ಅಶ್ಲೀಲ ನೃತ್ಯ, ಕೇತಿಕಾ ಶರ್ಮಾ ಐಟಂ ಹಾಡಿನ ವಿರುದ್ಧ ದೂರು
Ketika Sharma: ನಟಿ ಕೇತಿಕಾ ಶರ್ಮಾ, ಸಖತ್ ಹಾಟ್ ಮತ್ತು ಬೋಲ್ಡ್ ನಟಿಯರಲ್ಲಿ ಒಬ್ಬರು. ಆದರೆ ಅವರ ಈ ಬೋಲ್ಡ್ ತನವೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೇತಿಕಾ ಶರ್ಮಾ ಇತ್ತೀಚೆಗಷ್ಟೆ ಐಟಂ ಹಾಡೊಂದರಲ್ಲಿ ನಟಿಸಿದ್ದರು. ಆ ಹಾಡು ಈಗ ವಿವಾದಕ್ಕೆ ಕಾರಣವಾಗಿದೆ. ಹಾಡಿನ ಬಗ್ಗೆ ತೆಲಂಗಾಣ ಮಹಿಳಾ ಆಯೋಗ ತೀವ್ರ ಆಕ್ರೋಶ ಹೊರಹಾಕಿದೆ. ಎಚ್ಚರಿಕೆಯನ್ನೂ ಸಹ ನೀಡಿದೆ.

ಕನ್ನಡತಿ ಶ್ರೀಲೀಲಾ, ನಟ ನಿತಿನ್ ನಟನೆಯ ತೆಲುಗು ಸಿನಿಮಾ ‘ರಾಬಿನ್ಹುಡ್’ ಇದೇ ಮಾರ್ಚ್ 28ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೆ ಇದೇ ಸಿನಿಮಾದ ಐಟಂ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಯ್ತು. ರಾಬಿನ್ಹುಡ್ ಸಿನಿಮಾದ ಐಟಂ ಹಾಡಿನಲ್ಲಿ ನಟಿ ಕೇತಿಕಾ ಶರ್ಮಾ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾದ ಹಾಡು ಮತ್ತು ಕೇತಿಕಾ ಶರ್ಮಾರ ಡ್ಯಾನ್ಸ್ ಸಖತ್ ವೈರಲ್ ಆಗಿದ್ದವು. ಇದೀಗ ಈ ಹಾಡಿನ ವಿರುದ್ಧ ಮಹಿಳಾ ಆಯೋಗವೂ ಸಹ ಗರಂ ಆಗಿದೆ.
ಕೆಲ ದಿನದ ಹಿಂದೆ ಬಿಡುಗಡೆ ಆದ ಹಾಡಿನಲ್ಲಿ ನಟಿ ಕೇತಿಕಾ ಶರ್ಮಾ, ಮೈಗೆಲ್ಲ ಎಣ್ಣೆ ಬಳಿದುಕೊಂಡು ಕೊರಳಿನ ಸುತ್ತ ಹಲವು ಸುತ್ತು ಮಲ್ಲಿಗೆ ಸುತ್ತಿಕೊಂಡು ಲಂಗವೊಂದನ್ನು ಧರಿಸಿ ಡ್ಯಾನ್ಸ್ ಮಾಡುತ್ತಿದ್ದಾರೆ. ಹಾಡಿನಲ್ಲಿ ‘ಅದಿ ದಾ ಸರ್ಪ್ರೈಜು’ ಎಂಬ ಸಾಲು ಬಂದಾಗ ನಟಿ ಕೇತಿಕಾ ಶರ್ಮಾ ಹಾಕಿರುವ ಹುಕ್ ಸ್ಟೆಪ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ. ಹಾಡಿನ ಸಾಲು ಹಾಗೂ ಅದಕ್ಕೆ ಹಾಕಿರುವ ಸ್ಟೆಪ್ಪು ಒಟ್ಟಿಗೆ ನೋಡಿದಾಗ ಡಬಲ್ ಮೀನಿಂಗ್ ಅರ್ಥ ಬರಲೆಂದೇ ಉದ್ದೇಶಪೂರ್ವಕವಾಗಿ ಕಂಪೋಸ್ ಮಾಡಿರುವ ಡ್ಯಾನ್ಸ್ ಸ್ಟೆಪ್ಪು ಇದೆಂಬುದು ಅರ್ಥವಾಗುತ್ತದೆ. ಡ್ಯಾನ್ಸ್ ಸ್ಟೆಪ್ಪು ಅಶ್ಲೀಲ ಅರ್ಥವನ್ನು ಹೊಮ್ಮಿಸುತ್ತಿದೆ.
‘ಅದಿ ದಾ ಸರ್ಪ್ರೈಜು’ ಹಾಡಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಲವರು ದನಿ ಎತ್ತಿದ್ದಾರೆ. ಮಹಿಳೆಯರನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ, ಅಶ್ಲೀಲವಾಗಿ ನೃತ್ಯ ಮಾಡಲಾಗಿದೆ ಎಂಬ ಆರೋಪಗಳು ಹಾಡಿನ ಮೇಲೆ ಕೇಳಿ ಬಂದಿದ್ದು ಸೈಬರ್ ಪೊಲೀಸರು, ಮಹಿಳಾ ಆಯೋಗದವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಲವು ನೆಟ್ಟಿಗರು ದೂರಿದ್ದಾರೆ.
ಇದನ್ನೂ ಓದಿ:ವೈರಲ್ ಆಗುತ್ತಿದೆ ನಟಿ ಕೇತಿಕಾ ಶರ್ಮಾರ ಸೆಕ್ಸಿ ಡ್ಯಾನ್ಸ್ ಸ್ಟೆಪ್ಪು
ಇದೀಗ ತೆಲಂಗಾಣ ಮಹಿಳಾ ಆಯೋಗವು ಚಿತ್ರತಂಡಕ್ಕೆ ಮತ್ತು ಇಡೀ ತೆಲುಗು ಚಿತ್ರೋದ್ಯಮಕ್ಕೆ ಎಚ್ಚರಿಕೆ ನೀಡಿದ್ದು, ಐಟಂ ಸಾಂಗ್ ಹೆಸರಲ್ಲಿ ಅಶ್ಲೀಲ ನೃತ್ಯ ಮಾಡುವುದು, ಮಹಿಳೆಯನ್ನು ಭೋಗದ ವಸ್ತುವಾಗಿ ತೋರಿಸುವುದು, ಅತಿಯಾದ ಗ್ಲಾಮರ್ ಪ್ರದರ್ಶನ, ಮಹಿಳೆಯನ್ನು ಆಬ್ಜೆಕ್ಟಿಫೈ ಮಾಡುವ ರೀತಿ ತೋರಿಸುವುದು ಮಾಡಿದರೆ ದೂರು ದಾಖಲಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆದ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾದಲ್ಲಿ ಊರ್ವಶಿ ರೌಟೆಲಾ, ಬಾಲಕೃಷ್ಣ ಡ್ಯಾನ್ಸ್ ಮಾಡಿದ್ದ ‘ದಬಿಡಿ-ದಿಬಿಡಿ’ ಹಾಡಿನಲ್ಲೂ ಸಹ ಒಂದು ಸ್ಟೆಪ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ