ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರಲ್ಲಿ ಮೋಸಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇದನ್ನು ನಿಯಂತ್ರಿಸಲು ಅನೇಕರು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಈಗ ಚಿರಂಜೀವಿ ಅವರ ಹೆಸರಲ್ಲಿ ಈ ರೀತಿಯ ಮೋಸ ಒಂದು ನಡೆದಿದೆ. ಈ ವಿಚಾರ ನಟನ ಗಮನಕ್ಕೂ ಬಂದಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಅವರು ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಮೋಸ ಹೋಗದಂತೆ ಅವರು ಅಭಿಮಾನಿಗಳ ಬಳಿ ಕೋರಿಕೊಂಡಿದ್ದಾರೆ.
ಚಿರಂಜೀವಿ ಅವರು ಸದ್ಯ ಇಂಗ್ಲೆಂಡ್ನಲ್ಲಿದ್ದಾರೆ. ಲಂಡನ್ನಲ್ಲಿರು ಪಾರ್ಲಿಮೆಂಟ್ನಲ್ಲಿ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ಸಿಕ್ಕಿದೆ. ಇದನ್ನು ಸ್ವೀಕರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚಿತ್ರರಂಗ ಹಾಗೂ ಸಾಮಾಜಿಕ ಕೆಲಸಕ್ಕೆ ಅವರು ನೀಡಿದ ಕೊಡುಗೆಯನ್ನು ಆಧರಿಸಿ ಈ ಅವಾರ್ಡ್ ನೀಡಲಾಗಿದೆ.
‘ನನ್ನ ಅಭಿಮಾನಿಗಳೇ, ಇಂಗ್ಲೆಂಡ್ನಲ್ಲಿ ನನ್ನ ಭೇಟಿಗೆ ನೀವು ತೋರುತ್ತಿರುವ ಪ್ರೀತಿ ಹಾಗೂ ವಾತ್ಸಲ್ಯ ನನಗೆ ಖುಷಿ ಕೊಟ್ಟಿದೆ. ಕೆಲವು ವ್ಯಕ್ತಿಗಳು ಅಭಿಮಾನಿಗಳ ಸಭೆಗಳಿಗೆ ಶುಲ್ಕ ವಿಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಈ ನಡವಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಚಿರಂಜೀವಿ, ಪವನ್ ಕಲ್ಯಾಣ್ ಸಹೋದರ ನಾಗಬಾಬು ಆಸ್ತಿ ಎಷ್ಟು?
‘ಯಾರಾದರೂ ಹಣ ಪಾವತಿಸಿದ್ದರೆ ತಕ್ಷಣವೇ ಮರುಪಾವತಿಸಲಾಗುತ್ತದೆ. ದಯವಿಟ್ಟು ಜಾಗರೂಕರಾಗಿರಿ ಮತ್ತು ನಾನು ಈ ರೀತಿಯ ವಿಚಾರಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ನಾವು ಹಂಚಿಕೊಳ್ಳುವ ಪ್ರೀತಿ ಮತ್ತು ವಾತ್ಸಲ್ಯದ ಬಂಧವು ಅಮೂಲ್ಯವಾದುದು. ಇದನ್ನು ಯಾರೂ ಬಿಸ್ನೆಸ್ ಮಾಡಬಾರದು. ನಮ್ಮ ಮಾತುಕತೆ ಶೋಷಣೆಯಿಂದ ಮುಕ್ತವಾಗಿರಿಸಿಕೊಳ್ಳೋಣ’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
ಭಾರತದ ಚಿತ್ರರಂಗದಲ್ಲಿ ಇಂಗ್ಲೆಂಡ್ಗೆ ಹೋಗಿ ಅಲ್ಲಿನ ಪಾರ್ಲಿಮೆಂಟ್ನಲ್ಲಿ ‘ಜೀವಮಾನ ಸಾಧನೆ ಅವಾರ್ಡ್’ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಚಿರಂಜೀವಿ ಅವರು ಪಾತ್ರರಾಗಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಸುರಿಮಳೆ ಹರಿದು ಬಂದಿದೆ.
ಚಿರಂಜೀವಿ ಅವರು ಸದ್ಯ ‘ವಿಶ್ವಂಭರ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ಶೂಟ್ ಪೂರ್ಣಗೊಂಡಿದ್ದು, ಶೀಘ್ರವೇ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಮಲ್ಲಿಡಿ ವಸಿಷ್ಠ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಯತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ