿದೆ. ಹಲವು ತಿಂಗಳುಗಳ ಕಾಲ ವಿಳಂಬವಾಗಿದ್ದ ವಿಜಯ್ ಅವರ ವೃತ್ತಿಜೀವನದ ಈ ಕೊನೆಯ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕೊನೆಗೂ ‘ಎ’ ಪ್ರಮಾಣಪತ್ರ ನೀಡಿದ್ದು, ಈ ತಿಂಗಳ ಕೊನೆಯಲ್ಲಿ ಸಿನಿಮಾ ತೆರೆಕಾಣಲು ಹಾದಿ ಸುಗಮವಾಗಿದೆ. ಆದರೆ, ಚಿತ್ರಕ್ಕೆ ಕ್ಲಿಯರೆನ್ಸ್ ನೀಡುವ ಮುನ್ನ ಸೆನ್ಸಾರ್ ಮಂಡಳಿಯು ಚಿತ್ರತಂಡಕ್ಕೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಸೂಚಿಸಿದೆ.
ಟಿವಿಕೆ ಪಕ್ಷದ ಹೆಸರು, ಅಂಬೇಡ್ಕರ್ ಉಲ್ಲೇಖಕ್ಕೆ ಕತ್ತರಿ:
ಮಾಧ್ಯಮ ವರದಿಗಳ ಪ್ರಕಾರ, ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿ ಒಟ್ಟು 12 ಕಡೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸೂಚಿಸಿದೆ. ಇದರಲ್ಲಿ ರಾಜಕೀಯ ಉಲ್ಲೇಖಗಳು, ಧಾರ್ಮಿಕ ಪದಗಳು ಹಾಗೂ ಅತ್ಯಂತ ಸೂಕ್ಷ್ಮ ಎನಿಸುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈ ಎಲ್ಲ ಬದಲಾವಣೆಗಳನ್ನು ಮಾಡಿದ ನಂತರವೇ ಚಿತ್ರತಂಡಕ್ಕೆ ಪ್ರಮಾಣಪತ್ರ ನೀಡಿದೆ.
ಟಿವಿಕೆ ಹೆಸರು ಇರುವ ಡೈಲಾಗ್ ಮ್ಯೂಟ್:
ವಿಜಯ್ ಅವರ ರಾಜಕೀಯ ಪಕ್ಷವಾದ ‘ಟಿವಿಕೆ’ಗೆ ಸಂಬಂಧಿಸಿದ ಎಲ್ಲಾ ದೃಶ್ಯ ಹಾಗೂ ಸಂಭಾಷಣೆಗಳನ್ನು ಸಂಪೂರ್ಣವಾಗಿ ಮ್ಯೂಟ್ ಮಾಡಲು ಅಥವಾ ಬದಲಾಯಿಸಲು ಸೂಚಿಸಲಾಗಿದೆ. ಭಾರತದ ರಾಷ್ಟ್ರಧ್ವಜವನ್ನು ತೋರಿಸುವ ಒಂದು ಪ್ರಮುಖ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಲಾಗಿದೆ. ಸೆನ್ಸಾರ್ ಮಂಡಳಿಯ ಸೂಚನೆಯಂತೆ ಈ ಬದಲಾವಣೆಗಳನ್ನು ಮಾಡುವುದು ಅನಿವಾರ್ಯ ಆಗಿದೆ.
ಅಂಬೇಡ್ಕರ್ ಭಾವಚಿತ್ರ ಬದಲಾವಣೆ:
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಪುಸ್ತಕದ ಮುಖಪುಟವನ್ನು ಬದಲಾಯಿಸಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಅಲ್ಲದೇ, ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವಿವಾದಾತ್ಮಕ ಸಂಭಾಷಣೆಯನ್ನು ತಿದ್ದಲು ನಿರ್ದೇಶಿಸಲಾಗಿದೆ. ಚಿತ್ರದಲ್ಲಿ ಬರುವ ಕೆಲವು ಧಾರ್ಮಿಕ ಪದಗಳನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆ.
ಇದನ್ನೂ ಓದಿ: ‘ಜನ ನಾಯಗನ್’ ನಿರ್ಮಾಪಕರಿಗೆ ಪ್ರಮುಖ ಜವಾಬ್ದಾರಿ ವಹಿಸಿದ ಸಿಎಂ ವಿಜಯ್
ಸದ್ದಾಂ ಹುಸೇನ್ ಗಲ್ಲು ಶಿಕ್ಷೆ ಹಾಗೂ ಭಾರತಕ್ಕೆ ಸಂಬಂಧಿಸಿದ ಕೆಲವು ಕಟು ಸಂಭಾಷಣೆಗಳನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆ. ಇವುಗಳ ಜೊತೆಗೆ ಹೆಣ್ಣುಮಕ್ಕಳ ಶಾರೀರಿಕ ರಚನೆಯ ಬಗ್ಗೆ ಮಾತನಾಡಿದ ಆಕ್ಷೇಪಾರ್ಹ ಮಾತುಗಳು, ಮಗುವನ್ನು ಸುಡುವ ದೃಶ್ಯವನ್ನು ಕೂಡ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




