ಚಿರಂಜೀವಿ, ಪವನ್ ಕಲ್ಯಾಣ್ ಸಹೋದರ ನಾಗಬಾಬು ಆಸ್ತಿ ಎಷ್ಟು?
Pawan Kalyan-Chiranjeevi: ನಟ, ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಹಿರಿಯ ಸಹೋದರ, ಮೆಗಾಸ್ಟಾರ್ ಚಿರಂಜೀವಿಯ ಕಿರಿಯ ಸಹೋದರ ನಾಗಬಾಬು, ತಮ್ಮ ಸಹೋದರರಂತೆ ದೊಡ್ಡ ಸ್ಟಾರ್ ಅಲ್ಲದಿದ್ದರೂ ಸಾಕಷ್ಟು ಹಣವಂತರೆ. ಇದೀಗ ಎಂಎಲ್ಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ನಾಗಬಾಬು ಆಸ್ತಿ ವಿವರ ಸಲ್ಲಿಕೆ ಮಾಡಿದ್ದು, ಅವರ ಆಸ್ತಿ ವಿವರ ಇಲ್ಲಿದೆ.

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ತೆಲುಗು ರಾಜ್ಯಗಳ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಸಹೋದರ ಪವನ್ ಕಲ್ಯಾಣ್ (Pawan Kalyan) ಬಳಿ ಸಹ ಕೋಟ್ಯಂತರ ಆಸ್ತಿ ಇದೆ. ಈ ಇಬ್ಬರು ಸಹ ತೆಲುಗು ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟರು ಎಂದು ಗುರುತಿಸಿಕೊಂಡಿದ್ದಾರೆ. ಈ ಇಬ್ಬರಿಗೂ ಒಬ್ಬ ಸಹೋದರ ಇದ್ದಾರೆ ಅವರ ಹೆಸರು ನಾಗಬಾಬು. ನಾಗಬಾಬು, ಚಿರಂಜೀವಿಗೆ ಕಿರಿಯ ಸಹೋದರ, ಪವನ್ ಕಲ್ಯಾಣ್ಗೆ ಹಿರಿಯ ಸಹೋದರ. ನಾಗಬಾಬು ಸಹ ನಟರೇ ಆದರೂ ಅಣ್ಣ ಮತ್ತು ತಮ್ಮನಂತೆ ಸ್ಟಾರ್ ನಟರು ಅಲ್ಲ. ಪವನ್ ಕಲ್ಯಾಣ್ರ ಜನಸೇನಾ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದ ನಾಗಬಾಬುಗೆ ಈಗ ಎಂಎಲ್ಸಿ ಸ್ಥಾನವನ್ನು ‘ಉಡುಗೊರೆ’ಯಾಗಿ ನೀಡಲಾಗುತ್ತಿದೆ.
ನಾಗಬಾಬು ಎಂಎಲ್ಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ನಿಯಮದಂತೆ ಆಸ್ತಿ ವಿವರವನ್ನು ಸಹ ಸಲ್ಲಿಕೆ ಮಾಡಿದ್ದಾರೆ. ನಾಗಬಾಬು ಆಸ್ತಿ ವಿವರದಲ್ಲಿ ಕೆಲ ಆಸಕ್ತಿಕರ ಅಂಶಗಳು ಹೊರಬಂದಿವೆ. ನಾಗಬಾಬು ಅವರು, ಅಣ್ಣ ಮತ್ತು ತಮ್ಮ ಇಬ್ಬರಿಂದಲೂ ಸಾಲ ಪಡೆದಿದ್ದಾರೆ. ಆದರೆ ಆ ಸಾಲ ಬಹಳ ಹೆಚ್ಚೇನೂ ಅಲ್ಲ. ಬಹಳ ಕಡಿಮೆ ಮೊತ್ತದ ಸಾಲ ಪಡೆದಿದ್ದಾರೆ. ದೊಡ್ಡ ಸ್ಟಾರ್ ನಟ ಆಗಿರದೇ ಇದ್ದರೂ ಸಹ ಆಸ್ತಿ ಕಡಿಮೆ ಮಾಡಿಲ್ಲ ನಾಗಬಾಬು. ಇಲ್ಲಿದೆ ಅವರ ಆಸ್ತಿ ವಿವರ.
ನಾಗಬಾಬು ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 70 ಕೋಟಿ. ನಾಗಬಾಬು ಬಳಿ 55.37 ಕೋಟಿ ಮೊತ್ತದ ಮ್ಯೂಚ್ಯುಲ್ ಫಂಡ್ ಮತ್ತು ಬಾಂಡ್ಗಳಿವೆ. ಇದೇ ಅವರ ಬಹುದೊಡ್ಡ ಆಸ್ತಿ. ಕೈಯಲ್ಲಿ 21.81 ಲಕ್ಷ ರೂಪಾಯಿ ನಗದು ಹಣ ಇದೆ. ಬೇರೆ ಬೇರೆಯವರಿಗೆ 1.03 ಕೋಟಿ ರೂಪಾಯಿ ಸಾಲವನ್ನು ನಾಗಬಾಬು ನೀಡಿದ್ದಾರೆ. ನಾಗಬಾಬು ಬಳಿ 68.27 ಲಕ್ಷ ರೂಪಾಯಿ ಬೆಲೆಯ ಐಶಾರಾಮಿ ಬೆಂಜ್ ಕಾರು ಇದೆ. 11 ಲಕ್ಷ ರೂಪಾಯಿ ಬೆಲೆಯ ಸರಳವಾದ ಹ್ಯೂಂಡಾಯ್ ಕಾರು ಸಹ ಇದೆ.
ಇದನ್ನೂ ಓದಿ:ನಟ ಪೋಸಾನಿ ಕೃಷ್ಣ ಮುರಳಿ ಬಂಧನ, ಪವನ್ ಕಲ್ಯಾಣ್ ಕೈವಾಡ?
ನಾಗಬಾಬು ಮತ್ತು ಅವರ ಪತ್ನಿಯ ಬಳಿ 724 ಗ್ರಾಂ ಬಂಗಾರ, 16 ಕ್ಯಾರೆಟ್ ವಜ್ರ, ಕೆಲ ಕೆಜಿ ಬೆಳ್ಳಿ ಇದ್ದು ಇವುಗಳ ಒಟ್ಟು ಮೌಲ್ಯ 57.99 ಲಕ್ಷ ರೂಪಾಯಿಗಳು. ಇನ್ನು ಸ್ಥಿರಾಸ್ಥಿಯ ವಿಷಯಕ್ಕೆ ಬಂದರೆ ಹೈದರಾಬಾದ್ನಲ್ಲೇ ನಾಗಬಾಬು ಹೆಸರಲ್ಲಿ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಇದರ ಹೊರತಾಗಿ ರಂಗಾರೆಡ್ಡಿ ಜಿಲ್ಲೆಯಲ್ಲಿ 5.30 ಕೋಟಿ ಮೌಲ್ಯದ 2.39 ಎಕರೆ ಜಮೀನು. ಮದಕ ಜಿಲ್ಲೆಯಲ್ಲಿ 80 ಲಕ್ಷ ಮೌಲ್ಯದ 8.28 ಎಕರೆ ಜಮೀನು ಇದೆ. ಹೈದರಾಬಾದ್ ಹೊರವಲಯದಲ್ಲಿ ಐಶಾರಾಮಿ ರೆಸಾರ್ಟ್ ಅನ್ನು ಸಹ ನಾಗಬಾಬು ಹೊಂದಿದ್ದಾರೆ.
ನಾಗಬಾಬುಗೆ ಕೆಲ ಸಾಲಗಳು ಸಹ ಇವೆ. 56.97 ಲಕ್ಷ ಹೌಸಿಂಗ್ ಲೋನ್ ಅನ್ನು ಬ್ಯಾಂಕ್ನಿಂದ ಪಡೆದಿದ್ದಾರೆ. 7.54 ಲಕ್ಷ ರೂಪಾಯಿ ಕಾರ್ ಲೋನ್ ಸಹ ಪಡೆದುಕೊಂಡಿದ್ದಾರೆ. ಇದರ ಹೊರತಾಗಿ ಅಣ್ಣ ಚಿರಂಜೀವಿಯಿಂದ 28.48 ಲಕ್ಷ ಹಾಗೂ ಪವನ್ ಕಲ್ಯಾಣ್ ಅವರಿಂದ 6.90 ಲಕ್ಷ ರೂಪಾಯಿ ಸಾಲವನ್ನು ನಾಗಬಾಬು ಪಡೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ